ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಕೊಟ್ಟಿದ್ದೇ ಕಾಂಗ್ರೆಸ್‌ ಸಾಧನೆ: ಕುಮಾರಸ್ವಾಮಿ

Published 19 ಏಪ್ರಿಲ್ 2024, 16:24 IST
Last Updated 19 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಹಿರಿಯೂರು: ‘ಗ್ಯಾರಂಟಿ ಹೆಸರಿನಲ್ಲಿ ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು ₹ 5,000ದಿಂದ ₹ 6,000  ವಸೂಲಿ ಮಾಡಿ, ಅದೇ ಕುಟುಂಬದ ಮಹಿಳೆಯರಿಗೆ ₹ 2,000 ಕೊಟ್ಟಿದ್ದೇ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಾಧನೆ. ಇದು ಪಿಕ್‌ಪಾಕೆಟ್‌ ಸರ್ಕಾರ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮದ್ಯದ ದರ ಹಿಂದೆ ₹ 25ರಿಂದ ₹ 30 ಇತ್ತು. ಆದರೆ, ಈಗ ₹ 300ಕ್ಕೆ ಏರಿಸಿದ್ದು, ಜನರಿಂದ ಸರ್ಕಾರ ವಸೂಲಿಗಿಳಿದಿದೆ. ಗ್ಯಾರಂಟಿ ಯೋಜನೆಗಳ ಜಾಹೀರಾತಿಗೆ ಪ್ರತಿದಿನ ₹ 8 ಕೋಟಿಯಿಂದ ₹ 10 ಕೋಟಿ ನೀಡುತ್ತಿದ್ದು, ಇಲ್ಲಿಯವರೆಗೆ ₹ 350 ಕೋಟಿ ಬಳಸಲಾಗಿದೆ. ಇದೇ ಹಣವನ್ನು ಜನರ ಅಭಿವೃದ್ಧಿಗೆ ಬಳಸಬಹುದಿತ್ತು’ ಎಂದು ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆ 5 ವರ್ಷದಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, 14ವರ್ಷ ಕಳೆದರೂ ಕಾಮಗಾರಿಯಾಗಿಲ್ಲ‘ ಎಂದು ದೂರಿದರು.

‘ರೈತರ ಪರವಾಗಿ ಇರುವ ಪಕ್ಷ ಅಧಿಕಾರಕ್ಕೆ ಬರಲು ಅವಕಾಶ ಕೇಳಿದ್ದೇವೆ. ಆದರೆ, ಮತದಾರರು ಕೊಡಲಿಲ್ಲ. ಹಿರಿಯೂರಿನಲ್ಲಿ ಪೆನ್, ಪೇಪರ್ ಕೊಡಿ ಅಂತ ಕೇಳಿದವರಿಗೆ ನೀವು ಅದನ್ನು ಕೊಟ್ಟಿದ್ದೀರಾ ಈಗ ಪೇಪರ್, ಪೆನ್ ಯಾವ ರೀತಿ ಬಳಕೆ ಆಗ್ತಿದೆ ನೋಡಿ. ಬೆಂಗಳೂರಿನಲ್ಲಿ ತಮ್ಮನಿಗೆ ಮತ ನೀಡಿದರೆ ನೀರು ಕೊಡ್ತೀವಿ ಅಂತಿದ್ದಾರೆ. ಇದೇನಾ ನಿಮ್ಮ ಪೇಪರ್, ಪೆನ್ ಬಳಸುವ ರೀತಿ’ ಎಂದು ಡಿ.ಕೆ. ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಜಾತಿ, ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಬಂದಿದೆ. ಕಾಂತರಾಜು ವರದಿ ಬಗ್ಗೆ ಸಮಿತಿ ಮಾಡಿದರೇನೂ ಪ್ರಯೋಜನವಿಲ್ಲ. ಅದನ್ನು ಬಿಡುಗಡೆ ಮಾಡಬೇಕು. ಯಾಕೆ ಇನ್ನೂ ವರದಿ ಬಿಡುಗಡೆ ಮಾಡದೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ರಾಜ್ಯದ 28 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ನಾಡನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು. ಚುನಾವಣೆ ಮುಗಿದ ಬಳಿಕ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು. ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ದೈತ್ಯ ಶಕ್ತಿಯನ್ನು ನೋಡಿ ಕಾಂಗ್ರೆಸ್ ನಡುಗಿಹೋಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಯಾಗಿಲ್ಲ. ಸರ್ಕಾರ ದಿವಾಳಿಯಾಗಿದೆ. ಜೆ.ಜೆ.ಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿದ್ದಾರೆ. 140 ಕೋಟಿ ಜನರನ್ನು ರಕ್ಷಣೆ ಮಾಡಿರುವ ನರೇಂದ್ರ ಮೋದಿ ಅವರನ್ನು ಸ್ಮರಿಸಬೇಕು. ಮಾಡಿದ ಕಾರ್ಯಕ್ಕೆ ಪ್ರತಿಯಾಗಿ ಮತ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಪಾವಗಡದ ತಿಮ್ಮರಾಯಪ್ಪ, ಎಂ. ರವೀಂದ್ರಪ್ಪ, ಛಲವಾದಿ ನಾರಾಯಣಸ್ವಾಮಿ, ಸಿದ್ದಾರ್ಥ, ಡಿ.ಯಶೋಧರ, ಎಂ.ಜಯಣ್ಣ, ಕಾಂತರಾಜು, ಎ.ಮುರುಳಿ, ವಿಶ್ವನಾಥ್, ಲಕ್ಷ್ಮಿಕಾಂತ್, ಹನುಮಂತರಾಯಪ್ಪ ಉಪಸ್ಥಿತರಿದ್ದರು.

ಚಿತ್ರಸುದ್ದಿ:ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ
ಚಿತ್ರಸುದ್ದಿ:ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT