ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಹಾಲಿ–ಮಾಜಿ ಶಾಸಕರಿಗೆ ಕಾಂಗ್ರೆಸ್‌ ಮಣೆ

ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ– ಶುರುವಾದ ರಾಜಕೀಯ ಲೆಕ್ಕಾಚಾರ
Last Updated 26 ಮಾರ್ಚ್ 2023, 7:03 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿರೀಕ್ಷೆಯಂತೆ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಪೈಪೋಟಿ ಹೆಚ್ಚಿರುವ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮುರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಕೂತೂಹಲ ಹೆಚ್ಚಿಸಿದೆ.

ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ಚಳ್ಳಕೆರೆಗೆ ಹಾಲಿ ಶಾಸಕ ಟಿ. ರಘುಮೂರ್ತಿ ಅವರನ್ನು

ಪುನಃ ಕಣಕ್ಕೆ ಇಳಿಸಲಾಗಿದೆ. ಈ ಕ್ಷೇತ್ರದ ಕೈಪಡೆಯಲ್ಲಿ ಇವರಿಗೆ ಪ್ರತಿಸ್ಪರ್ಧಿಗಳಿರಲಿಲ್ಲ. ರಘುಮೂರ್ತಿ ಹೊರತುಪಡಿಸಿ ಬೇರಾರೂ ಟಿಕೆಟ್‌ ಕೇಳಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದ್ದರಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ರಘುಮೂರ್ತಿ ಹೆಸರನ್ನು ಹೈಕಮಾಂಡ್‌ ಅಂತಿಮಗೊಳಿಸಿದೆ.

ದಶಕದ ಹಿಂದೆ ಜೆಡಿಎಸ್‌ಗೆ ನೆಲೆ ಕಲ್ಪಿಸಿದ್ದ ಕ್ಷೇತ್ರದಲ್ಲಿ ಟಿ.ರಘುಮೂರ್ತಿ 2013ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಬಳಿಕ 2018ರಲ್ಲಿಯೂ ಕ್ಷೇತ್ರದ ಮತದಾರರು ಬೆಂಬಲಿಸಿದ್ದರು. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕ್ಷೇತ್ರ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಹರಡಿಕೊಂಡಿದೆ.

ಟಿ. ರಘುಮೂರ್ತಿ ಹೆಸರು ಅಂತಿಮವಾಗಿ ಪ್ರಕಟವಾಗುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಂ. ರವೀಶ್‌ ಕುಮಾರ್‌ ಅವರೇ ಪಕ್ಷದ ಅಭ್ಯರ್ಥಿ ಎಂಬುದಾಗಿ ಜೆಡಿಎಸ್‌ ಘೋಷಣೆ ಮಾಡಿದೆ.

ಕ್ಷೇತ್ರದ‌ಲ್ಲಿ ಈ ಬಾರಿ ಕಮಲ ಅರಳಿಸಬೇಕೆಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿ, ರಘುಮೂರ್ತಿಯನ್ನು ಸಮರ್ಥವಾಗಿ ಎದುರಿಸುವ ವರ್ಚಸ್ಸಿನ ನಾಯಕನ ಹುಡುಕಾಟಕ್ಕೆ ಮುಂದಾಗಿದೆ. ಅಖಾಡಕ್ಕೆ ಧುಮುಕಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯಪಾಲಯ್ಯ, ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್‌ ಕುಮಾರ್‌, ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಜಯರಾಮ್‌, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕುಮಾರಸ್ವಾಮಿ, ಸಂಘ ಪರಿವಾರದ ಬಾಳೆಕಾಯಿ ರಾಮದಾಸ್‌, ಚಿತ್ರನಟ ಶಶಿಕುಮಾರ್‌ ಸಿದ್ಧತೆ ನಡೆಸುತ್ತಿದ್ದಾರೆ.

ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ಹರಡಿ ಕೊಂಡಿರುವ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರನ್ನು ಕಣಕ್ಕಿಳಿಸಲಾಗಿದೆ.

ಚಿಕ್ಕಮಗಳೂರು, ಹಾಸನ ಹಾಗೂ ತುಮಕೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕ್ಷೇತ್ರವನ್ನು 1999, 2004 ಹಾಗೂ 2013ರಲ್ಲಿ ಗೋವಿಂದಪ್ಪ ಪ್ರತಿನಿಧಿಸಿದ್ದರು.

ಇಡೀ ಕ್ಷೇತ್ರದಲ್ಲಿ ಹಲವು ಪಕ್ಷಗಳ ಪ್ರಭಾವ ಗಾಢವಾಗಿದೆ. ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಜಿ.ಆರ್‌. ಉಲ್ಲಾಸ್‌, ಎಂ.ಎಚ್‌. ಕೃಷ್ಣಮೂರ್ತಿ ಹಾಗೂ ಕೆ. ಅನಂತ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕಮಾಂಡ್‌ ಅಂತಿಮವಾಗಿ ಕ್ಷೇತ್ರದ ವರದಿ ಹಾಗೂ ಬಿಜೆಪಿಯಲ್ಲಿ ಆಂತರಿಕ ಬಂಡಾಯವನ್ನು ಪರಿಗಣಿಸಿ ಗೋವಿಂದಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ.

ಗೋವಿಂದಪ್ಪ ಅವರಿಗೆ ಟಿಕೆಟ್‌ ನೀಡಿರುವ ಕಾರಣ ಕೊನೆಯ ಕ್ಷಣದ ಬದಲಾವಣೆ ಹೊರತಾಗಿ ಬಂಡಾಯದ ಧ್ವನಿ ಕೇಳುವ ಸಾಧ್ಯತೆಗಳು ದೂರವಾಗಿವೆ. ಜೆಡಿಎಸ್‌ ಅಭ್ಯರ್ಥಿಯಾಗಿ ಎಂ. ತಿಪ್ಪೇಸ್ವಾಮಿ ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ. ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಪಾಂಡುರಂಗ ಗರಗ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರ ಸುತ್ತುತ್ತಿದ್ದಾರೆ. ಉಳಿದಂತೆ ಬಿಜೆಪಿಯಿಂದ ಹೆಸರು ಅಂತಿಮವಾಗುವುದು ಬಾಕಿಯಿದೆ.

ರಾಜ್ಯ ರಾಜಕಾರಣಕ್ಕೆ ಮುತ್ಸದ್ಧಿ ನಾಯಕರನ್ನು ನೀಡಿದ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ ಎದುರಾಗಿತ್ತು. ಎಂಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಈ ಎಲ್ಲದರ ನಡುವೆ ಕೆಲವರು ತಮಗೆ

ಟಿಕೆಟ್‌ ಖಚಿತ ಎಂಬ ವಿಶ್ವಾಸದಲ್ಲಿ ಕ್ಷೇತ್ರದಲ್ಲಿ ಪ್ರಚಾರ ಸಹ ಪ್ರಾರಂಭಿಸಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್‌

ಮಾಜಿ ಶಾಸಕ ಡಿ. ಸುಧಾಕರ್‌ ಹೆಸರನ್ನು ಘೋಷಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ. ಪಾರಂಪರಿಕ ಮತಗಳನ್ನು ಹೊಂದಿರುವ ಜೆಡಿಎಸ್‌ನಿಂದ ಸ್ಥಳೀಯ ಒಕ್ಕಲಿಗ ಸಮುದಾಯದವರು ಅಖಾಡಕ್ಕೆ ಧುಮುಕುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಹೊಸದುರ್ಗ, ಹಿರಿಯೂರು ಕ್ಷೇತ್ರವನ್ನು ಪುನಃ ವಶಕ್ಕೆ ಪಡೆಯುವ ಹುಮ್ಮಸ್ಸಿನಲ್ಲಿ ಮಾಜಿ ಶಾಸಕರಿಗೆ ಮಣೆ ಹಾಕಿದೆ. ಉಳಿದ ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮದೇ ಲೆಕ್ಕಾಚಾರದಲ್ಲಿ ಎರಡನೇ ಪಟ್ಟಿ ಬಿಡುಗಡೆಯನ್ನು
ಕಾಯುತ್ತಿದ್ದಾರೆ.

ಕುತೂಹಲ ಕೆರಳಿಸಿದ ಆಕಾಂಕ್ಷಿಗಳ ನಡೆ

ಪ್ರಬಲ ಜಾತಿಗಳ ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಸ್ಥಳೀಯರಿಗಿಂತಲೂ ಹೊರಗಿನವರು ಪ್ರತಿನಿಧಿಸಿದ್ದೇ ಹೆಚ್ಚು. ಚಳ್ಳಕೆರೆ ಎಸ್‌ಟಿ ಮೀಸಲು ಕ್ಷೇತ್ರವಾದ ಕಾರಣ 2008ರಲ್ಲಿ ಹಿರಿಯೂರಿನಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಿ. ಸುಧಾಕರ್‌, 2013ರಲ್ಲಿ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರಲ್ಲಿ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್‌ ವಿರುದ್ಧ ಸೋತಿದ್ದರು.

ಕಾಂಗ್ರೆಸ್‌ ಟಿಕೆಟ್‌ಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪರಾಜಿತಗೊಂಡ ಬಿ. ಸೋಮಶೇಖರ್‌ ಅರ್ಜಿ ಸಲ್ಲಿಸಿ ಪ್ರಬಲ ಆಕಾಂಕ್ಷಿಯಾಗಿದ್ದರು. ಉಳಿದಂತೆ ಜಿ. ಜಯರಾಮಯ್ಯ, ಸಿ. ವೀರಭದ್ರಬಾಬು, ಸಿ.ಬಿ. ಪಾಪಣ್ಣ, ಆರ್‌.ಮಂಜುನಾಥ್‌, ಸಿ.ಜಿ. ಪಾತಣ್ಣ ಹಾಗೂ ಬಿ.ಎಲ್‌. ಗೌಡ ಅರ್ಜಿ ಸಲ್ಲಿಸಿದ್ದರು.

ಸುಧಾಕರ್‌ ಅವರಿಗೆ ಟಿಕೆಟ್‌ ಘೋಷಿಸಿರುವುದರಿಂದ ಕ್ಷೇತ್ರದಲ್ಲಿ ಒಂದು ಹಂತದ ಪ್ರಚಾರ ನಡೆಸಿದ್ದ ಆಕಾಂಕ್ಷಿಗಳ ನಡೆ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT