ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ: ಜನಪದರ ಆರಾಧ್ಯ ದೈವ ‘ಜೋಕುಮಾರಸ್ವಾಮಿ’

ಗಂಗಾಮತಸ್ಥ ಸಮುದಾಯದ ಮಹಿಳೆಯರಿಂದ ವಿಶಿಷ್ಟ ಆಚರಣೆ
Published : 11 ಸೆಪ್ಟೆಂಬರ್ 2024, 6:28 IST
Last Updated : 11 ಸೆಪ್ಟೆಂಬರ್ 2024, 6:28 IST
ಫಾಲೋ ಮಾಡಿ
Comments

ಚಳ್ಳಕೆರೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾದ್ರಪದ ಮಾಸದಲ್ಲಿ ‘ಕೃಷಿ ದೈವ’ ಜೋಕುಮಾರಸ್ವಾಮಿ ವಿಶಿಷ್ಟ ಆಚರಣೆ ನಡೆಯುತ್ತದೆ.

ಮುಂಗಾರು ಮಳೆ ಸುರಿದು ಇಳೆಯ ಬರ ನಿವಾರಣೆಯಾಗಲಿ ಎಂಬ ನಂಬಿಕೆಯಿಂದ ಗ್ರಾಮೀಣರು ಈ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಜೋಕುಮಾರಸ್ವಾಮಿಯನ್ನು ಆರಾಧ್ಯ ದೈವ ಎಂದು ನಂಬಿರುವ ಗಂಗಾಮತಸ್ಥ (ಸುಣ್ಣಗಾರ) ಸಮುದಾಯದ  ಮಹಿಳೆಯರು ತೊಡಗಿಸಿಕೊಳ್ಳುವುದು ವಿಶೇಷ.

ಗ್ರಾಮೀಣ ಪ್ರದೇಶದ ನಾಲ್ಕೈದು ಮಹಿಳೆಯರು ಸೇರಿ ಕೆರೆಯ ದಡದಿಂದ ಕಪ್ಪು ಮಣ್ಣು ತಂದು, ಬಳಿಕ ಕೂದಲಿನಿಂದ ಸ್ಫುರದ್ರೂಪಿ, ಅಂಗಸೌಷ್ಟವ, ಹೊಳೆಯುವ ದೊಡ್ಡ ಕಣ್ಣು, ವಿಭೂತಿ, ಹುರಿಕಟ್ಟಾದ ದೊಡ್ಡಮೀಸೆ, ಬಾಯಿ ಹೊಂದಿದ ಜೋಕುಮಾರಸ್ವಾಮಿಯ ಮೂರ್ತಿ ತಯಾರಿಸುತ್ತಾರೆ. ಕಣ್ಣಿಗೆ ಕವಡೆಯನ್ನು ಚುಚ್ಚಿ ಅವು ಎದ್ದು ಕಾಣುವಂತೆ ಮಾಡುತ್ತಾರೆ.

ಬೇವಿನ ಸೊಪ್ಪು, ಸೇವಂತಿಗೆ, ತಂಗಟೆ, ಮಲ್ಲಿಗೆ, ಕನಕಾಂಬರ ಸೇರಿದಂತೆ ಹಲವು ಬಗೆಯ ಹೂವುಗಳಿಂದ ಅಲಂಕರಿಸಿದ ಮೂರ್ತಿಯನ್ನು ಬಿದಿರಿನ ಹೊಸ ಬುಟ್ಟಿಯಲ್ಲಿ ಕೂರಿಸಿ ಅರಿಶಿಣ-ಕುಂಕುಮದಿಂದ ಜೋಕುಮಾರಸ್ವಾಮಿ ಮೂರ್ತಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸುತ್ತಾರೆ.

ನಂತರ ಮೂರ್ತಿಯನ್ನು ಹೊತ್ತು ಜೋಕುಮಾರಸ್ವಾಮಿ ದೈವದ ನೆಪದಲ್ಲಿ ಮಳೆರಾಯ ಮತ್ತು ಫಲವಂತಿಕೆ ಬಗೆಗಿನ ಪದ ಹಾಡಿಕೊಂಡು 9 ದಿನಗಳವರೆಗೆ ಊರೂರು ಅಲೆಯುವುದು ವಾಡಿಕೆ.

ದೈವದ ಬುಟ್ಟಿಗೆ ನೀರು ಹಾಕುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿ ಜೋಕುಮಾರಸ್ವಾಮಿ ಹೊತ್ತು ತರುವ ಮಹಿಳೆಯರಿಗೆ, ಗ್ರಾಮೀಣ ಜನರು ರಾಗಿ, ಜೋಳ, ಹುಣಸೆಹಣ್ಣು, ಬೆಲ್ಲ, ಉಪ್ಪು, ಒಣ ಮೆಣಸಿಕಾಯಿ, ಕೊಬ್ಬರಿ ಕೊಟ್ಟು ಕಳುಹಿಸುವ ಪದ್ಧತಿ ಇದೆ.

ಜೋಕುಮಾರಸ್ವಾಮಿ ಗಂಗಾಮತಸ್ಥ ಸಮುದಾಯದಲ್ಲಿ ಜನಿಸಿದವನು ಎಂಬುದು ಜನಪದರ ನಂಬಿಕೆ. ಈ ಕಾರಣ ಮಡಿವಾಳರು, ತಳವಾಳರು, ಸುಣ್ಣಗಾರ, ದಲಿತ ಸಮುದಾಯದವರು ಜೋಕುಮಾರಸ್ವಾಮಿ ಪೂಜಾ ಆಚರಣೆಯನ್ನು ಪ್ರತಿ ವರ್ಷ ತಪ್ಪದೇ ನಡೆಸಿಕೊಂಡು ಬರುತ್ತಾರೆ.

‘ಗಣೇಶ ನೀರಿಗೆ ಬಿದ್ದರೂ ಬರ ಹೋಗಲ್ಲ. ಜೋಕುಮಾರಸ್ವಾಮಿಯನ್ನು ಆರಾಧಿಸಿ ನೀರಿಗೆ ಹಾಕುವ ಮೂಲಕ ಆ ದೈವವನ್ನು ದೇವಲೋಕಕ್ಕೆ ಕಳುಹಿಸಿ ಕೊಟ್ಟರೆ ಮಳೆ ಬಂದೇ ಬರುತ್ತದೆ. ಇದರಿಂದ ಕೃಷಿ ಸಮೃದ್ಧವಾಗುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದ ಜನರದ್ದು. ಈ ಹಿನ್ನೆಲೆಯಲ್ಲಿ ಈ ಆಚರಣೆ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಬೆಳಗೆರೆ ಗ್ರಾಮದ ರೈತ ರಾಜಣ್ಣ.

ಮಳೆಯಿಂದ ಭೂಮಾತೆ ಸಂತೃಪ್ತಿ ಪಡುತ್ತಾಳೆ. ಹಕ್ಕಿಗಳಿಂದ ಬೆಳೆ ರಕ್ಷಣೆ ಮತ್ತು ಮನುಷ್ಯರಿಗೆ ಬರುವ ರೋಗ ಸೇರಿದಂತೆ ಹಲವು ಸಂಕಷ್ಟಗಳನ್ನು ಜೋಕುಮಾರಸ್ವಾಮಿ ತಡೆಯುತ್ತಾನೆ ಎಂಬ ನಂಬಿಕೆಯಲ್ಲಿ ಜನಪದರು ಈ ಆಚರಣೆ ನಡೆಸುತ್ತಾರೆ ಎಂದು ಅವರು ವಿವರಿಸಿದರು.

ಜನಪದ ದೈವ ಜೋಕುಮಾರಸ್ವಾಮಿ ಹೊತ್ತು ಹಾಡು ಹೇಳುತ್ತಿರುವ ಮಹಿಳೆಯರು
ಜನಪದ ದೈವ ಜೋಕುಮಾರಸ್ವಾಮಿ ಹೊತ್ತು ಹಾಡು ಹೇಳುತ್ತಿರುವ ಮಹಿಳೆಯರು

ಭಾದ್ರಪದ ಮಾಸದಲ್ಲಿ ನಡೆಯುವ ಆಚರಣೆ ಸಮೃದ್ಧ ಮಳೆಯಾಗಲಿ ಎಂಬ ಹರಕೆಯ ಆಚರಣೆ 9 ದಿನ ಸಂಪ್ರದಾಯ ನಡೆಸುವ ಗಂಗಾಮತಸ್ಥ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT