ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ತಪ್ಪಿಗೆ ಸರ್ಕಾರ ತಲೆ ತಗ್ಗಿಸುವಂತಾಗಿದೆ: ಸಂಸದ ನಾರಾಯಣಸ್ವಾಮಿ ಕಿಡಿ

ಹೊಸದುರ್ಗದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳ
Last Updated 5 ಮೇ 2021, 5:54 IST
ಅಕ್ಷರ ಗಾತ್ರ

ಹೊಸದುರ್ಗ: ಅಧಿಕಾರಿಗಳ ತಪ್ಪಿನಿಂದಾಗಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು ಇದಕ್ಕೆ ಸರ್ಕಾರ ತಲೆತಗ್ಗಿಸುವಂತಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಅವರು ತಹಶೀಲ್ದಾರ್ ವೈ. ತಿಪ್ಪೇಸ್ವಾಮಿ, ಇಒ ಜಾನಕಿರಾಮ್, ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಕಂಬಳಿಮಠ್ ಅವರನ್ನು ತರಾಟೆ ತೆಗೆದುಕೊಂಡರು.

ಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊರೊನಾ ಸೋಂಕು ನಿಯಂತ್ರಣ ಕ್ರಮ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಕಂಬಳಿಮಠ್, ‘ಪಟ್ಟಣದಲ್ಲಿ 82, ಬಲ್ಲಾಳಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 29, ಜಿ.ಎನ್. ಕೆರೆ 11, ಮಲ್ಲಪ್ಪನಹಳ್ಳಿ 8, ಮಾಡದಕೆರೆ ಹಾಗೂ ದೇವಿಗೆರೆ ತಲಾ 9, ಶ್ರೀರಾಂಪುರ 8, ಬಾಗೂರು 3 ಸೇರಿ ತಾಲ್ಲೂಕಿನಲ್ಲಿ ಒಟ್ಟು 381 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. 147 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. ವಿವಿಧ ಹಾಸ್ಟೆಲ್‌ಗಳಲ್ಲಿ 185 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆ
ಯಲ್ಲಿ ಈಚೆಗೆ ಆಮ್ಲಜನಕ ಕೊರತೆ
ಯಾದಾಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರು ಸೋಂಕಿತರ ಆರೈಕೆಗೆ ಆಮ್ಲಜನಕ ಸೌಲಭ್ಯ ಒದಗಿಸಿದರು. ಈ ಆಸ್ಪತ್ರೆಯಲ್ಲಿ 10 ಮಂದಿ ಸ್ಟಾಫ್‌ ನರ್ಸ್‌ಗಳಿದ್ದು ಕೋವಿಡ್ ಕೇಂದ್ರದ ನಿರ್ವಹಣೆಗೆ 10 ಮಂದಿ ಬೇಕಾಗಿದೆ. ವೈದ್ಯರು ಕೇವಲ 5 ಮಂದಿಯಿದ್ದು, ಸೋಂಕಿತರನ್ನು ಗುಣಪಡಿಸಲು ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

ಸಂಸದ ನಾರಾಯಣಸ್ವಾಮಿ, ‘ಜಿಲ್ಲೆಯಲ್ಲಿಯೇ ಹೊಸದುರ್ಗ ತಾಲ್ಲೂಕಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ತಾಲ್ಲೂಕಿನಲ್ಲಿ ಇರುವ 381 ಸೋಂಕಿತರು ಚಿಕಿತ್ಸೆ ಪಡೆಯಲು ಎಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿ ಕೊಡಿ’ ಎಂದು ಕೇಳಿದರು.

ಅಧಿಕಾರಿಗಳ ಬಳಿ ನಿಖರ ಮಾಹಿತಿ ಇಲ್ಲದ ಕಾರಣ ಉತ್ತರಿಸಲು ಚಡಪಡಿಸಿದರು.

ಆಗ ಬೇಸರಗೊಂಡ ನಾರಾಯಣಸ್ವಾಮಿ, ‘ಅಧಿಕಾರಿಗಳು ಹೀಗೆ ತಾತ್ಸಾರ ಮಾಡಿದರೆ ತಾಲ್ಲೂಕಿನ ಪರಿಸ್ಥಿತಿ ಕೈಮೀರುತ್ತದೆ’ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು.

‘ಸೋಂಕಿನ ಲಕ್ಷಣ ಕಂಡುಬಂದ ತಕ್ಷಣವೇ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುವಂತೆ ಸರ್ಕಾರ ತಿಳಿಸಿದೆ. ಪಾಸಿಟಿವ್‌ ಬಂದ ನಂತರವೂ ಮನೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿಲ್ಲ. ಇದನ್ನು ಅಧಿಕಾರಿಗಳು ಚೆನ್ನಾಗಿ ಅರಿತು ಕೆಲಸ ಮಾಡಿದಲ್ಲಿ ಸೋಂಕು ನಿಯಂತ್ರಿಸಲು ಸಾಧ್ಯ. ತಾಲ್ಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಇದ್ದರೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಕೊಡುತ್ತಿರುವುದು ಸರಿಯಲ್ಲ. ಅವರ ಮೇಲೆ ನಿಗಾ ವಹಿಸದಿದ್ದರೆ ಅವರು ಹೊರಗೆ ಬಂದು ಎಲ್ಲೆಲ್ಲಿಯೋ ಸುತ್ತಾಡಿ ಹೋದರೆ ಸೋಂಕಿತರು ಹೆಚ್ಚಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘50 ಹಾಸಿಗೆ ಇರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳಲ್ಲಿಯೂ ಹಾಸಿಗೆ ವ್ಯವಸ್ಥೆ ಮಾಡಬೇಕು. ಸಂಜೆ ಹೊತ್ತಿಗೆ 381 ಕೊರೊನಾ ಸೋಂಕಿತರನ್ನು ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಗುಣಮುಖರಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿಹಳ್ಳಿಯಲ್ಲಿ ಇರುವ ಮೇಲುಸ್ತುವಾರಿ ಸಮಿತಿ ಚುರುಕಾಗಿ ಹೊರಗಿನಿಂದ ಬರುವವರನ್ನು ಪರೀಕ್ಷಿಸ
ಬೇಕು. ಕೋವಿಡ್‌ ನಿಯಂತ್ರಣಕ್ಕೆ ಹಣದ ಕೊರತೆಯಿಲ್ಲ. ಸೋಂಕು ನಿಯಂತ್ರಿಸಲು ಆಮ್ಲಜನಕ, ಲಸಿಕೆ, ಮಾತ್ರೆ, ಮಾಸ್ಕ್‌, ಸ್ಯಾನಿಟೈಸರ್‌ ಸೌಲಭ್ಯ ಒದಗಿಸುತ್ತೇನೆ. ಅಧಿಕಾರಿಗಳು ಜನರನ್ನು ವಿನಾಕಾರಣ ಹೊರಗೆ ಸುತ್ತಾಡಲು ಬಿಡದೇ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು’ ಎಂದು ತಾಕೀತು ಮಾಡಿದರು.

ಶಾಸಕ ಗೂಳಿಹಟ್ಟಿ ಡಿ. ಶೇಖರ್‌, ‘ಬೆಳಿಗ್ಗೆ 10 ಗಂಟೆ ನಂತರದಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳು ಬಾಗಿಲು ತೆರೆಯಲಿಕ್ಕೆ ಬಿಡಬಾರದು. ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ತಿರುಗಾಡುವವರನ್ನು ಮುಲಾಜಿಲ್ಲದೇ ತಡೆಯಬೇಕು. ತರಕಾರಿ ಮಾರುಕಟ್ಟೆ ಬಂದ್‌ ಆಗಿರುವುದರಿಂದ ರೈತರು ಬೆಳೆದಿರುವ ಸೊಪ್ಪು, ತರಕಾರಿ, ಹೂವನ್ನು ಹೋಲ್‌ಸೆಲ್‌ ವ್ಯಾಪಾರಿಗಳು ಜಮೀನಿಗೆ ಹೋಗಿ ಖರೀದಿಸುವಂತೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ವಾರ್ಡ್‌ವಾರು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT