ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿಗೆ ವಿಚಿತ್ರ ರೋಗ: ರೈತರ ಆತಂಕ

ನೋಡ ನೋಡುತ್ತಿದ್ದಂತೆ ಒಣಗುತ್ತಿರುವ ಮರಗಳು
Last Updated 27 ನವೆಂಬರ್ 2019, 11:34 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಆರನಕಟ್ಟೆ, ಬಬ್ಬೂರು, ಪಟ್ರೆಹಳ್ಳಿ, ಆದಿವಾಲ, ಕಸವನಹಳ್ಳಿ, ಆಲೂರು ಮೊದಲಾದ ಕಡೆ ತೆಂಗಿನ ಮರಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ನೂರಾರು ಕಾಯಿಗಳಿರುವ ಮರಗಳು ನೋಡ ನೋಡುತ್ತಿದ್ದಂತೆ ಒಣಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನ ತೋಟದಲ್ಲಿ ಹಿಂದಿನ 15 ದಿನಗಳಲ್ಲಿ 7 ಮರಗಳಿಗೆ ಇಂತಹ ರೋಗ ತಗುಲಿದೆ. ಒಂದೊಂದು ಮರದಲ್ಲಿ ನಾಲ್ಕೈದು ಗೊಂಚಲುಗಳಿದ್ದು, ಪ್ರತಿ ಮರದಲ್ಲಿ ಕನಿಷ್ಠ 100–150 ಕಾಯಿಗಳಿದ್ದವು. ಹಸಿರಿನಿಂದ ಕೂಡಿದ್ದ ಗರಿಗಳು ಇದ್ದಕ್ಕಿದ್ದಂತೆ ಕಂದು ಬಣ್ಣಕ್ಕೆ ತಿರುಗಿ ಒಣಗ ತೊಡಗಿದವು. ಸ್ವಲ್ಪ ಬಾಡುತ್ತಿದ್ದಂತೆ ಎಲ್ಲ ಗರಿಗಳೂ ಮರದ ಕಾಂಡಕ್ಕೆ ಇಳಿಬೀಳತೊಡಗಿದವು. ಸುಳಿಯಲ್ಲಿ ಉಳಿದಿದ್ದ ಮೂರ್ನಾಲ್ಕು ಗರಿಗಳು ಒಂದೆರಡು ದಿನಗಳ ನಂತರ ಒಣಗಿದವು. ಮೂರು ತಿಂಗಳಿಂದ ನೀರಿಗೆ ಕೊರತೆ ಇಲ್ಲ. ಆದರೂ ಮರಗಳು ಒಣಗುತ್ತಿರುವುದು ಆತಂಕ ಉಂಟುಮಾಡಿದೆ’ ಎಂದು ಆರನಕಟ್ಟೆ ಗ್ರಾಮದ ಎಸ್.ಬಿ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಬ್ಬೂರಿನ ಎಂ.ಟಿ. ಸುರೇಶ್, ‘ನಮ್ಮ ತೋಟದಲ್ಲೂ ನಾಲ್ಕೈದು ಮರಗಳು ಒಣಗಿವೆ. ನೀರಿನ ಕೊರತೆಯಿಂದ ಈ ರೀತಿ ಆಗಿರಬಹುದು ಅಂದುಕೊಂಡಿದ್ದೆವು. ಆದರೆ ಇದು ಬೇರೆ ಯಾವುದೋ ರೋಗ ಎಂದು ಈಗ ಅನುಭವಕ್ಕೆ ಬರುತ್ತಿದೆ’ ಎಂದರು.

ಪಟ್ರೆಹಳ್ಳಿಯ ಎಂ.ಎಂ.ಎಂ. ಮಣಿ, ‘ಟ್ಯಾಂಕರ್ ಮೂಲಕ ನೀರು ಉಣಿಸಿ ತೋಟವನ್ನು ಉಳಿಸಿಕೊಂಡಿದ್ದೆವು. ಈಗ ವಿಚಿತ್ರ ರೋಗಕ್ಕೆ ಫಸಲು ಹಿಡಿದಿರುವ ಮರಗಳು ಒಣಗುತ್ತಿವೆ. ನಮಗೂ ಆರಂಭದಲ್ಲಿ ಇದು ಗಮನಕ್ಕೆ ಬಂದಿರಲಿಲ್ಲ. ಬಹಳಷ್ಟು ಊರುಗಳಲ್ಲಿ ರೈತರು ತೆಂಗಿನ ಮರಗಳು ಒಣಗುತ್ತಿರುವ ಬಗ್ಗೆಮಾತನಾಡುವುದನ್ನು ಕೇಳಿದ್ದೆ. ನೀರಿನ ಕೊರತೆ ಎಂದು ಸುಮ್ಮನಾಗಿದ್ದೆವು. ಈಗ ನೋಡಿದರೆ ಸಮೃದ್ಧವಾಗಿ ಬೆಳೆದಿದ್ದ ಮರಗಳೇ ರೋಗಕ್ಕೆ ಬಲಿಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಈ ಬಗ್ಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ತೋಟಯ್ಯ ಅವರನ್ನು ಸಂಪರ್ಕಿಸಿದಾಗ, ‘ಈ ರೀತಿ ರೋಗ ಬಂದಿರುವುದು ಇಂದು ರೈತರು ಕಚೇರಿಗೆ ಬಂದು ಹೇಳಿದ ಮೇಲೆಯೇ ತಿಳಿದುಬಂತು. ನನಗೆ ಸಭೆಗಳಿಗೆ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯ ಇರುವುದರಿಂದ ಬೇರೆ ಅಧಿಕಾರಿಗಳನ್ನು ರೋಗಪೀಡಿತ ತೋಟಗಳಿಗೆ ಕಳುಹಿಸುತ್ತೇನೆ’ ಎಂದರು.

ಕೃಷಿಕ ಸಮಾಜದ ಅಧ್ಯಕ್ಷರ ಆಕ್ರೋಶ: ‘ಹಿಂದಿನ ಎರಡು ವರ್ಷಗಳಲ್ಲಿ ಅಂತರ್ಜಲ ಕುಸಿತದಿಂದ ತಾಲ್ಲೂಕಿನಲ್ಲಿ 17 ಸಾವಿರ ಎಕರೆ ತೆಂಗು, ಅಡಿಕೆ ತೋಟಗಳು ಒಣಗಿವೆ. ಉಳಿದಿರುವುದು ಅಲ್ಪಸ್ವಲ್ಪ ಮಾತ್ರ. ಹೋಬಳಿಗೊಬ್ಬರು ತೋಟಗಾರಿಕೆ ಅಧಿಕಾರಿಗಳಿದ್ದು, ಅವರು ಏನು ಮಾಡುತ್ತಿದ್ದಾರೆ ತಿಳಿಯದಾಗಿದೆ. ತೆಂಗು, ಅಡಿಕೆ, ದಾಳಿಂಬೆ, ಪಪ್ಪಾಯಿ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಗಳು. ಇಷ್ಟು ಬೆಳೆಗಳ ಸ್ಥಿತಿಗತಿ ಹೇಗಿದೆ ಎಂದು ತಿಳಿಯುವುದು ಕಷ್ಟವೇ? ಇಲಾಖೆಯ ನಿರ್ದೇಶಕರು ತಕ್ಷಣ ತೆಂಗು ಬೆಳೆ ವಿಜ್ಞಾನಿಗಳನ್ನು ನಮ್ಮ ತಾಲ್ಲೂಕಿಗೆ ಕಳಿಸಿ ರೋಗವನ್ನು ಪತ್ತೆ ಮಾಡಿಸಿ, ತೋಟ ಉಳಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಒತ್ತಾಯಿಸಿದ್ದಾರೆ.

‘ತೋಟಗಾರಿಕೆ ಇಲಾಖೆಯಿಂದ ಸ್ಪಂದನೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಬಬ್ಬೂರು ಫಾರಂ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ತೆಂಗು ವಿಜ್ಞಾನಿ ಡಾ.ಓಂಕಾರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ’ ಎಂದು ಆರನಕಟ್ಟೆ ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT