ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸಿ- ಗೂಳಿಹಟ್ಟಿ ಶೇಖರ್ ಕರೆ

Last Updated 28 ಡಿಸೆಂಬರ್ 2021, 4:53 IST
ಅಕ್ಷರ ಗಾತ್ರ

ಹೊಸದುರ್ಗ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು. ನೀತಿ ಸಂಹಿತೆ ಜಾರಿಯಾದರೆ ಕೆಲಸಗಳು ನಿಲ್ಲುತ್ತವೆ. ಹಾಗಾಗಿ ಕಾಲಹರಣ ಮಾಡದೆ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಪುರಸಭಾ ಸದಸ್ಯರಿಗೆ ಕರೆ ನೀಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ 2021-22ನೇ ಸಾಲಿನ ಬಜೆಟ್ ಮಂಡನೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಕೋವಿಡ್‍ ಕಾರಣ 2 ವರ್ಷಗಳಿಂದ ನೀರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಂದಿಲ್ಲ. ಪುರಸಭಾ ಸದಸ್ಯರು ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಶ್ರೀಧರ್‍ ಭಟ್ ಮಾತನಾಡಿ, ‘ಪಟ್ಟಣದ ಅಯ್ಯಪ್ಪಸ್ವಾಮಿ ಬಡಾವಣೆ ಅತ್ಯಂತ ಹಿಂದುಳಿದಿದೆ. ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಈ ಬಾರಿಯ ಅನುದಾನದಲ್ಲಿ ಅಭಿವೃದ್ಧಿಪಡಿಸಿ’ ಎಂದು ಸಲಹೆ ನೀಡಿದರು.

‘ಬಡಾವಣೆಯ ಅಭಿವೃದ್ಧಿಗೆ ₹ 3 ಕೋಟಿಯಿಂದ ₹ 4 ಕೋಟಿ ಬೇಕಾಗುತ್ತದೆ. ಅಷ್ಟೊಂದು ಅನುದಾನ ಒಮ್ಮೆಲೆ ಒಂದೇ ಬಡಾವಣೆಗೆ ಇಡಲು ಸಾಧ್ಯವಾಗುವುದಿಲ್ಲ. ಈ ಬಾರಿ ₹ 1 ಕೋಟಿ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕರು ಉತ್ತರಿಸಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ಬಾಲರಾಜ್, ‘ಪಟ್ಟಣದ ಹಳೆ ಮಾಧ್ಯಮಿಕ ಶಾಲೆ ಶತಮಾನ ಆಚರಿಸಿಕೊಂಡರೂ ಅದಕ್ಕೆ ಸೂಕ್ತ ರಕ್ಷಣೆಯಿಲ್ಲ. ಅನೈತಿಕ ಚಟುವಟಿಕೆ ತಾಣವಾಗಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು’ ಎಂದು ತಿಳಿಸಿದರು.

ಪಟ್ಟಣದಲ್ಲಿ ರುದ್ರಭೂಮಿಗೆ ಬೇಕಾದ 10 ಎಕರೆ ಭೂಮಿಯನ್ನು ಪಟ್ಟಣದ 10 ಕಿ.ಮೀ. ವ್ಯಾಪ್ತಿಯಲ್ಲಿ ಗುರುತಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕರುಸೂಚಿಸಿದರು.

ಸಭೆಯಲ್ಲಿ ಪಟ್ಟಣದ ಅನೇಕ ಬಡಾವಣೆಯಲ್ಲಿ ರಸ್ತೆ, ಚರಂಡಿ ಸೇರಿ ಮೂಲಸೌಕರ್ಯಗಳ ಕೊರತೆ ಇದೆ. ಈ ಬಗ್ಗೆ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಶಾಸಕರು ಗಮನ ನೀಡಬೇಕು ಎಂದು ನಾಗರಿಕರು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ, ಪ್ರಭಾರ ಮುಖ್ಯಾಧಿಕಾರಿ, ಪುರಸಭಾ ಸದಸ್ಯರು, ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ನಾಗರಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT