ಚಿತ್ರದುರ್ಗ: ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಗುಣಮಟ್ಟದ ಹಾಗೂ ಉಚಿತ ಶಿಕ್ಷಣವನ್ನು ನೀಡಲು ಆಮ್ ಆದ್ಮಿ ಪಕ್ಷ (ಎಎಪಿ) ಬದ್ಧವಾಗಿದೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ್ ತಿಳಿಸಿದರು.
‘ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದೇವೆ. ಎಲ್‌ಕೆಜಿಯಿಂದ ಪದವಿ ಪೂರ್ವ ಹಂತದವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
‘ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಸಿಗುವಂತೆ ಮಾಡಲಾಗುವುದು. ಜನರು ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರು, ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಲಾಗುವುದು. ತಾಲ್ಲೂಕಿನಲ್ಲಿ ಸಾಕಷ್ಟು ಜನರು ಮನೆಗಳಲ್ಲದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ವಸತಿರಹಿತರಿಗೆ 25 ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ಗುರಿಯನ್ನು ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.
‘ಬಹು ವರ್ಷಗಳಿಂದ ಚಿತ್ರದುರ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಚುನಾಯಿತ ಜನಪ್ರತಿನಿಧಿಗಳ ಸ್ವಾರ್ಥ ರಾಜಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದರಿಂದಾಗಿ ತಾಲ್ಲೂಕು ಹಾಗೂ ಜಿಲ್ಲೆಯ ಜನರು ಉತ್ತಮ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಈ ವಂಚನೆ ಇನ್ನೂ ಮುಂದುವರಿಯಬಾರದು’ ಎಂದು ಹೇಳಿದರು.
‘ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಎಎಪಿ ಗುರಿ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ಕ್ಷೇತ್ರದ ಜನರು ಅವಕಾಶ ಮಾಡಿಕೊಟ್ಟರೆ ಉತ್ತಮ ಸೇವೆ ನೀಡುತ್ತೇನೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ’ ಎಂದರು.
ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ರಾಮಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.