ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ–ಸ್ವತ್ತು’ ಪ್ರಕ್ರಿಯೆ ಇನ್ನಷ್ಟು ಜಟಿಲ

ಕೆಳಹಂತದ ಸಿಬ್ಬಂದಿ ಮೇಲೆ ಹೆಚ್ಚಿದ ಜವಾಬ್ದಾರಿ, ಪ್ರಕ್ರಿಯೆ ವಿಳಂಬ ಆರೋಪ
Last Updated 26 ಏಪ್ರಿಲ್ 2022, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರ ಆಸ್ತಿಗಳ ನಿರ್ವಹಣೆಗೆ ರೂಪಿಸಿದ ಇ–ಸ್ವತ್ತು ಪ್ರಕ್ರಿಯೆ ಇನ್ನಷ್ಟು ಜಟಿಲಗೊಂಡಿದೆ. ಪ್ರತಿ ಹಂತವನ್ನು ತಂತ್ರಾಂಶದ ಮೂಲಕವೇ ಪೂರ್ಣಗೊಳಿಸುವಂತೆ ನಿಯಮ ಬದಲಾವಣೆ ಮಾಡಿದ ಪರಿಣಾಮ ಸೇವೆ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರು ನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ.

‘ಇ–ಸ್ವತ್ತು’ಗೆ ರೂಪಿಸಿದ ‘ಇ–ಆಸ್ತಿ’ ತಂತ್ರಾಂಶದಲ್ಲಿ ಅಧಿಕಾರಿಗಳು ಮಾತ್ರ ಈವರೆಗೆ ಕೆಲಸ ಮಾಡುತ್ತಿದ್ದರು. ಏ.1ರಿಂದ ಕರ ವಸೂಲಿಗಾರ, ಕಂದಾಯ ನಿರೀಕ್ಷಕ, ಎಂಜಿನಿಯರ್‌ ಸೇರಿ ಎಲ್ಲರೂ ತಂತ್ರಾಂಶದ ಮೂಲಕವೇ ಕಾರ್ಯನಿರ್ವಹಿಸುವಂತೆ ಪೌರ ಸುಧಾರಣಾ ಕೋಶ ಆದೇಶ ಹೊರಡಿಸಿದೆ. ಇದು ಇನ್ನಷ್ಟು ತೊಡಕು ಉಂಟಾಗಲು ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಅಧಿಕ ಆಸ್ತಿಗಳಿವೆ. ನಿವೇಶನ, ಕಟ್ಟಡದ ಪರಭಾರೆಗೆ, ಆಸ್ತಿ ಹಕ್ಕು ವರ್ಗಾವಣೆಗೆ ‘ಇ–ಸ್ವತ್ತು’ ಕಡ್ಡಾಯಗೊಳಿಸಲಾಗಿದೆ. ನಿತ್ಯ ಸರಾಸರಿ 20ಕ್ಕೂ ಹೆಚ್ಚು ಅರ್ಜಿಗಳು ‘ಇ–ಸ್ವತ್ತು’ ಕೋರಿ ನಗರಸಭೆಗೆ ಸಲ್ಲಿಕೆಯಾಗುತ್ತಿವೆ. ಏಳು ದಿನಗಳ ಒಳಗಾಗಿ ಅರ್ಜಿ ವಿಲೇವಾರಿ ಮಾಡುವಂತೆ ಸರ್ಕಾರ ಗಡುವು ವಿಧಿಸಿದೆ. ಪರಿಷ್ಕೃತ ನಿಯಮದ ಪ್ರಕಾರ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡುವುದು ಸಿಬ್ಬಂದಿಗೆ ಕಷ್ಟವಾಗುತ್ತಿದೆ.

‘ಇ–ಸ್ವತ್ತು’ ಕೋರಿ ಸಲ್ಲಿಕೆಯಾಗುವ ಅರ್ಜಿಯೊಂದಿಗೆ ಆಸ್ತಿ ತೆರಿಗೆ ಪಾವತಿಸಿದ ರಸೀದಿ, ಹಕ್ಕುಪತ್ರ, ನಕ್ಷೆ, ಕಟ್ಟಡ ಪರವಾನಗಿ ಪ್ರತಿ ಸೇರಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಇದಕ್ಕೆ ನಿಗದಿಪಡಿಸಿದ ₹ 150 ಶುಲ್ಕವನ್ನು ಪಾವತಿಸಿದ ಬಳಿಕ ಅರ್ಜಿಯು ಡಾಟಾ ಎಂಟ್ರಿ ಆಪರೇಟರ್‌ ಬಳಿಗೆ ಬರುತ್ತದೆ. ವಿಷಯ ನಿರ್ವಾಹಕರು ಇದನ್ನು ಪರಿಶೀಲಿಸಿ ಕರ ವಸೂಲಿಗಾರರಿಗೆ ವರ್ಗಾವಣೆ ಮಾಡುತ್ತಾರೆ.

ಆಸ್ತಿ ಮಾಹಿತಿಯ ಚೆಕ್‌ಲಿಸ್ಟ್‌ ಸೃಜಿಸಿ ಅಭಿಪ್ರಾಯ ದಾಖಲಿಸಿದ ನಂತರ ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿ, ಎಂಜಿನಿಯರ್‌ ಕೆಲಸ ಪೂರ್ಣಗೊಳಿಸಬೇಕು. ಬಳಿಕ ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿ ಅನುಮೋದನೆ ನೀಡುತ್ತಾರೆ. ಕರವಸೂಲಿಗಾರ, ಕಂದಾಯ ನಿರೀಕ್ಷಕ ಹಾಗೂ ಎಂಜಿನಿಯರ್‌ಗೆ ಪ್ರತ್ಯೇಕ ಐಡಿ ಸೃಜಿಸಿ ತಂತ್ರಾಂಶದಲ್ಲಿಯೇ ಕಾರ್ಯನಿರ್ವಹಿಸುವುದನ್ನು ಈಗ ಕಡ್ಡಾಯಗೊಳಿಸಲಾಗಿದೆ.

ಸರ್ವರ್‌ ಸಮಸ್ಯೆ, ದಾಖಲಾತಿಗಳ ಅಪ್ಲೋಡ್‌ ಮಾಡುವಲ್ಲಿ ಆಗುತ್ತಿರುವ ತೊಂದರೆಯಿಂದ ಅರ್ಜಿ ನಿಗದಿತ ಕಾಲಮಿತಿಯಲ್ಲಿ ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತಿಲ್ಲ. ಇ–ಸ್ವತ್ತು ಕೋರಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಅಲೆಯುತ್ತಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸರಿಯಾದ ಸಮಯಕ್ಕೆ ಲಭ್ಯವಾಗದೇ ಸೇವೆಯಲ್ಲಿ ತೊಡಕು ಉಂಟಾಗುತ್ತಿದೆ ಎಂಬ ದೂರುಗಳು
ಹೆಚ್ಚಾಗುತ್ತಿವೆ.

‘ಕರ ವಸೂಲಿಗಾರ, ಕಂದಾಯ ಅಧಿಕಾರಿಗಳು ಜನರೊಂದಿಗೆ ನಿತ್ಯ ಒಡನಾಡುತ್ತಾರೆ. ಆಸ್ತಿಯ ಬಗೆಗೆ ಅವರಲ್ಲಿ ಮಾಹಿತಿ ಇರುತ್ತದೆ. ಇ–ಸ್ವತ್ತು ಪ್ರಕ್ರಿಯೆ ಬಗ್ಗೆ ಈ ಸಿಬ್ಬಂದಿ ಕೂಡ ಸರಿಯಾದ ಮಾಹಿತಿ ಹೊಂದಬೇಕು ಎಂಬ ಕಾರಣಕ್ಕೆ ಸುಧಾರಣಾ ಕ್ರಮವನ್ನು ಜಾರಿಗೊಳಿಸಲಾಗಿದೆ’ ಎನ್ನುತ್ತಾರೆ ಚಿತ್ರದುರ್ಗ ನಗರಸಭೆ ಆಯುಕ್ತ ಜೆ.ಟಿ. ಹನುಮಂತರಾಜು.

ಎಲ್ಲ ಸಿಬ್ಬಂದಿ ತಂತ್ರಾಂಶದ ಮೂಲಕವೇ ಕಾರ್ಯನಿರ್ವಹಿಸುವಂತೆ ಮಾಡಿರುವ ಬದಲಾವಣೆಯಿಂದ ತೊಂದರೆ ಆಗಿಲ್ಲ. ನಿಗದಿತ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ.

ಜೆ.ಟಿ. ಹನುಮಂತರಾಜು, ಆಯುಕ್ತ, ನಗರಸಭೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT