ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕಾಂಗ್ರೆಸ್‌–ಬಿಜೆಪಿ ಪ್ರಚಾರ ಜೋರು

ಚಿತ್ರದುರ್ಗ–ದಾವಣಗೆರೆ ವಿಧಾನಪರಿಷತ್‌ ಕ್ಷೇತ್ರ ಚುನಾವಣೆ
Last Updated 30 ನವೆಂಬರ್ 2021, 6:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರ ದಿನಕಳೆದಂತೆ ರಂಗು ಪಡೆಯುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಚುನಾವಣೆ ಭರಾಟೆ ಹೆಚ್ಚಾಗುತ್ತಿದ್ದು, ತಾರಾ ಪ್ರಚಾರಕರು ಅಖಾಡಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಸೋಮಶೇಖರ, ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್‌.ನವೀನ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತಪ್ಪ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿವೆ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಎರಡೂ ಪಕ್ಷಗಳ ನಾಯಕರು ಮತಯಾಚನೆಯ ನೇತೃತ್ವ ವಹಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಆದರೂ, ಎರಡು ಪಕ್ಷಗಳು ಬಹಿರಂಗ ಸಮಾವೇಶ ನಡೆಸಿ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ. ರಾಜ್ಯಮಟ್ಟದ ನಾಯಕರನ್ನು ಆಹ್ವಾನಿಸಿ ಮತ ಸಳೆಯಲು ಮುಂದಾಗಿವೆ.

ಬಿಜೆಪಿಗೆ ಜನಪ್ರತಿನಿಧಿಗಳ ಬಲ:

ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಮಪತ್ರ ಸಲ್ಲಿಕೆಗೂ ಮೊದಲೇ ಪ್ರಚಾರಕ್ಕೆ ಚಾಲನೆ ನೀಡಿತು. ಅಭ್ಯರ್ಥಿ ಘೋಷಣೆಗೂ ಮುನ್ನವೇ ‘ಜನಸ್ವರಾಜ್‌ ಸಮಾವೇಶ’ ಸಂಘಟಿಸಿ ಗಮನ ಸೆಳೆಯಿತು. ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಮತಗಳನ್ನು ಭದ್ರಪಡಿಸಿಕೊಳ್ಳುವ ದಾಳ ಉರುಳಿಸಿತು.

ದಾವಣಗೆರೆ ಮತ್ತು ಚಿತ್ರದುರ್ಗದ 11 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಎರಡೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದಾರೆ. ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕೇಂದ್ರ ಸಚಿವ ಸಂಪುಟದಲ್ಲಿ ಹಾಗೂ ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲರೂ ಅಖಾಡಕ್ಕೆ ಇಳಿದು ಮತದಾರರ ಮನವೊಲಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ನಾಯಕರು ಒಗ್ಗೂಡಿ ಚುನಾವಣೆ ಎದುರಿಸುವಂತೆ ಸೂಚನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ತಂಡ ಕೂಡ ಒಮ್ಮೆ ಪ್ರವಾಸ ಪೂರ್ಣಗೊಳಿಸಿದೆ.

‘ಕೈ’ ಪಾಳೆಯದಲ್ಲಿ ಹೆಚ್ಚಿದ ಹುಮ್ಮಸ್ಸು: ವಿಧಾನಪರಿಷತ್‌ ಚುನಾವಣೆ ‘ಕೈ’ ಪಾಳೆಯದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಕಾಂಗ್ರೆಸ್‌ ನಾಯಕರು ಒಗ್ಗೂಡಿ ವ್ಯವಸ್ಥಿತವಾಗಿ ಅಖಾಡಕ್ಕೆ ಧುಮುಕ್ಕಿದ್ದಾರೆ. ಅಭ್ಯರ್ಥಿಯೊಂದಿಗೆ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಬಹಿರಂಗ ಸಭೆ ನಡೆಸಲಾಗುತ್ತಿದೆ. ತಳಹಂತದಲ್ಲಿರುವ ಪಕ್ಷದ ಕಾರ್ಯಕರ್ತರು ನಾಯಕರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದು ‘ಕೈ’ ಬಲಪಡಿಸುವ ನಿರೀಕ್ಷೆಯನ್ನು ಗರಿಗೆದರಿಸಿದೆ.

ನಾಮಪತ್ರ ಸಲ್ಲಿಕೆಯ ಅವಕಾಶವನ್ನು ಬಲಪ್ರದರ್ಶನಕ್ಕೆ ಬಳಸಿಕೊಂಡ ಕಾಂಗ್ರೆಸ್‌, ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿತು. ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಪಕ್ಷದ ಕಾರ್ಯಕರ್ತರ ಮತಗಳು ಚದುರಿ ಹೋಗದಂತೆ ಗಮನ ಹರಿಸುತ್ತಿದೆ. ಮಾಜಿ ಸಚಿವ ಎಚ್‌.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಸುಧಾಕರ್‌, ಬಿ.ಜಿ.ಗೋವಿಂದಪ್ಪ, ಎಸ್‌.ತಿಪ್ಪೇಸ್ವಾಮಿ ಸೇರಿ ಅನೇಕರು ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಬಹಿರಂಗ ಸಭೆ ನಡೆಸಲಾಗಿದೆ. ಕಾಂಗ್ರೆಸ್‌ ನಾಯಕರಾದ ಸತೀಶ ಜಾರಕಿಹೊಳಿ ಸೇರಿ ಅನೇಕರು ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕ್ಷೇತ್ರವನ್ನು ಈ ಹಿಂದೆ ಎರಡು ಬಾರಿ ಪ್ರತಿನಿಧಿಸಿದ್ದ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಅವರನ್ನು ಪ್ರಚಾರಕ್ಕೆ ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT