ಸೋಮವಾರ, ಜೂನ್ 27, 2022
21 °C
ಹೂವು, ಅಡಿಕೆ, ತೆಂಗು, ಜೇನು ಕೃಷಿ, ಕುರಿ ಸಾಕಣೆ, ಹೈನುಗಾರಿಕೆ, ಎರೆಹುಳು ಗೊಬ್ಬರ ಉತ್ಪಾದನೆ

ಕೂಡು ಕುಟುಂಬಕ್ಕೆ ಸಮಗ್ರ ಕೃಷಿ ನೀಡಿತು ಫಲ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಸರ್ಕಾರದ ಹನಿ ನೀರಾವರಿ ಯೋಜನೆ ಬಳಕೆಯಿಂದ 21 ಎಕರೆ ಒಣ ಭೂಮಿಯಲ್ಲಿ ಹತ್ತು ಎಕರೆಯನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿಕೊಂಡ ರೈತ ಕುಟುಂಬವೊಂದು ಅಡಿಕೆ, ತೆಂಗು, ಜೇನು ಕೃಷಿ ಹಾಗೂ ಎರೆಹುಳು ಗೊಬ್ಬರ ಉತ್ಪಾದನೆಯಿಂದ ಉತ್ತಮ ಬದುಕು ಕಟ್ಟಿಕೊಂಡು ಮಾದರಿಯಾಗಿದೆ.

ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಸರ್ಜವನಹಳ್ಳಿ ಗ್ರಾಮದ ಓಬಣ್ಣ ಅವರ ಮನೆಯಲ್ಲಿ ಅಪ್ಪ, ಅಮ್ಮ, ಅತ್ತೆ, ಮಾವ, ಅಣ್ಣ, ತಮ್ಮ, ಅಕ್ಕ, ತಂಗಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಒಂದೇ ಕಡೆ ನೆಲೆಸಿ ಕೂಡಿ ಬಾಳುತ್ತಿದ್ದಾರೆ. ಮೈಸೂರು ಮಲ್ಲಿಗೆ, ದುಂಡುಮಲ್ಲಿಗೆ, ಕಾಕಡ, ವಿವಿಧ ತಳಿಯ ಸೇವಂತಿಗೆ ಸೇರಿ ಕಾಲಕ್ಕೆ ತಕ್ಕಂತೆ ಬೆಳೆಯುವ ವಿವಿಧ ತರಹದ ಹೂಗಳನ್ನು 4–5 ಎಕರೆಯಲ್ಲಿ ಹಂತ ಹಂತವಾಗಿ ನಾಟಿ ಮಾಡುವ ಮೂಲಕ ವರ್ಷವಿಡೀ ಬೆಳೆಯುತ್ತಾರೆ.

ಪ್ರತಿ ವಾರದಲ್ಲಿ 3–4 ದಿನ ತಪ್ಪದೇ ಹೂವನ್ನು ಬಿಡಿಸಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮಾರುಕಟ್ಟೆಗೆ ಸಾಗಿಸುವ ಮೂಲಕ ವಾರಕ್ಕೆ ಕನಿಷ್ಠ ₹ 7 ಸಾವಿರದಿಂದ ₹ 8 ಸಾವಿರ ಆದಾಯದಂತೆ, ವರ್ಷಕ್ಕೆ ₹ 4 ಲಕ್ಷದಿಂದ ₹ 5 ಲಕ್ಷ ಆದಾಯ ಪಡೆಯುತ್ತಾರೆ.

‘200 ತೆಂಗು, 150 ಅಡಿಕೆ ಮರಗಳನ್ನು ಬೆಳೆಸಲಾಗಿದೆ. ಇದರಿಂದ ವರ್ಷಕ್ಕೆ ₹ 70 ಸಾವಿರದಿಂದ ₹ 80 ಸಾವಿರದಷ್ಟು ಆದಾಯ ಬರುತ್ತದೆ. 100 ಕುರಿ, 8 ಮೇಕೆ, 6 ಹಸು, 4 ಎಮ್ಮೆಗಳನ್ನು ಸಾಕಲಾಗಿದೆ. 20 ಪೆಟ್ಟಿಗೆಗಳಲ್ಲಿ ಜೇನು ಉತ್ಪಾದನೆ ಮಾಡುತ್ತಿದ್ದೇವೆ. ತಮ್ಮನದು ಹೂವಿನ ವ್ಯಾಪಾರ, ಆಳಿಯ ಕುರಿ ಸಾಕಣೆ ಮತ್ತು ಅಡಿಕೆ, ಜೇನು ಕೃಷಿ ಹಾಗೂ ಎರೆಹುಳು ಗೊಬ್ಬರ ಉತ್ಪಾದನೆಯ ಜವಾಬ್ದಾರಿ ನನ್ನದು’ ಎನ್ನುತ್ತಾರೆ ರೈತ ಓಬಣ್ಣ.

‘ಮೇಟಿಕುರ್ಕಿ ಶಾಂತವೀರಯ್ಯ, ಕೃಷಿ ವಿಜ್ಞಾನಿ ಡಾ.ವೀರಭದ್ರ ರೆಡ್ಡಿ ಅವರ ಸಲಹೆ ಹಾಗೂ ಮಾರ್ಗದರ್ಶನ, ಹೊಳಲ್ಕೆರೆ ಮೈರಾಡ್‌ ಗ್ರೀನ್ ಕಾಲೇಜಿನಲ್ಲಿ ಜೇನು ಕೃಷಿ ತರಬೇತಿ ಪಡೆದು ಅಲ್ಲಿಂದಲೇ ಎರಡು ಪೆಟ್ಟಿಗೆ ಮತ್ತು ಹುಳು ಉಚಿತವಾಗಿ ಪಡೆದೆ. ತೋಟಗಾರಿಕೆ ಇಲಾಖೆ ನಾಲ್ಕು ಪೆಟ್ಟಿಗೆ ಒದಗಿಸಿತು. ಇಲಾಖೆಯಿಂದ ₹ 32 ಸಾವಿರ ಅನುದಾನ ಪಡೆದು 20 ಪೆಟ್ಟಿಗೆಗಳಲ್ಲಿ ಜೇನು ಕೃಷಿ ಆರಂಭಿಸಿ ಜೇನುತುಪ್ಪ ಉತ್ಪಾದನೆ ಮಾಡುತ್ತಿದ್ದೇನೆ. ಇದರಿಂದ ಒಳ್ಳೆಯ ಆದಾಯ ಬರುತ್ತಿದೆ. ಹೊಳಲ್ಕೆರೆ ಗ್ರೀನ್ ಕಾಲೇಜಿನವರು ಕೆ.ಜಿ ಜೇನುತುಪ್ಪವನ್ನು ₹ 600ಕ್ಕೆ ಖರೀದಿಸುತ್ತಾರೆ’ ಎಂದು ಅವರು ವಿವರಿಸಿದರು.

2–3 ತಿಂಗಳಿಗೆ ಎರಡು ಸಲ ಜೇನುತುಪ್ಪ ದೊರೆಯುತ್ತದೆ. ಸ್ಥಳೀಯ ತಳಿ ತುಡಿವೆ ಜೇನು ಹುತ್ತ ಹಾಗೂ ಕಲ್ಲುಗುಟ್ಟೆಗಳ ಸಂದಿಯಲ್ಲಿ ಇರುತ್ತವೆ. ಇದಕ್ಕೆ ಏಳು ತಲೆ ಇರುತ್ತವೆ. ಹುಡುಕಿ ಇದೇ ಜೇನು ತಂದು ಅಭಿವೃದ್ಧಿಪಡಿಸಿದ್ದಾರೆ. ಈ ಕೃಷಿಯನ್ನು ನೋಡಲು ಜರ್ಮನಿ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್‌, ತಮಿಳುನಾಡು ತಜ್ಞರು ಭೇಟಿ ನೀಡಿದ್ದಾರೆ. ಜೊತೆಗೆ ತುಪ್ಪವನ್ನು ಖರೀದಿ ಮಾಡುತ್ತಾರೆ. ಬೇವಿನೆಣ್ಣೆ, ಸುಣ್ಣ, ಬೆಲ್ಲ ಹಾಗೂ ಅಗ್ರೋ ಔಷಧ ಬಳಕೆಯಿಂದ ನುಸಿಪೀಡೆ ನಿವಾರಣೆಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

‘ಎರೆಹುಳು ಘಟಕದ ನಾಲ್ಕು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಒಂದು ತೊಟ್ಟಿಯಲ್ಲಿ 20 ಕ್ವಿಂಟಲ್ ಗೊಬ್ಬರ ಬರುತ್ತದೆ. ಸಾವಿರಕ್ಕೆ 1 ಕ್ವಿಂಟಲ್ ಗುಣಮಟ್ಟದ ಗೊಬ್ಬರದಂತೆ ಉತ್ಪಾದಿಸಲಾಗುತ್ತಿದೆ. ಎಲ್ಲ ಬೆಳೆಗೆ ಈ ಗೊಬ್ಬರವನ್ನೇ ಬಳಸುತ್ತೇವೆ. ಇದರಿಂದ ಬೆಳೆಯಲ್ಲಿ ಪಾರ್ಥೇನಿಯಂ ಮುಂತಾದ ಕಳೆ ಸಸ್ಯ ಹುಟ್ಟುವುದಿಲ್ಲ. ಉತ್ತಮ ಇಳುವರಿಯೂ ಇರುತ್ತದೆ’ ಎಂದು ತಿಳಿಸಿದರು.

ಬಯಲು ಸೀಮೆ ಭಾಗದಲ್ಲಿ ಜೇನು ಕೃಷಿ ಹಾಗೂ ಎರೆಹುಳು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತ ರೈತರಿಗೆ ತರಬೇತಿ ಹಾಗೂ ಸಹಾಯಧನ ಒದಗಿಸಲಾಗುವುದು.

- ಡಾ.ವಿರೂಪಾಕ್ಷಪ್ಪ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು