ಬುಧವಾರ, ಜನವರಿ 22, 2020
25 °C

ಕಾಳಗದಲ್ಲಿ ಮಣಿದು ಸೆರೆಯಾದ ಸಲಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕಿನ ಜೋಗಿಮಟ್ಟಿ ವನ್ಯಧಾಮದ ಗೋಡೆಕಣಿವೆ ಅರಣ್ಯದಲ್ಲಿದ್ದ ಒಂಟಿಸಲಗವು ಸೆರೆ ಕಾರ್ಯಾಚರಣೆಗೆ ತೆರಳಿದ ದಸರಾ ಆನೆಗಳೊಂದಿಗೆ ಕಾಳಗ ನಡೆಸಿ ಶರಣಾಯಿತು. ಲಾರಿ ಏರುವವರೆಗೂ ಪ್ರತಿರೋಧ ತೋರಲು ನಿರಂತರವಾಗಿ ಪ್ರಯತ್ನಿಸಿ ಸೋಲನ್ನು ಒಪ್ಪಿಕೊಂಡಿತು.

ಸೆರೆ ಕಾರ್ಯಾಚರಣೆ ಒಂದೇ ದಿನದಲ್ಲಿ ಯಶಸ್ಸು ಕಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಯ ಸಂತಸವನ್ನು ಇಮ್ಮಡಿಗೊಳಿಸಿತು. ಆರು ದಿನಗಳಿಂದ ಆನೆಯ ಮೇಲೆ ಹದ್ದಿನಕಣ್ಣಿಟ್ಟು ಕಾಯುತ್ತಿದ್ದ ಸಿಬ್ಬಂದಿ ನಿರಾಳರಾದರು. ಆತಂಕದಲ್ಲೇ ದಿನ ದೂಡುತ್ತಿದ್ದ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

ಬಳ್ಳಾರಿ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ಲಿಂಗರಾಜು ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ತೆಗೆದುಕೊಂಡ ನಿರ್ಧಾರ ಶೀಘ್ರ ಫಲ ನೀಡಿತು. ಪ್ರಾಣಹಾನಿ ತಪ್ಪಿಸಲು ಹಿರಿಯ ಅಧಿಕಾರಿಗಳೂ ಕಾರ್ಯಾಚರಣೆಗೆ ಸಮ್ಮತಿ ನೀಡಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ದಸರಾ ಆನೆಗಳೊಂದಿಗೆ ಬಂದಿದ್ದ ಪರಿಣಿತರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿತು.

ಮೈಸೂರಿನಿಂದ ಹೊರಟಿದ್ದ ದಸರಾ ಆನೆ ‘ಅಭಿಮನ್ಯು’, ‘ಗೋಪಾಲಸ್ವಾಮಿ’ ಹಾಗೂ ‘ಕೃಷ್ಣ’ ಆನೆಗಳು ಸೋಮವಾರ ನಸುಕಿನ ಐದು ಗಂಟೆಗೆ ಗೋಡೆಕಣಿವೆ ತಲುಪಿದವು. ಕೆಲ ಹೊತ್ತು ಆನೆಗಳಿಗೆ ವಿಶ್ರಾಂತಿ ನೀಡಿದ ವೈದ್ಯ ಡಾ.ಪ್ರಯಾಗ್‌ ನೇತೃತ್ವದ ತಂಡ, ಬೆಳಿಗ್ಗೆ 8ಕ್ಕೆ ಕಾರ್ಯಾಚರಣೆ ಶುರು ಮಾಡಿತು. ಶಿವಮೊಗ್ಗದ ಸಕ್ರೆಬೈಲು ಶಿಬಿರದಿಂದ ಬಂದಿದ್ದ ಎರಡು ಆನೆಗಳು ಕೂಡ ತಂಡವನ್ನು ಸೇರಿದವು.

ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪದ ಅರಣ್ಯದಲ್ಲಿದ್ದ ಸಲಗವನ್ನು ಪತ್ತೆಹಚ್ಚಿ ಕಾರ್ಯಾಚರಣೆ ಆರಂಭಿಸಲಾಯಿತು. ನಂದಿಪುರದ ವಡಕಟ್ಟೆಯಲ್ಲಿ ನೀರು ಕುಡಿದು, ಮೆಕ್ಕೆಜೋಳ ತಿಂದು ಕಾಡಿಗೆ ಮರಳಿದ ಸಲಗ ವಿಶ್ರಾಂತಿಯಲ್ಲಿತ್ತು. ದಸರಾ ಆನೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡು ಕಾಡಿನಲ್ಲಿ ಕಣ್ಮರೆಯಾಗಲು ಪ್ರಯತ್ನಿಸಿತು.

ಅರಿವಳಿಕೆ ಮದ್ದು ಹಿಡಿದು ಸನ್ನದ್ಧರಾಗಿದ್ದ ತಜ್ಞರು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಕಾಡಿನ ಮಧ್ಯದಲ್ಲಿದ್ದ ಸಲಗವನ್ನು ವಡಕಟ್ಟೆ ಕೆರೆ ಸಮೀಪದ ಬಯಲಿಗೆ ತರುವ ಪ್ರಯತ್ನ ಆರಂಭವಾಯಿತು. ಸುಮಾರು ಎಂಟತ್ತು ಕಿ.ಮೀ. ಓಡಾಡಿದ ಸಲಗ ಸೆರೆ ಕಾರ್ಯಾಚರಣೆಗೆ ಬಂದಿದ್ದ ಆನೆಗಳೊಂದಿಗೆ ಕಾಳಗಕ್ಕೆ ಇಳಿಯಿತು. ‘ಅಭಿಮನ್ಯು’ ಹಾಗೂ ‘ಗೋಪಾಲಸ್ವಾಮಿ’ಗಳೊಂದಿಗೆ ಬಹುಹೊತ್ತು ಸೆಣೆಸಿತು.

ಅರಿವಳಿಕೆ ಮದ್ದು ನೀಡಿದ ಕೆಲ ಹೊತ್ತಿಗೆ ಪ್ರಜ್ಞೆತಪ್ಪಿದ ಸಲಗಕ್ಕೆ ಔಷಧ ನೀಡಲಾಯಿತು. ಕೊರಳು ಹಾಗೂ ಹಿಂಬದಿಯ ಎರಡು ಕಾಲುಗಳಿಗೆ ಹಗ್ಗ ಬಿಗಿದು ಎಳೆಯಲಾಯಿತು. ಎರಡು ಕಿ.ಮೀ. ದೂರದಲ್ಲಿದ್ದ ಲಾರಿಗೆ ಸಲಗವನ್ನು ಕರೆತರಲು ಸಾಹಸ ಮಾಡಬೇಕಾಯಿತು.

ಭದ್ರಾ ಅಭಯಾರಣ್ಯದಿಂದ ದಾರಿತಪ್ಪಿ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡಿದ್ದ 22 ವರ್ಷದ ಸಲಗ ತಾಳ್ಯದಲ್ಲಿ ಹೆಜ್ಜೆಗುರುತು ಉಳಿಸಿತ್ತು. ಜೋಗಿಮಟ್ಟಿ ವನ್ಯಧಾಮಕ್ಕೆ ಬರುವ ಮೊದಲ ಕಕ್ಕೇರು, ಕೆನ್ನೆಡಲು ಗ್ರಾಮದ ತೋಟದ ಬೇಲಿಗಳನ್ನು ಹಾಳು ಮಾಡಿತ್ತು. ರಾತ್ರಿ ಮಾತ್ರ ಜಮೀನುಗಳಿಗೆ ನುಗ್ಗಿ ಮೆಕ್ಕೆಜೋಳ ತಿಂದು ಅರಣ್ಯಕ್ಕೆ ಮರಳುತ್ತಿತ್ತು.

ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಜೋಗಿಮಟ್ಟಿ ವ್ಯಾಪ್ತಿಯಲ್ಲಿ ಹಸಿರು ಮೈದಳೆದಿದೆ. ವನ್ಯಧಾಮ ವ್ಯಾಪ್ತಿಯ ಅಲ್ಲಲ್ಲಿ ನಿರ್ಮಿಸಿದ ಕಂದಕಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಆನೆ ಈ ಅರಣ್ಯ ಬಿಟ್ಟು ಬೇರೆಡೆಗೆ ಹೋಗಿರಲಿಲ್ಲ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು