ಚಿತ್ರದುರ್ಗ: ಆರೂಢ ಪರಂಪರೆಯ ಕಬೀರಾನಂದ ಆಶ್ರಮದಲ್ಲಿ ಶಿವನಾಮ ಸಪ್ತಾಹದ 93ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶನಿವಾರ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ಅವರ ಪಲ್ಲಕ್ಕಿ ಹಾಗೂ ಜಾನಪದ ಉತ್ಸವ ಜರುಗಿತು.
ಅಲಂಕೃತಗೊಂಡ ಪಲ್ಲಕ್ಕಿಯೊಳಗೆ ಶಿವಲಿಂಗಾನಂದ ಸ್ವಾಮೀಜಿ ಆಸೀನರಾಗುತ್ತಿದ್ದಂತೆ ಉತ್ಸವಕ್ಕೆ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್. ಅನಿತ್ ಕುಮಾರ್ ಮಠದ ಆವರಣದಲ್ಲಿ ಚಾಲನೆ ನೀಡಿದರು. ಬಳಿಕ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಕೀಲು ಕುದುರೆ, ತಮಟೆ, ಜಾಂಜ್ ನೃತ್ಯ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ಕಹಳೆ, ಉರಿಮೆ, ಛತ್ರಿ ಚಾಮರ ಸೇರಿ ವಿವಿಧ ಜಾನಪದ ಕಲಾ ತಂಡಗಳು ಜನರ ಗಮನ ಸೆಳೆದವು. ಕಬೀರಾನಂದ ಸ್ವಾಮಿ ಶಾಲೆಯ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯದ ಉಡುಗೆ ತೊಟ್ಟು ಭಾವೈಕ್ಯ ಮೆರೆದರು.
ಆರತಿ ತಟ್ಟೆ ಹಿಡಿದ ಮಹಿಳೆಯರು, ಭಜನೆ ಕಲಾವಿದರು ಮೆರವಣಿಗೆ ಆರಂಭದಿಂದ ಕೊನೆಯವರೆಗೂ ಭಜನೆ ಹಾಡುತ್ತಾ ಸಾಗಿದರು. ಅದಕ್ಕೆ ಕೆಲವರು ಹಿಮ್ಮೇಳ ನುಡಿಸುತ್ತಿದ್ದರು. ಉತ್ಸವ ಸಾಗಿದ ವಿವಿಧ ಮಾರ್ಗಗಳಲ್ಲಿ ಸ್ವಾಮೀಜಿ ಬಳಿಗೆ ಬಂದ ಭಕ್ತರು ಆಶೀರ್ವಾದ ಪಡೆಯಲು ಮುಂದಾದರು. ಇದೇ ವೇಳೆ ಸ್ವಾಮೀಜಿ ಭಕ್ತರಿಗೆ ಹಣ್ಣುಗಳನ್ನು ವಿತರಿಸಿದರು.
ಕಬೀರಾನಂದಾಶ್ರಮದಿಂದ ಪ್ರಾರಂಭವಾಗಿ ದೊಡ್ಡಪೇಟೆ, ಮೈಸೂರ್ ಕಫೆ, ವಾಸವಿ ಶಾಲೆ ಮುಂಭಾಗ, ಪಾರ್ಶ್ವನಾಥ ಶಾಲೆ, ಆನೆಬಾಗಿಲು, ಸಂತೇಪೇಟೆ ವೃತ್ತ, ಎಸ್‌ಬಿಎಂ ವೃತ್ತ, ಇ.ಪಿ. ಬ್ರದರ್ಸ್, ಶಾರದಾ ಬ್ರಾಸ್ ಬ್ಯಾಂಡ್, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠದಿಂದ ಕರುವಿನಕಟ್ಟೆ ವೃತ್ತದ ಮಾರ್ಗವಾಗಿ ಮಠವನ್ನು ತಲುಪಿತು. ಮೆರವಣಿಗೆಯಲ್ಲಿ ಸಾಗಿದ ಭಕ್ತರಿಗೆ ಜನರು ನೀರು, ತಂಪು ಪಾನೀಯ, ಮಜ್ಜಿಗೆ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಜ್ಞಾನ ವಿಕಾಸ ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿ, ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಬಿ.ಇಡಿ ಪಿಯು ಕಾಲೇಜು, ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು, ಮುಖಂಡರಾದ ನಂದಿ ನಾಗರಾಜ್, ಪ್ರಶಾಂತ್, ನಾಗರಾಜ್ ಸಗಂ, ಸತೀಶ್, ಓಂಕಾರ್, ರುದ್ರೇಶ್, ಪ್ರಭಂಜನ್, ಪೈಲ್ವಾನ್ ತಿಪ್ಪೇಸ್ವಾಮಿ, ನಿರಂಜನ ಮೂರ್ತಿ ಇದ್ದರು.
ಶ್ರೀಮಠದ ಕಾರ್ಯ ಮಾದರಿ: ಸಂಸದ ಜಿ.ಎಂ. ಸಿದ್ದೇಶ್ವರ
ಕಬೀರಾನಂದ ಮಠ ಯಾವುದೇ ಜಾತಿಯ ಸೋಂಕು ಇಲ್ಲದೆ ಜಾತ್ಯಾತೀತವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದವರನ್ನು ಸಹ ಒಂದೇ ರೀತಿಯಾಗಿ ನೋಡುವುದರ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ನಗರದ ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹದ ಅಂಗವಾಗಿ ಆಯೋಜಿಸಿರುವ 93ನೇ ಮಹಾ ಶಿವರಾತ್ರಿ ಮಹೋತ್ಸವದಲ್ಲಿ ಶುಕ್ರವಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಠದಿಂದ ಗೋಶಾಲೆ ನಿರ್ಮಿಸುವುದರ ಮೂಲಕ ಜಾನುವಾರಗಳಿಗೂ ಪ್ರೀತಿ ಹಂಚಿದ್ದಾರೆ. ಪ್ರಾಣಿಗಳನ್ನು ಸಾಕುವುದು ಪುಣ್ಯದ ಕೆಲಸ. ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ವೃದ್ಧರನ್ನು ಸಹ ಸ್ವಾಮೀಜಿಗಳು ಆರೈಕೆ ಮಾಡುತ್ತಿದ್ದಾರೆ. ಶ್ರೀಮಠದ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಹಿಂದುಳಿದ ಪ್ರದೇಶಕ್ಕೆ ಕಾಲಿಟ್ಟ ಸ್ವಾಮೀಜಿಗಳು ಮಠವನ್ನು ಜಾತ್ಯಾತೀತವಾಗಿ ಕಟ್ಟುವ ಮೂಲಕ ಆಶ್ರಮದ ಜತೆ ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಿದರು. ಬಾಲಗಂಗಾಧರ ನಾಥ ಸ್ವಾಮೀಜಿಗಳು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ, ನಮ್ಮಲ್ಲಿಯೇ ಇದ್ದಾರೆ ಎಂಬುದಕ್ಕೆ ಇಲ್ಲಿನ ಕಾರ್ಯಗಳೇ ಸಾಕ್ಷಿಯಾಗಿವೆ’ ಎಂದು ತಿಳಿಸಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಹರಿಹರದ ಸಿದ್ಧಾರೂಢ ಆಶ್ರಮದ ಯೋಗಾನಂದ ಸ್ವಾಮೀಜಿ, ಹಾನಗಲ್‌ನ ಶಂಕರಾನಂದ ಸ್ವಾಮೀಜಿ, ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಅನಿತ್ ಕುಮಾರ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.