ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ: ಬಹಿರಂಗ ಚರ್ಚೆಗೆ ಬರುವಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಹ್ವಾನ

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಚಿವ ಪ್ರಭು ಚವಾಣ್‌ಗೆ ಆಹ್ವಾನ
Last Updated 30 ಆಗಸ್ಟ್ 2021, 13:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಅವರಿಗೆ ಜಿಲ್ಲಾ ಮಾದಿಗ ಸಮಾಜ ಆಹ್ವಾನ ನೀಡಿದೆ.

‘ಅಸ್ಪೃಶ್ಯ ಸಮುದಾಯಕ್ಕೆ ಒಳಮೀಸಲಾತಿಯ ಅಗತ್ಯ ಏನಿದೆ ಎಂಬುದರ ಬಗ್ಗೆ ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ವರದಿ ಅವೈಜ್ಞಾನಿಕವೆಂದು ಟೀಕೆ ಮಾಡುವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಚರ್ಚೆಗೆ ಕರೆದಿದ್ದಾರೆ. ಅವರ ಪರವಾಗಿ ಸಮುದಾಯ ಚರ್ಚೆಗೆ ಸಿದ್ಧವಿದೆ’ ಎಂದು ಮಾದಿಗ ಸಮಾಜದ ಮುಖಂಡ ಹುಲ್ಲೂರು ಕುಮಾರಸ್ವಾಮಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವ ನೆಪದಲ್ಲಿ ಸ್ವಾಮೀಜಿ ಅವರು ನಾರಾಯಣಸ್ವಾಮಿ ಅವರನ್ನು ಟೀಕಿಸುತ್ತಿದ್ದಾರೆ. ವೈಯಕ್ತಿಕವಾಗಿ ಸಚಿವರನ್ನು ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಿಂದ ಇದು ನಡೆಯುತ್ತಿದೆ. ಚುನಾವಣೆಯ ಕಾರಣಕ್ಕೆ ಆಗ ಮೌನವಾಗಿದ್ದೆವು. ಇನ್ನು ಮುಂದೆ ಹೀಗೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

‘ಸರ್ಕಾರ ನೇಮಕ ಮಾಡಿದ ಆಯೋಗ ಆರು ವರ್ಷ ನಿರಂತರವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ವೈಜ್ಞಾನಿಕ ಆಧಾರದ ಮೇರೆಗೆ ಅಧ್ಯಯನ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಭೋವಿ, ಲಂಬಾಣಿ, ಕೊರಚ ಹಾಗೂ ಕೊರಮ ಎಂಬ ನಾಲ್ಕು ಜಾತಿಗಳು ಶೇ 70ರಷ್ಟು ಮೀಸಲಾತಿ ಸೌಲಭ್ಯ ಪಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ. ಈ ಸತ್ಯದ ಅರಿವು ಇರುವ ಕಾರಣಕ್ಕೆ ವರದಿಗೆ ಸ್ವಾಮೀಜಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಇದರಲ್ಲಿ ಮಾದಿಗ ಸಮುದಾಯದ 50 ಹಾಗೂ ಹೊಲೆಯ ಸಮುದಾಯದ 29 ಉಪಜಾತಿಗಳಿವೆ. 22 ಇತರ ಜಾತಿಗಳಿವೆ. ಈ ಎಲ್ಲ ಜಾತಿಗಳಲ್ಲಿ ಒಳಮೀಸಲಾತಿ ಸೌಲಭ್ಯಕ್ಕೆ ವಿರೋಧ ಇರುವುದು ನಾಲ್ಕು ಜಾತಿಗಳು ಮಾತ್ರ. ಈಗಲೂ ಇವರನ್ನು ಸಹೋದರ ಸಮುದಾಯಗಳೆಂದೇ ಗೌರವಿಸುತ್ತೇವೆ. ವಿರೋಧ ಬಿಟ್ಟು ಮೀಸಲು ಸೌಲಭ್ಯವನ್ನು ಹಂಚಿಕೊಳ್ಳಲು ಮುಂದೆ ಬನ್ನಿ’ ಎಂದರು.

ಮುಖಂಡರಾದ ಎಸ್‌.ಜಗದೀಶ್‌, ಹನುಮಂತಪ್ಪ ದುರ್ಗ, ರಾಜಪ್ಪ ಜೆ.ಜೆ.ಹಟ್ಟಿ, ವಕೀಲ ಚಂದ್ರಪ್ಪ ಇದ್ದರು.

* ಮೀಸಲಾತಿ ಸೌಲಭ್ಯದಿಂದ ಕೆಲ ಜಾತಿಗಳನ್ನು ಕೈಬಿಡಬೇಕು ಎಂಬುದು ನಮ್ಮ ಅಪೇಕ್ಷೆಯಲ್ಲ. ಇಂತಹ ಉಲ್ಲೇಖ ಕೂಡ ವರದಿಯಲ್ಲಿಲ್ಲ. ಜನಸಂಖ್ಯೆ ಆಧಾರಿತ ಮೀಸಲಾತಿ ಪಡೆಯುವುದು ಸಂವಿಧಾನಬದ್ಧ ಹಕ್ಕು.

– ವೈ.ರಾಜಣ್ಣ, ಜಿಲ್ಲಾ ಮಾದಿಗ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT