ಚಿತ್ರದುರ್ಗ: ಏಕದಂತ, ವರಸಿದ್ಧಿ ವಿನಾಯಕನ ಹಬ್ಬ ಶುಕ್ರವಾರ ನಡೆಯಲಿದ್ದು, ಗಣಪನನ್ನು ಸ್ವಾಗತಿಸಲು ಮನೆ–ಮನಗಳು ಸಜ್ಜಾಗಿವೆ. ಸರ್ಕಾರ ಉತ್ಸವಕ್ಕೆ ಐದು ದಿನ ಅವಕಾಶ ನೀಡಿರುವ ಕಾರಣ ಗುರುವಾರವೇ ಭಕ್ತರು ಮಂಟಪ ನಿರ್ಮಾಣ ಸೇರಿ ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದರು.
ಗಣೇಶ ಚತುರ್ಥಿ ಪ್ರಯುಕ್ತ ನಗರ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ಗುರುವಾರ ಜನಜಂಗುಳಿ ನಿರ್ಮಾಣವಾಗಿತ್ತು. ಪೂಜಾ ಸಾಮಗ್ರಿ ಖರೀದಿಸಲು ನಾಗರಿಕರು ಮುಗಿಬಿದ್ದರು. ವ್ಯಾಪಾರ ಭರಾಟೆ ಇತ್ತು.
ಕೋವಿಡ್ ಕಾರಣಕ್ಕೆ ಹಿಂದಿನ ವರ್ಷ ಕಳೆಗುಂದಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಮರುಜೀವ ಬಂದಂತಾಗಿದೆ. ಹೊರ ಜಿಲ್ಲೆಗಳಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನಾಲ್ಕು ಅಡಿಯ ಗಣೇಶ ಮೂರ್ತಿಗಳಿಗೂ ಬೇಡಿಕೆ ಬಂದಿದೆ. ಅನೇಕರು ಖರೀದಿಸಿ ವಾಹನಗಳಲ್ಲಿ ಕೊಂಡೊಯ್ದ ದೃಶ್ಯ ಕಂಡುಬಂತು. ಅದೇ ರೀತಿ ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳ ಖರೀದಿಯೂ ನಡೆಯಿತು. ಜನರು ಗಣಪನ ಜತೆಗೆ ವಸ್ತುಗಳನ್ನು ಖರೀದಿಸಲು ಉತ್ಸಾಹ ತೋರಿದರು. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖದ ಹಾದಿಯಲ್ಲಿ ಇರುವ ಕಾರಣ ಯಾರಲ್ಲೂ ಭೀತಿ ಕಾಣಲಿಲ್ಲ.
ಹೂವು, ಹಣ್ಣು, ಕಾಯಿ, ಎಲೆ, ಬಾಳೆದಿಂಡು, ಹೊಂಬಾಳೆ ಸೇರಿ ಇತರ ಪೂಜಾ ಸಾಮಗ್ರಿ ಖರೀದಿಸಲು ಹಲವೆಡೆ ನಾಗರಿಕರು ಮುಂದಾದರು. ಮನೆಯ ಬಾಗಿಲು, ದೇವರ ಕೋಣೆ, ಗಣೇಶ ಮೂರ್ತಿಗಾಗಿ ವಿವಿಧ ಬಗೆಯ ಹೂ, ಹಾರಗಳನ್ನು ಕೊಳ್ಳಲು ಆಸಕ್ತಿ ತೋರಿದರು. ಆದರೆ, ಬೆಲೆ ಹೆಚ್ಚಿದ್ದರಿಂದ ಖರೀದಿ ಪ್ರಮಾಣ ಕಡಿಮೆ ಮಾಡಿಕೊಂಡರು.
ಹಬ್ಬಕ್ಕಾಗಿ ವಿಶೇಷ ಮಂಟಪ ನಿರ್ಮಿಸಿ ಮನೆಗಳಲ್ಲೂ ಅದ್ದೂರಿಯಾಗಿ ಹಬ್ಬ ಆಚರಿಸಲು ಮಹಿಳೆಯರು ಹಲವು ಅಲಂಕಾರಿಕ ವಸ್ತು ಖರೀದಿಸಿದರು.
ಗಗನಕ್ಕೇರಿದ ಪುಷ್ಪ ದರ:ಸಗಟು ವ್ಯಾಪಾರ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಕಲರ್, ಬಿಳಿ ಸೇವಂತಿ ಹೂ 8 ಮಾರು ಪುಷ್ಪಕ್ಕೆ ತಲಾ ₹ 1,000 ಇತ್ತು. ಇದೇ ದರಕ್ಕೆ ಕನಕಾಂಬರ, ಮಲ್ಲಿಗೆ 12 ಮಾರಿನಂತೆ ಹೂ ಖರೀದಿ ಆಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ ₹ 300ರಂತೆ ಮಾರಾಟವಾದವು.
ಗಣಪತಿ ಮೂರ್ತಿಗೆ ಹಾಕುವ ಹಾರ ₹ 100ರಿಂದ ₹ 5,000 ರವರೆಗೆ ಮಾರಾಟವಾದವು. ವೀಳ್ಯದ ಎಲೆ ಕಟ್ಟಿಗೆ ₹ 80, ಮಾವಿನ ಸೊಪ್ಪು ₹ 30, ಬಾಳೆ ದಿಂಡು ಜೋಡಿಗೆ ₹ 30, ತೆಂಗಿನಕಾಯಿ ₹ 20ರಿಂದ 30ರವರೆಗೂ ಮಾರಾಟವಾದವು. ಗಣಪನಿಗೆ ಇಷ್ಟವಾದ ಗರಿಕೆ ಪತ್ರೆ, ಬಿಲ್ವ ಪತ್ರೆ ಕೂಡ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಇದ್ದವು.
ಆನೆಬಾಗಿಲು ರಸ್ತೆ, ಮೆದೇಹಳ್ಳಿ ರಸ್ತೆ, ಸಂತೆಹೊಂಡದ ರಸ್ತೆ ಸೇರಿ ಜಿಲ್ಲೆಯ ವಿವಿಧೆಡೆ ಗಣೇಶನ ಹಬ್ಬಕ್ಕಾಗಿ ಪೂಜಾ ಸಾಮಗ್ರಿ ಖರೀದಿಸುವ ಭರಾಟೆಯಲ್ಲಿ ಜನರು ಅಂತರ ಮರೆತರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.