ಭಾನುವಾರ, ಏಪ್ರಿಲ್ 2, 2023
23 °C
ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿ

ಚಿತ್ರದುರ್ಗ: ವಿ.ವಿ. ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ವಿ.ವಿ.ಸಾಗರ (ಚಿತ್ರದುರ್ಗ): ಇಲ್ಲಿನ ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಾಗೀನ ಅರ್ಪಣೆ ಮಾಡಿದರು.

ತರಹೇವಾರಿ ಪುಷ್ಪಗಳಿಂದ ಅಲಂಕಾರಗೊಂಡಿದ್ದ ವಿ.ವಿ.ಸಾಗರ ಜಲಾಶಯದ ಅಣೆಕಟ್ಟೆ ಮೇಲಿಂದ ಬಾಗೀನ ಅರ್ಪಿಸಿದರು. ಪುಷ್ಪಾರ್ಚನೆ ಮಾಡಿ, ಹಾಲು ತುಪ್ಪ ಸುರಿದು ಗಂಗೆಗೆ ನಮನ ಸಲ್ಲಿಸಿದರು.

'ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಜಲಾಶಯ ಭವ್ಯವಾಗಿದ್ದು, ಮಧ್ಯ ಕರ್ನಾಟಕದ ಜನರಿಗೆ ಉಪಯುಕ್ತವಾಗಿದೆ. 89 ವರ್ಷಗಳ ಬಳಿಕ ಭರ್ತಿಯಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಗೆ ಬಾಗೀನ ಅರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದ್ದು ಐತಿಹಾಸಿಕ ಕ್ಷಣ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು.

'ಮಧ್ಯ ಕರ್ನಾಟಕದ ಈ ಜಲಾಶಯ ಭರ್ತಿ ಆಗಿರುವುದರಿಂದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ. ಪಶ್ಚಿಮ ಘಟ್ಟಗಳಿಂದ ಬರುವ ಜಲವನ್ನು ಸಂಗ್ರಹಿಸುವ ಉದ್ದೇಶದಿಂದ ಮಹಾರಾಜರು ಈ ಜಲಾಶಯ ನಿರ್ಮಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಜಲಾಶಯ ನಿರ್ಮಾಣಕ್ಕಾಗಿ ಮನೆತನದ ಒಡವೆ ಮಾರಾಟ ಮಾಡಿ ಹಣ ಒದಗಿಸಿದ ಮಹಾರಾಜರ ಕಾಳಜಿಗೆ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ' ಎಂದು ಹೇಳಿದರು.

'ಈ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುವ ವ್ಯವಸ್ಥೆ ಮಾಡುತ್ತೇವೆ. ಜಲಾಶಯದ ಕೆಳಬಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಬರದ ನಾಡು ಎಂಬ ಹಣೆಪಟ್ಟಿಯನ್ನು ಅಳಿಸಲಾಗುವುದು. ಸಂಪದ್ಭರಿತ ಕರ್ನಾಟಕವಾಗಿ ರೂಪಿಸಲು ಸಂಕಲ್ಪ ಮಾಡಿದ್ದೇವೆ' ಎಂದರು.

'ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹೂಡಿಕೆ ಮಂಡಳಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಲಿದೆ. ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ ₹ 16 ಸಾವಿರ ಕೋಟಿ ಅನುದಾನ ಸಿಗಲಿದೆ' ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಬಿ.ಎಸ್.ಯಡಿಯೂರಪ್ಪ, ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಎಸ್.ನವೀನ್, ವೈ.ಎ.ನಾರಾಯಣಸ್ವಾಮಿ ಇದ್ದರು. ಶಾಸಕ ಗೂಳಿಹಟ್ಟಿ ಶೇಖರ್ ಗೈರು ಹಾಜರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು