ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರಿಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಡಿ. ಸುಧಾಕರ್‌
Published : 27 ಮೇ 2023, 23:39 IST
Last Updated : 27 ಮೇ 2023, 23:39 IST
ಫಾಲೋ ಮಾಡಿ
Comments

ಸುವರ್ಣಾ ಬಸವರಾಜ್‌

ಹಿರಿಯೂರು: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿ ಹಿರಿಯೂರು ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ‘ಗ್ಯಾರಂಟಿ’ ಎಂಬ ಮಾತು 2008ರವರೆಗೂ ಇತ್ತು. ಇದೀಗ 2023ರಲ್ಲಿ ಮತ್ತೊಮ್ಮೆ ಈ ಮಾತು ನಿಜವಾಗಿದೆ.

ನಾಲ್ಕು ದಶಕಗಳ ಕಾಲ ಹಾವು–ಏಣಿ ಆಟದಂತೆ ಒಬ್ಬರನ್ನು ಸೋಲಿಸಿ ಮತ್ತೊಬ್ಬರು ಗೆಲ್ಲುತ್ತಿದ್ದ ಕೆ.ಎಚ್. ರಂಗನಾಥ್ ಮತ್ತು ಡಿ. ಮಂಜುನಾಥರನ್ನು ಹೊರಗಿಟ್ಟು ಸಚಿವ ಸಂಪುಟ ರಚಿಸುವ ದುಸ್ಸಾಹಸಕ್ಕೆ ಯಾವ ಮುಖ್ಯಮಂತ್ರಿಯೂ ಮುಂದಾಗಿರಲಿಲ್ಲ. ಅಷ್ಟರಮಟ್ಟಿಗೆ ಅವರಿಬ್ಬರೂ ಪ್ರಭಾವ ಶಾಲಿಗಳಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯಲ್ಲಿ ಸುಧಾಕರ್ ಹೆಸರು ಸೇರುವುದು, ಬಿಡುವುದು ಆಗುತ್ತಲೇ ಇತ್ತು. ಶುಕ್ರವಾರ ಸಂಜೆ ಅಂತಿಮವಾಗಿ ಸುಧಾಕರ್ ಅವರ ಹೆಸರು ಪ್ರಕಟವಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಡಿ. ಸುಧಾಕರ್ ಅವರು 2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಅನಿವಾರ್ಯವಾಗಿ ಹಿರಿಯೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಅಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಪಕ್ಷೇತರರಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಲು ಮೂರ್ನಾಲ್ಕು ಶಾಸಕರ ಕೊರತೆ ಬಿದ್ದಾಗ ಗೂಳಿಹಟ್ಟಿ ಡಿ. ಶೇಖರ್ ಹಾಗೂ ಡಿ. ಸುಧಾಕರ್ ಅವರು ಸರ್ಕಾರಕ್ಕೆ ಬೆಂಬಲ ಘೋಷಿಸಿ ಸಚಿವರಾಗಿದ್ದರು. ಆಗ ಸುಧಾಕರ್‌ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು.

ಸುಧಾಕರ್ ಅವರ ಚಿಕ್ಕಪ್ಪ ಎನ್. ಜಯಣ್ಣ 1978 ಮತ್ತು 1989ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಶಾಸಕರಾಗಿದ್ದರು. ಆಗ ಅವರ ರಾಜಕೀಯ ಉಸ್ತುವಾರಿ ನೋಡಿಕೊಂಡಿದ್ದು ಸುಧಾಕರ್. ಉದ್ಯಮದ ಜೊತೆ ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಸುಧಾಕರ್ ಅವರು 2018ರಲ್ಲಿ ಒಮ್ಮೆ ಸೋಲು ಅನುಭವಿಸಿದ್ದು ಹೊರತುಪಡಿಸಿದರೆ ನಾಲ್ಕು ಬಾರಿ ಶಾಸಕರಾಗಿದ್ದಾರೆ.

2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ಸಿಗದಿದ್ದಾಗ ಕಾಯಂ ಸಚಿವ ಸ್ಥಾನದ ಕ್ಷೇತ್ರ ಎಂಬ ಖ್ಯಾತಿಗೆ ಕುಂದು ಬಂದಿತ್ತು. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಕಾಯಂ ಮಂತ್ರಿಗಿರಿಯ ಕ್ಷೇತ್ರ ಎಂಬ ಮಾತನ್ನು ಸುಧಾಕರ್ ನಿಜವಾಗಿಸಿದ್ದಾರೆ.

1961ರಲ್ಲಿ ಚಳ್ಳಕೆರೆಯಲ್ಲಿ ಜನಿಸಿರುವ ಡಿ. ಸುಧಾಕರ್, ಪಿಯುಸಿ ನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ. ಪತ್ನಿ ಹರ್ಷಿಣಿ, ಪುತ್ರ ಹಾಗೂ ಪುತ್ರಿಯೊಂದಿಗೆ ಸಾಂಸಾರಿಕ ಬದುಕು ನಡೆಸುತ್ತಿರುವ ಸುಧಾಕರ್, ತಮ್ಮ ಚಿಕ್ಕಪ್ಪ ಎನ್. ಜಯಣ್ಣ ಅವರ ರಾಜಕೀಯ ಗರಡಿಯಲ್ಲಿ ಪಳಗಿದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಜೈನ ಸಮುದಾಯದ ಮತಗಳು ನೂರು ದಾಟದಿದ್ದರೂ ಗೆಲುವಿನ ನಗೆ ಬೀರುತ್ತಿರುವುದರ ಹಿಂದೆ ರಾಜಕೀಯ ಮುತ್ಸದ್ಧಿತನವಿದೆ. ತಮ್ಮಲ್ಲಿಗೆ ಬರುವ ಎಲ್ಲರನ್ನೂ ಜಾತಿ–ವರ್ಗದ ವ್ಯತ್ಯಾಸ ನೋಡದೆ ಅಪ್ಪಿಕೊಳ್ಳುವ ಗುಣ, ಕಷ್ಟದಲ್ಲಿರುವವರಿಗೆ ಹಿಂದೆ ಮುಂದೆ ನೋಡದೆ ನೆರವು ನೀಡುವ ಪರಿ, ಅಧಿಕಾರ ಇರಲಿ–ಇಲ್ಲದಿರಲಿ ಸಂಘಟನೆ ಮಾಡುವುದು ಗೆಲುವಿನ ಗುಟ್ಟುಗಳಾಗಿವೆ.

ಪ್ರಸ್ತುತ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸುಧಾಕರ್ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಉತ್ತಮ ನಿದರ್ಶನವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT