ಸೋಮವಾರ, ಮಾರ್ಚ್ 27, 2023
30 °C

ಭದ್ರಾ ಮೇಲ್ದಂಡೆ ಯೋಜನೆಗೆ ರಾಜಕೀಯ ಲೇಪ: ಬೊಮ್ಮಾಯಿ ಹೇಳಿಕೆಗೆ ಮಾಜಿ ಸಂಸದ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್‌ ನಿರ್ಲಕ್ಷ್ಯ ಮಾಡಿತ್ತು’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಂಸದ ಪಿ.ಕೋದಂಡರಾಮಯ್ಯ, ‘ರಾಜಕೀಯ ಲಾಭಕ್ಕಾಗಿ ದುರುದ್ದೇಶಪೂರಿತವಾಗಿ ವರ್ತಿಸಬಾರದು’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ₹ 5,300 ಕೋಟಿ ಮೀಸಲಿಟ್ಟಿರುವುದು ಸ್ವಾಗತರ್ಹ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಜಿಲ್ಲೆಯ ಜನರ ಹೋರಾಟದ ಫಲವಾಗಿ ಯೋಜನೆ ರೂಪುಗೊಂಡಿದೆ ಎಂಬುದನ್ನು ಬೊಮ್ಮಾಯಿ ಮರೆಯಬಾರದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಎಸ್‌.ಎಂ.ಕೃಷ್ಣ, ಧರ್ಮಸಿಂಗ್‌, ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಸಂದರ್ಭದಲ್ಲಿ ನಾನು ಸಂಸತ್ತಿನ ಗಮನ ಸೆಳೆದಿದ್ದೇನೆ. ಜಿಲ್ಲೆಯ ಜನರು ನಿರಂತರವಾಗಿ ಹೋರಾಟ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

‘ಯೋಜನೆ ಸಾಕಾರಗೊಂಡಿರುವುದಕ್ಕೆ ಜಿಲ್ಲೆಯ ಜನರು ಎಲ್ಲರಿಗೂ ಕೃತಜ್ಞರಾಗಿದ್ದಾರೆ. ಈ ಯೋಜನೆ ಪಕ್ಷವೊಂದರ ಸಾಧನೆಯಲ್ಲ. ಹೀಗೆ ಬಿಂಬಿಸಿಕೊಳ್ಳಲು ಮುಂದಾಗುವುದು ನ್ಯಾಯಸಮ್ಮತ ನಡೆಯಲ್ಲ. ಬೇರೆ ಮುಖ್ಯಮಂತ್ರಿಗಳ ಕೊಡುಗೆ ಕಡೆಗಣಿಸುವುದು ಬೊಮ್ಮಾಯಿ ಅವರಿಗೆ ಘನತೆ ತರುವುದಿಲ್ಲ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ತಪ್ಪು. ಚುನಾವಣೆಯ ಹೊಸ್ತಿಲಲ್ಲಿ ಆಧಾರರಹಿತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು