ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್.ವೈ. ಗೋಪಾಲಕೃಷ್ಣ ನಡೆ ನಿಗೂಢ; ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ

ಮೊಳಕಾಲ್ಮುರು: ಮುಂದುವರಿದ ಟಿಕೆಟ್ ಗೊಂದಲ
Last Updated 1 ಏಪ್ರಿಲ್ 2023, 6:59 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ (ಎನ್‌ವೈಜಿ) ಅವರು ಶುಕ್ರವಾರ ಶಾಸಕ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದರಿಂದ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ವದಂತಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ಇನ್ನೊಂದೆಡೆ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ ಎಂದೂ ಹೇಳಲಾಗುತ್ತಿದೆ.

ಎನ್‌ವೈಜಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿದ್ದರೂ, ‘ಪಕ್ಷಾಂತರವು ಹಲವು ಹಂತಗಳನ್ನು ಮೀರಿದ್ದು’ ಎಂಬ ಹೇಳಿಕೆಯನ್ನು ಸ್ವತಃ

ಗೋಪಾಲಕೃಷ್ಣ ನೀಡುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದರು.

ಆದರೆ ಪಕ್ಷದ ಟಿಕೆಟ್ ಆಕಾಂಕ್ಷಿ ಬಿ. ಯೋಗೇಶ್ ಬಾಬು ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಮುಂದೆ ಎನ್‌ವೈಜಿಗೆ ಟಿಕೆಟ್ ನೀಡಬಾರದು, ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ ಬಾಬು ಅವರಿಗೆ ನೀಡಬೇಕು ಎಂದು ಪ್ರತಿಭಟನೆ ಮಾಡಿರುವುದು ಕುತೂಹಲ ಉಂಟುಮಾಡಿದೆ.

ಎನ್‌ವೈಜಿ ಸ್ವಗ್ರಾಮ ರಾಂಪುರದಲ್ಲಿ ಅವರ ಅಭಿಮಾನಿಗಳು ಗುರುವಾರ ಸಂಜೆ ಹಾಗೂ ಶುಕ್ರವಾರ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಕಾಂಗ್ರೆಸ್‌ ಸೇರ್ಪಡೆಯ ಸುದ್ದಿಗಳಿಗೆ ಪುಷ್ಟಿ ನೀಡಿದೆ.

ಎನ್‌ವೈಜಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸದಿರುವುದು, ‘ನನಗೆ ವಯಸ್ಸಾಗಿದ್ದು ನಿವೃತ್ತಿ ಅವಶ್ಯಕ ಎಂದು ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿರುವುದು, ಬಿಜೆಪಿ ಹೊಗಳಿರುವುದು ಅನುಮಾನ ಮೂಡಿಸಿದೆ. ಇದು, ಬಿಜೆಪಿಯಲ್ಲಿ ಅವರ ಕುಟುಂಬದ ಇತರ ಸದಸ್ಯರೊಬ್ಬರು ಮುಂದುವರಿಯಬಹುದು ಎಂಬ ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿದೆ. ಅವರ ಸಹೋದರ ಮಾಜಿ ಸಂಸದ ಎನ್.ವೈ. ಹನುಮಂತಪ್ಪ ಅವರ ಪುತ್ರ ಎನ್.ವೈ. ಸುಜಯ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರ ಸುತ್ತಾಟ ನಡೆಸುತ್ತಿರುವುದು ಇದಕ್ಕೆ ಒತ್ತು ನೀಡಿದೆ.

‘ಭಾರತ್ ಜೋಡೊ’ ಯಾತ್ರೆಯು ಕ್ಷೇತ್ರದಲ್ಲಿ ಸಂಚರಿಸಿರುವ ಕಾರಣ ಕಾಂಗ್ರೆಸ್ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ಕಾರಣಕ್ಕಾಗಿ ಅಳೆದೂ ತೂಗಿ ಟಿಕೆಟ್ ನೀಡಲಾಗುವುದು. ಟಿಕೆಟ್ ಘೋಷಣೆ ತಡವಾಗಲಿದೆ ಎಂಬ ಸಂದೇಶ ಸಿಕ್ಕ ನಂತರ
ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಈಚೆಗೆ ಪಕ್ಷ ತೊರೆದಿದ್ದರು. ಇದಾದ ನಂತರ ಯೋಗೇಶ್ ಬಾಬು ಮತ್ತು ವಿ.ಎಸ್. ಉಗ್ರಪ್ಪ ಹೆಸರು ಕೇಳಿಬಂದಿತ್ತು.

ಆದರೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬಂದ ಕಾರಣ ಉಗ್ರಪ್ಪ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ತುಸು ಕ್ಷೀಣ ಎನ್ನಲಾಗಿದೆ. ಯೋಗೇಶ್ ಬಾಬು ಹೆಸರು ಅಂತಿಮವಾಗಬಹುದು ಎನ್ನುವಾಗ ನಡೆದಿರುವ ಎನ್‌ವೈಜಿ ರಾಜೀನಾಮೆ ಬೆಳವಣಿಗೆ ಕುತೂಹಲ ಕೆರಳಿಸಿದೆ.

****

ನಿರಂತರ ಪಕ್ಷ ಸಂಘಟನೆ, ಪಕ್ಷದ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ್ದೇನೆ. ಜೋಡೊ ಯಾತ್ರೆ ಯಶಸ್ಸಿಗೆ ಶ್ರಮಿಸಿದ್ದೇನೆ. ಕಾರ್ಯಕರ್ತನ ಶ್ರಮಕ್ಕೆ ಟಿಕೆಟ್ ನೀಡುವ ಆತ್ಮವಿಶ್ವಾಸವಿದೆ.

-ಬಿ. ಯೋಗೇಶ್ ಬಾಬು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT