ಚಿತ್ರದುರ್ಗ: ಜಿಲ್ಲೆಯಲ್ಲಿ ಮೆಕ್ಕೆಜೋಳ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಬೆಲೆ ಕುಸಿತ ರೈತರನ್ನು ಕಾಡುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದಿಂದಲೇ ಮೆಕ್ಕೆಜೋಳ ಖರೀದಿಸುವ ನಿರ್ಧಾರ ಕೈಗೊಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 2,350 ಬೆಲೆ ದೊರೆತಿತ್ತು. ಬಂಪರ್ ಬೆಲೆ ಸಿಕ್ಕಿದ್ದ ಕಾರಣ ಬಹುತೇಕ ರೈತರು ಈ ಬಾರಿ ಈರುಳ್ಳಿ ಬಿಟ್ಟು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ, ಈ ವರ್ಷ ಕ್ವಿಂಟಲ್ ಬೆಲೆ ₹ 1,700ಕ್ಕೆ ಕುಸಿದಿದೆ. ರೈತರು ಈಗಾಗಲೇ ಕಟಾವು ಆರಂಭಿಸಿದ್ದು 6.5 ಲಕ್ಷ ಟನ್ ಉತ್ಪನ್ನದ ನಿರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾತಿನಿಂದ ರೈತರು ಸಂತಸ ವ್ಯಕ್ತಪಡಿಸಿದ್ದು, ಖರೀದಿ ಕೇಂದ್ರ ಸ್ಥಾಪನೆಯ ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರ ಸರ್ಕಾರ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 2,400 ದರ ನಿಗದಿ ಮಾಡಿದ್ದರೂ ಕಳೆದ 7 ವರ್ಷಗಳಿಂದ ರಾಜ್ಯ ಸರ್ಕಾರ ಖರೀದಿ ಮಾಡಿಲ್ಲ. ಈ ಬಾರಿ ರಾಜ್ಯದ ವಿವಿಧೆಡೆ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳವಾಗಿದ್ದು ಸರ್ಕಾರದಿಂದ ಖರೀದಿಸಲು ಎಲ್ಲಾ ಜಿಲ್ಲೆಗಳಿಂದಲೂ ರೈತರು ಒತ್ತಾಯಿಸಿದ್ದರು. ಗದಗ್ ಜಿಲ್ಲೆ ಲಕ್ಷ್ಮೆಶ್ವರದಲ್ಲಿ ಕುಮಾರ ಮಹಾರಾಜ ಸ್ವಾಮೀಜಿ ಉಪವಾಸ ಧರಣಿ ಆರಂಭಿಸಿದ್ದರು. ರೈತರ ಒತ್ತಡಕ್ಕೆ ಮಣಿದ ಸರ್ಕಾರ ಮೆಕ್ಕೆಜೋಳ ಖರೀದಿಸುವ ನಿರ್ಧಾರ ಪ್ರಕಟಿಸಿದೆ.

ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕೋಟೆನಾಡಿನ ಮೆಕ್ಕೆಜೋಳ ಬೆಳೆಗಾರರು ಅಪಾರ ನಿರೀಕ್ಷೆಯಲ್ಲಿದ್ದಾರೆ. ನಿತ್ಯವೂ ಕೃಷಿ ಇಲಾಖೆ ಕಚೇರಿಗೆ ತೆರಳಿ ಖರೀದಿ ಕೇಂದ್ರ ಸ್ಥಾಪನೆ ಯಾವಾಗ, ನೋಂದಣಿ ಪ್ರಕ್ರಿಯೆ ಆರಂಭವಾಗಿದೆಯೇ, ಖರೀದಿಸುವ ಮೆಕ್ಕೆಜೋಳದ ಮಿತಿ ಎಷ್ಟು ಎಂಬ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಮೆಕ್ಕೆ ಜೋಳ ಮಾರಾಟಕ್ಕೆ ತುದಿಗಾಲ ಮೇಲೆ ನಿಂತಿರುವ ರೈತರು ನೋಂದಣಿಗೆ ಬೇಕಾದ ಎಲ್ಲಾ ದಾಖಲಾತಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.

‘ಮೆಕ್ಕೆಜೋಳ ಕಟಾವು ಮಾಡುವ ಹಂತದಲ್ಲೇ ಖರೀದಿ ಕೇಂದ್ರ ಸ್ಥಾಪನೆಯಾಗಬೇಕು. ಈಗಾಗಲೇ ಶೇ 30ರಷ್ಟು ಕಟಾವು ಮುಗಿದಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಿಕೊಳ್ಳುವುದಕ್ಕೆ ಮೊದಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಸಾಲ ಮಾಡಿಕೊಂಡಿರುವ ನಾವು ಹೆಚ್ಚು ದಿನ ಮೆಕ್ಕೆಜೋಳ ಇಟ್ಟುಕೊಳ್ಳುವುದಿಲ್ಲ. ಆದಷ್ಟು ಬೇಗ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ತುರುವನೂರಿನ ರೈತ ಮಲ್ಲಿಕಾರ್ಜುನಪ್ಪ ಒತ್ತಾಯಿಸಿದರು.

ಹೊಳಲ್ಕೆರೆ, ಚಿತ್ರದುರ್ಗ ಭಾಗದ ರೈತರು ಮಳೆಯಾಶ್ರಿತವಾಗಿಯೇ ಮೆಕ್ಕೆಜೋಳ ಬೆಳೆದಿದ್ದಾರೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಆಶ್ರಿತ ಪ್ರದೇಶಕ್ಕೆ ಮೆಕ್ಕೆಜೋಳ ಬೆಳೆದಿದ್ದಾರೆ. 1.10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಈ ಬಾರಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಕಳೆದೊಂದು ವರ್ಷದಿಂದ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಹೆಚ್ಚಿನ ರೈತರು ಮೆಕ್ಕೆಜೋಳಕ್ಕೆ ಮೊರೆ ಹೋಗಿದ್ದಾರೆ. ಜುಲೈ, ಆಗಸ್ಟ್ ತಿಂಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ಬೆಳೆ ಈಗ ಕೈಗೆ ದೊರೆಯುತ್ತಿದೆ.

‘ಮೆಕ್ಕೆಜೋಳ ಖರೀದಿಯ ಕಾರ್ಯಸೂಚಿಯನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡಬೇಕು. ರೈತರು ಬೆಳೆದ ಬೆಳೆಯನ್ನು ಪೂರ್ಣಪ್ರಮಾಣದಲ್ಲಿ ಖರೀದಿ ಮಾಡಬೇಕು. ಖರೀದಿಗೆ ಮಿತಿಗೊಳಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಒತ್ತಾಯಿಸಿದರು.

ಮೆಕ್ಕೆಜೋಳ ಖರೀದಿ ಸಂಬಂದ ಸರ್ಕಾರದಿಂದ ಈವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಸೂಚನೆ ಬಂದ ಕೂಡಲೇ ನಿಯಮಾನುಸಾರ ರೈತರ ಹೆಸರು ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು -ಬಿ.ಮಂಜುನಾಥ್ ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.