ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನತಾ ಕರ್ಫ್ಯೂ’ಗೆ ಕೋಟೆನಾಡು ಚಿತ್ರದುರ್ಗ ಸ್ತಬ್ಧ

ಕೊರೊನಾ ಸೋಂಕು ನಿಗ್ರಹಕ್ಕೆ ಪಣ, ಪ್ರಧಾನಿ ಕರೆಗೆ ವ್ಯಾಪಕ ಬೆಂಬಲ
Last Updated 22 ಮಾರ್ಚ್ 2020, 13:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಜನಸಂಚಾರವೇ ಇಲ್ಲದ ರಸ್ತೆಯಲ್ಲಿ ಬಾಗಿಲು ಮುಚ್ಚಿದ ಅಂಗಡಿಗಳು. ಸದಾ ಗಿಜಿಗುಡುತ್ತಿದ್ದ ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೊ ಎನ್ನುವ ವಾತಾವರಣ. ಜನದಟ್ಟಣೆಯಿಂದ ಕೂಡಿರುತ್ತಿದ್ದ ಬಸ್‌ ನಿಲ್ದಾಣದಲ್ಲಿ ಕ್ರಿಕೆಟ್ ಆಡಿದ ಯುವಕರು. ವಾಹನ ದಟ್ಟಣೆ ಹೆಚ್ಚಾಗಿರುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಖಾಲಿ ಖಾಲಿ...

ಇವು ಭಾನುವಾರ ಚಿತ್ರದುರ್ಗದಲ್ಲಿ ಕಂಡ ದೃಶ್ಯಗಳು. ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ‘ಜನತಾ ಕರ್ಫ್ಯೂ’ಗೆ ಕೋಟೆನಾಡಿನಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆ 7ರಿಂದ ರಾತ್ರಿಯವರೆಗೂ ಜನರು ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಉಳಿದು, ಸೋಂಕಿನ ವಿರುದ್ಧ ಸೆಣೆಸಲು ಬದ್ಧರಾಗಿರುವ ಸಂದೇಶ ರವಾನಿಸಿದರು.

ಬಿಕೊ ಎನ್ನುತ್ತಿದ್ದ ರಸ್ತೆಗಳು:ಸದಾ ವಾಹನ ಮತ್ತು ಜನದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆಗಳು ಭಾನುವಾರ ಬಿಕೊ ಎನ್ನುತ್ತಿದ್ದವು. ಬಿ.ಡಿ. ರಸ್ತೆ, ಮೆದೆಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆ, ತುರುವನೂರು ರಸ್ತೆ, ದಾವಣಗೆರೆ ರಸ್ತೆಯಲ್ಲಿ ಜನಸಂಚಾರವೇ ಕಾಣಲಿಲ್ಲ. ನೀರವ ಮೌನಕ್ಕೆ ಶರಣಾದ ನಗರದ ರಸ್ತೆಗಳು ಕೆಲವೊಮ್ಮೆ ಭೀತಿಯುಂಟು ಮಾಡುತ್ತಿರುವಂತೆ ಭಾಸವಾಗುತ್ತಿದ್ದವು.

ನಗರದ ಬಹುತೇಕ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಯಾವೊಬ್ಬರು ಅಂಗಡಿಯನ್ನು ತೆರೆಯುವ ಪ್ರಯತ್ನ ಮಾಡಲಿಲ್ಲ. ನಸುಕಿನಲ್ಲಿ ತೆರೆದಿದ್ದ ಹೂ, ಹಾಲು ಹಾಗೂ ಕೆಲ ಬೇಕರಿ ಮಳಿಗೆಗಳು ನಿಗದಿಯಂತೆ 7ಕ್ಕೆ ಬಾಗಿಲು ಮುಚ್ಚಿದವು. ಬೆಳಿಗ್ಗೆ ತೆರೆದಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮಳಿಗೆಗಳು ಬಳಿಕ ಬಾಗಿಲು ಮುಚ್ಚಿದವು. ಅಲ್ಲಲ್ಲಿ ಕೆಲ ಟೀ ಅಂಗಡಿ, ದಿನಸಿ ಮಳಿಗೆಗಳು ಮಾತ್ರ ತೆರೆದಿದ್ದವು. ಉಳಿದಂತೆ ಇಡೀ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಸಂಚಾರ ಸಂಪೂರ್ಣ ಸ್ಥಗಿತ:‘ಕರ್ಫ್ಯೂ’ ಅಂಗವಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌, ಆಟೊ, ಲಾರಿ ಸೇರಿ ಸರಕು ಸಾಗಣೆ ವಾಹನ ಕೂಡ ರಸ್ತೆಗೆ ಇಳಿಯಲಿಲ್ಲ. ಅಲ್ಲಲ್ಲಿ ದ್ವಿಚಕ್ರ ವಾಹನಗಳು ಮಾತ್ರ ಕಂಡುಬರುತ್ತಿದ್ದವು. ಕುತೂಹಲಕ್ಕೆ ಕೆಲವರು ವಾಹನದಲ್ಲಿ ಸುತ್ತಾಡಿ ಪರಿಸ್ಥಿತಿ ಅವಲೋಕಿಸಿದರು.

ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಸೇವೆ ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಭರವಸೆ ನೀಡಿತ್ತು. ಪ್ರಯಾಣಿಕರ ಕೊರತೆಯಿಂದ ನಸುಕಿನ 3 ಗಂಟೆಯ ಬಳಿಕ ಸಂಚಾರವನ್ನು ಸ್ಥಗಿತಗೊಳಿಸಿತು. ಹೊಸಪೇಟೆ, ಕಲಬುರ್ಗಿ, ಬೆಂಗಳೂರು, ಹುಬ್ಬಳ್ಳಿ ಭಾಗದಿಂದ ಹೊರಟಿದ್ದ ಕೆಲ ಬಸ್‌ಗಳು ಮಾತ್ರ ಆಗಾಗ ಕಾಣಿಸಿಕೊಂಡವು. ಬೆಳಿಗ್ಗೆ 8 ಗಂಟೆಯ ಬಳಿಕ ಎಲ್ಲ ಬಸ್‌ಗಳು ಡಿಪೊ ಸೇರಿದವು. ಅವುಗಳನ್ನು ಶುಚಿಗೊಳಿಸುವ ಕಾರ್ಯ ಭರದಿಂದ ನಡೆಯಿತು.

ಖಾಸಗಿ ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಮಾಲೀಕರ ಸಂಘ ನಿರ್ಧರಿಸಿತ್ತು. ಆದರೂ, ಬೆಳಿಗ್ಗೆ 7.30ರವರೆಗೆ ಹಲವು ಬಸ್‌ಗಳು ಸಂಚರಿಸಿದವು. ಬಸ್‌ ನಿಲ್ದಾಣ, ಗಾಂಧಿ ವೃತ್ತ ಸೇರಿ ಹಲವೆಡೆ ಕಾಯುತ್ತಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಆಟೊಗಳು ಮಾತ್ರ ಅಲ್ಲಲ್ಲಿ ನಿಂತಿದ್ದವು. ಬಿಸಿಲು ಏರಿದಂತೆ ಚಾಲಕರು ಮನೆ ಸೇರಿಕೊಂಡರು. ರೈಲು ಸೇವೆ ನಸುಕಿನಿಂದಲೇ ಸ್ಥಗಿತಗೊಂಡ ಪರಿಣಾಮ ನಿಲ್ದಾಣದತ್ತ ಯಾವೊಬ್ಬ ಪ್ರಯಾಣಿಕರೂ ಸುಳಿಯಲಿಲ್ಲ.

ಇಂದಿರಾ ಕ್ಯಾಂಟೀನ್‌ ಸೇವೆ:ಜಿಲ್ಲೆಯ ಬಹುತೇಕ ಭಾಗಗಳಲ್ಲಿರುವ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಪ್ರಧಾನಿ ಕರೆ ಮೇರೆಗೆ ಬಾಗಿಲು ಹಾಕಿರುವ ನಾಮಫಲಕವನ್ನು ಮಾಹಿತಿಗೆ ಭಿತ್ತರಿಸಿದ್ದವು. ಹೋಟೆಲ್‌ ದುರ್ಗದ ಸಿರಿ, ಹೋಟೆಲ್‌ ಐಶ್ಚರ್ಯ ಫೋರ್ಟ್‌, ಹೋಟೆಲ್‌ ಮಯೂರಾ, ಹೋಟೆಲ್‌ ಉಪಾಧ್ಯ , ಪ್ರಜ್ವಲ್‌ ಹೋಟೆಲ್‌ ಸೇರಿ ಎಲ್ಲವೂ ಬಾಗಿಲು ಹಾಕಿದ್ದವು. ವಾಸ್ತವ್ಯ ಹೂಡಿದವರಿಗೆ ಮಾತ್ರ ಊಟ–ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದವು. ವಸತಿ ಗೃಹಗಳಲ್ಲಿ ತಂಗಿದವರ ಸಂಖ್ಯೆ ವಿರಳವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಪ್ರವಾಸಿ ಮಂದಿರ ಸಮೀಪದ ‘ಇಂದಿರಾ ಕ್ಯಾಂಟೀನ್‌’ಗಳು ಮಾತ್ರ ತೆರೆದಿದ್ದವು. ಪ್ರಯಾಣ ಮೊಟಕುಗೊಳಿಸಿದವರು, ಜನಸಾಮಾನ್ಯರು ಇಲ್ಲಿಗೆ ಧಾವಿಸಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇವಿಸಿದರು. ಕ್ಯಾಂಟೀನ್‌ ತೆರೆಯುವಂತೆ ಸರ್ಕಾರ ಸೂಚನೆ ನೀಡಿತ್ತು ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಹಾಲು ಮಾರಾಟ ಬೆಳಿಗ್ಗೆ 7 ಗಂಟೆವರೆಗೆ ಮಾತ್ರ ನಡೆಯಿತು. ನಂದಿನಿ ಪಾರ್ಲರ್‌ಗಳು ಮಾತ್ರ ತೆರೆದಿದ್ದವು. ಅನೇಕರು ಈ ಪಾರ್ಲರ್‌ಗೆ ಧಾವಿಸಿ ಹಾಲು ಖರೀದಿಸಿದರು.

ಮಾರುಕಟ್ಟೆ, ಹೆದ್ದಾರಿ ಭಣ–ಭಣ:ಖಾಸಗಿ ಬಸ್‌ ನಿಲ್ದಾಣ, ಸಂತೆ ಹೊಂಡದ ಸಮೀಪದ ಮಾರುಕಟ್ಟೆ ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿತ್ತು. ಭಾನುವಾರ ಮಾತ್ರ ಯಾವೊಂದು ಮಳಿಗೆಗಳು ಬಾಗಿಲು ತೆರೆಯಲಿಲ್ಲ. ರೈತರು ಮಾರುಕಟ್ಟೆಗೆ ತರಕಾರಿಯನ್ನು ತರಲಿಲ್ಲ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನ ಸಂಚಾರ ವಿರಳವಾಗಿತ್ತು. ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಪ್ಲಾಜಾ ವಾಹನಗಳಿಲ್ಲದೇ ಭಣ–ಭಣ ಎನ್ನುತ್ತಿತ್ತು. ರಸ್ತೆ ಬದಿ, ನಗರದ ಹೊರವಲಯದಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು.

ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಷನ್‌ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳು ಮಾತ್ರ ಬಾಗಿಲು ಹಾಕಿದ್ದವು. ದಾವಣಗೆರೆ ರಸ್ತೆಯಲ್ಲಿರುವ ಖಾಸಗಿ ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು. ದ್ವಿಚಕ್ರ ವಾಹನಗಳಿಗೆ ಸವಾರರು ಪೆಟ್ರೋಲ್‌ ತುಂಬಿಸಿಕೊಂಡರು.

ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿದರು:ಸಂಜೆ 5 ಗಂಟೆಗೆ ಹಲವು ಬಡಾವಣೆಗಳಲ್ಲಿ ಘಂಟೆ, ಶಂಕಾನಾದ ಮೊಳಗಿದವು. ಚಪ್ಪಾಳೆಯ ಸದ್ದು ‘ಆರೋಗ್ಯ ಸೈನಿಕ’ರನ್ನು ತಲುಪಿತು.

‘ಕೋವಿಡ್‌–19’ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ಸೂಚಿಸಲು ಪ್ರಧಾನಿ ಮೋದಿ ಚಪ್ಪಾಳೆ ತಟ್ಟುವಂತೆ ಕರೆ ನೀಡಿದ್ದರು. ಸಂಜೆ 5 ಗಂಟೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಂದ ಜನರು ಚೆಪ್ಪಾಳೆ ತಟ್ಟಿದರು. ಕೆಳಗೋಟೆ, ಜೆಸಿಆರ್‌ ಬಡಾವಣೆ, ಐಯುಡಿಪಿ ಬಡಾವಣೆ ಸೇರಿದಂತೆ ಹಲವೆಡೆ ಚಪ್ಪಾಳೆ ಸದ್ದು ಕೇಳಿಸಿತು.

ಧರ್ಮಶಾಲಾ ರಸ್ತೆಯ ಅಯ್ಯಣ್ಣನ ಪೇಟೆಯಲ್ಲಿ ಘಂಟೆ, ಜಾಗಟೆ ಹಾಗೂ ಶಂಕಾನಾದ ಮೊಳಗಿದವು. ದೇವರ ಪೂಜೆಗೆ ಬಳಸುತ್ತಿದ್ದ ಇವನ್ನು ವೈದ್ಯರಿಗೆ ಮೆಚ್ಚುಗೆ ಸೂಚಿಸಲು ಉಪಯೋಗಿಸಲಾಯಿತು.

‘ಮನೆಯಲ್ಲಿರುವುದು ಸುಲಭವಲ್ಲ..’:‘ಮನೆಯಲ್ಲಿರುವುದು ಸುಲಭವಲ್ಲ...’ ವ್ಯಕ್ತಿಯೊಬ್ಬರು ನುಡಿದ ಈ ಮಾತು ಅನೇಕರ ಅಭಿಪ್ರಾಯವನ್ನು ಧ್ವನಿಸುವಂತಿತ್ತು. ಸಂಜೆಯ ಬಳಿಕ ಮನೆಯಿಂದ ಹೊರಗೆ ಬಂದಿದ್ದ ಅವರು ಬಿ.ಡಿ. ರಸ್ತೆಯಲ್ಲಿ ಸಿಕ್ಕ ಗೆಳೆಯರ ಜೊತೆ ಹರಟುತ್ತಿದ್ದರು.

ಭಾನುವಾರ ಬೆಳಿಗ್ಗೆ 7ಕ್ಕೆ ‘ಕರ್ಫ್ಯೂ’ ಜಾರಿಯಾಗಿದ್ದರಿಂದ ಬಹುತೇಕರು ಮನೆಯಲ್ಲಿಯೇ ಉಳಿದಿದ್ದರು. ಟಿ.ವಿ, ಸಿನಿಮಾ ನೋಡುತ್ತ ಕಾಲ ಕಳೆದರು. ಮಧ್ಯಾಹ್ನದ ಬಳಿಕ ಬಿಸಿಲ ಧಗೆ ಏರಿದಂತೆ ಮನೆಯಲ್ಲಿ ಇರುವವರ ತಾಳ್ಮೆಯೂ ಕಡಿಮೆಯಾಗುತ್ತ ಬಂದಿತು. ಆದರೆ, ಸೋಂಕು ಹರಡುವುದ ಭೀತಿಯ ಕಾರಣಕ್ಕೆ ಕಷ್ಟವನ್ನು ಸಹಿಸಿಕೊಂಡು ಮನೆಯಲ್ಲಿಯೇ ಉಳಿದರು. ಸಂಜೆ 4 ಗಂಟೆಯ ಬಳಿಕ ರಸ್ತೆಗಳಲ್ಲಿ ಜನಸಂಚಾರ ಕಾಣಿಸತೊಡಗಿತು.

ಸಾಮಾಜಿಕ ಜಾಲತಾಣದಲ್ಲಿ ಸದ್ದು:ನಿರ್ಜನವಾಗಿರುವ ರಸ್ತೆ, ಮಾರುಕಟ್ಟೆ, ಬಸ್‌ ಹಾಗೂ ರೈಲ್ವೆ ನಿಲ್ದಾಣಗಳ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಹಲವು ಬಗೆಯ ಹಾಡುಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಹಿರಿಯೂರು ನಗರದ ಬಿಕೊ ಎನ್ನುವ ರಸ್ತೆಯ ವಿಡಿಯೊ ಬಳಸಿಕೊಂಡು ಜೋಗಿ ಚಿತ್ರದ ‘ಅಯ್ಯೋ ದೇವರೆ ನೀನು ಇದ್ದರೆ, ಇಂತಹ ಜನ್ಮ ಪಾಪಿಗೂ ಕೊಡಬೇಡ...’ ಹಾಡು ನಿರ್ಮಿಸಲಾಗಿದೆ. ಚಿತ್ರದುರ್ಗ ದೃಶ್ಯಗಳನ್ನು ಬಳಸಿಕೊಂಡು ‘ಅಲ್ಲಿಲ್ಲಿ ಯಾಕೊ ಬೀಗಬೇಕೊ, ನಮ್ದೆ ದುರ್ಗಾ, ಸಿಂಹದಮರಿ ರಾಮಾಚಾರಿ ಬೆಳದಿದ್ದಿಲ್ಲೇ ನೆನಪಲ್ಲಿಟ್ಕೊ...’ ಹಾಡೊಂದನ್ನು ಸಂಯೋಜಿಸಲಾಗಿದೆ. ಫೇಸ್‌ಬುಕ್‌, ಟ್ಟಿಟರ್‌, ವಾಟ್ಸ್‌ಆ್ಯಪ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT