ಶನಿವಾರ, ಜನವರಿ 23, 2021
18 °C
ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಮನವಿ

ಸ್ವಾರ್ಥ, ಪ್ರತಿಷ್ಠೆಗೆ ಸಮುದಾಯ ಬಲಿಕೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವ್ಯಕ್ತಿ ಪ್ರತಿಷ್ಠೆ, ಸ್ವಾರ್ಥ ಹಿತಾಸಕ್ತಿಗೆ ಸಮುದಾಯದ ಒಗ್ಗಟ್ಟು ಮುರಿಯುವ ಪ್ರಯತ್ನ ಮಾಡಬೇಡಿ. ಹೊಟ್ಟೆ ಹೊರೆಯಲು, ಜೀವನ ನಡೆಸಲು ಸ್ವಾಮೀಜಿ ಆಗಿಲ್ಲ. ಸಮುದಾಯದ ಏಳಿಗೆಗೆ ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಬಸವ ಮಾಚಿದೇವ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸ್ವಾಮೀಜಿ ಅವರ ಮೂರನೇ ಪಟ್ಟಾಧಿಕಾರ ಮಹೋತ್ಸವ, ಮಠದ 12ನೇ ಶಂಕುಸ್ಥಾಪನೆ, ಸ್ವಾಮೀಜಿ ಅವರ 37ನೇ ಜನ್ಮದಿನ ಹಾಗೂ 22ನೇ ಜಂಗಮದೀಕ್ಷೆಯ ಅಂಗವಾಗಿ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಸರಳವಾಗಿ ಏರ್ಪಡಿಸಿದ್ದ ‘ಕಾಯಕ ಜನೋತ್ಸವ’ದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮಠ ಹುಟ್ಟಿ 22 ವರ್ಷವಾಗಿದೆ. ಮಠಕ್ಕೆ ಬಿಳಿ ಬಟ್ಟೆ ಹಾಕಿದವರ ಅಗತ್ಯವಿಲ್ಲ. ಬಟ್ಟೆಯನ್ನು ಮಡಿ ಮಾಡುವ ಸಮುದಾಯದ ಕಟ್ಟಕಡೆಯ ಮಡಿವಾಳ ಸಾಕು. ಹಿಂದುಳಿದ, ಅತಿ ಸಣ್ಣ ಸಮುದಾಯ ಎಂಬ ಹಣೆಪಟ್ಟಿಯನ್ನು ಕಳಚಬೇಕಿದೆ. ಸಮುದಾಯವನ್ನು ಮುನ್ನಡೆಸುವ ಸಮರ್ಥ ನಾಯಕ, ಜನರನ್ನು ಅರ್ಥ ಮಾಡಿಕೊಂಡ ಮಠಾಧೀಶರ ಅಗತ್ಯವಿದೆ’ ಎಂದು ಹೇಳಿದರು.

‘ಮಠದ ಪರಂಪರೆ ಹೊಂದಿರುವ ಸಮುದಾಯ ಏಳಿಗೆಯಾಗುತ್ತದೆ. ಸಮುದಾಯಕ್ಕೆ ಮಠ ಸಂಸ್ಕಾರ ನೀಡುತ್ತದೆ. ಇತರ ಸಮುದಾಯದ ಮಠಾಧೀಶರ ಸಂಸ್ಕಾರ ಸಿಕ್ಕಿದ್ದರೂ ಸಮುದಾಯ ಅಭಿವೃದ್ಧಿ ಹೊಂದಿರುತ್ತಿತ್ತು. ಸಂಘಟನೆಯ ಮೂಲಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮನಃಸ್ಥಿತಿ ಹೊಂದಿದವರಿಗೆ ಉತ್ತರ ನೀಡಬೇಕಿದೆ’ ಎಂದು ಕರೆ ನೀಡಿದರು.

ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌.ರಘು ಕೌಟಿಲ್ಯ, ‘ಕಾಯಕ ಸಮುದಾಯದವರು ನಿಜಕ್ಕೂ ಪ್ರತಿಭಾವಂತರು. ಗಣಿತದಲ್ಲಿ ಮಡಿವಾಳರು ಪರಿಣತರು. ಬಟ್ಟೆಯನ್ನು ತೊಳೆದು ಸಮಾಜದ ಮನಸ್ಸು ಶುಭ್ರಗೊಳಿಸುವ ಸಾಮರ್ಥ್ಯ ಮಡಿವಾಳರಲ್ಲಿದೆ. ಇಂತಹ ಕಾಯಕ ಸಮುದಾಯಗಳು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ಅವರ ಅಸ್ತಿತ್ವದ ಬಗ್ಗೆ ಅರ್ಥಪಡಿಸುವ ಪ್ರಯತ್ನ ನಡೆಯಬೇಕು’ ಎಂದು ಹೇಳಿದರು.

‘ಮಡಿವಾಳರು ಸೇರಿದಂತೆ ಕಾಯಕ ಮಾಡಿಕೊಂಡವರಿಗೆ ದವಸ–ಧಾನ್ಯ ನೀಡಲಾಗುತ್ತಿತ್ತು. ಬಹುತೇಕರಿಗೆ ಭೂಮಿ, ಮನೆ ಕೂಡ ಇಲ್ಲ. ಕಮ್ಮಾರರು, ಗಾಣಿಗರು, ಕ್ಷೌರಿಕರು ಸೇರಿ ಹಲವರು ನಮ್ಮಂತೆಯೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗದೇ ತೊಳಲಾಟದಲ್ಲಿ ಸಿಲುಕಿದ್ದೇವೆ. ದೌರ್ಜನ್ಯ, ದಬ್ಬಾಳಿಕೆಯನ್ನು ನಿತ್ಯ ಅನುಭವಿಸುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾಧನೆಗೂ ಜಾತಿ ಅರ್ಜಿ ಹಾಕಿಕೊಂಡು ಹುಟ್ಟಬೇಕಾದ ಸ್ಥಿತಿ ಸಮಾಜದಲ್ಲಿದೆ. ಜಾತಿ ಬಲವಿಲ್ಲದ ಕಾರಣಕ್ಕೆ ತಿರಸ್ಕಾರಕ್ಕೆ ಒಳಗಾಗುತ್ತಿದ್ದೇವೆ. ಸಂಘಟನೆಯ ಮೂಲಕ ಸಮುದಾಯದ ಶಕ್ತಿಯನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಪಟ್ಟಣ, ನಗರದಲ್ಲಿರುವವರು ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯವನ್ನು ತಲುಪಬೇಕಿದೆ’ ಎಂದು ಸಲಹೆ ನೀಡಿದರು.

‘ಚೀನಾ ಉತ್ಪನ್ನಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಕಾಯಕ ಸಮುದಾಯಗಳಿಗೆ ಮಾತ್ರ ಇದೆ. ಕೊರೊನಾ ಸೋಂಕಿನ ಆತಂಕದಲ್ಲಿ ಹಳ್ಳಿ ಸೇರಿದ ಯುವ ಸಮೂಹ ನಗರಕ್ಕೆ ಮರಳದೇ ಹೊಸ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ಕೌಶಲ ತರಬೇತಿ ಪಡೆದು ಉದ್ಯೋಗದಾತರಾಗಬೇಕಿದೆ. ಆಧುನಿಕ ತಂತ್ರಜ್ಞಾನ, ನೈಪುಣ್ಯ ಕಲಿಸಲು ಮಠದ ಆವರಣದಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯುವ ಅಗತ್ಯವಿದೆ. ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

ಮಠದ ಆವರಣದಲ್ಲಿ ನಿರ್ಮಿಸಿದ ಆಧ್ಯಾತ್ಮಿಕ ಕೇಂದ್ರವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು. ವಿಶ್ವ ಆದರ್ಶ ಕುಟುಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.