ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಪೆಟ್ರೋಲ್‌ ಬಂಕ್‌: ಆದಾಯಕ್ಕೆ ಮಾತ್ರ ಆದ್ಯತೆ, ಸೌಲಭ್ಯ ಮರೀಚಿಕೆ

Published 26 ಆಗಸ್ಟ್ 2024, 7:23 IST
Last Updated 26 ಆಗಸ್ಟ್ 2024, 7:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಿದ್ದು, ಶೇ 90ರಷ್ಟು ಬಂಕ್‌ಗಳಲ್ಲಿ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳಿಲ್ಲ. ಬಂಕ್‌ಗಳ ಮಾಲೀಕರು ಹಣ ಸಂಪಾದನೆಗಷ್ಟೇ ಮಹತ್ವ ಕೊಟ್ಟಿದ್ದು, ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬರುತ್ತಿದೆ.

ಬಹುತೇಕ ಬಂಕ್‌ಗಳು ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿವೆ. ಬಂಕ್‌ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನಗಳಿಗೆ ಗಾಳಿ (ಏರ್‌) ಹಾಕುವ ಸೌಲಭ್ಯಗಳಿಲ್ಲ. ಸೌಲಭ್ಯವಂಚಿತ ಬಂಕ್‌ಗಳು ಗ್ರಾಹಕ ವಿರೋಧಿಯಾಗಿವೆ.

ಸರ್ಕಾರಿ ಸ್ವಾಮ್ಯದ ರಿಟೇಲರ್‌ಗಳಾದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌), ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಕಂಪನಿಗಳಿಂದ ಪೆಟ್ರೋಲ್‌ ಬಂಕ್‌ ತೆರೆಯಲಾಗಿದೆ. ಖಾಸಗಿ ಸ್ವಾಮ್ಯದ ಕೆಲ ಬಂಕ್‌ಗಳೂ ಇವೆ.

ಖಾಸಗಿ ಸ್ವಾಮ್ಯದ ಬಂಕ್‌ಗಳಲ್ಲಿ ಎಲ್ಲಾ ರೀತಿಯ ನಿಯಮ ಪಾಲನೆ ಮಾಡಲಾಗುತ್ತಿದ್ದು, ಗ್ರಾಹಕರಿಗೆ ಸೌಲಭ್ಯ ನೀಡಲಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ಕಂಪನಿಯ ಬಂಕ್‌ಗಳಲ್ಲಿ ಸೌಲಭ್ಯ ನೀಡಲು ನಿರ್ಲಕ್ಷ್ಯ ವಹಿಸಲಾಗಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಹಲವು ಬಂಕ್‌ಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದು, ಶೌಚಾಲಯವಿಲ್ಲದೇ ಪರದಾಡುವಂತಾಗಿದೆ. ನಗರದ ಬಿ.ಡಿ. ರಸ್ತೆಯಲ್ಲಿರುವ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಸೌಲಭ್ಯ ಮರೀಚಿಕೆಯಾಗಿದೆ.

ಜಿಲ್ಲಾ ಆಸ್ಪತ್ರೆ ಎದುರು ಹೆದ್ದಾರಿಗೆ ಹೊಂದಿಕೊಂಡಂತಿರುವ ಪೆಟ್ರೋಲ್‌ ಬಂಕ್‌ ಅತ್ಯಂತ ಕಿರಿದಾಗಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಬಂಕ್‌ನಲ್ಲಿ ಗ್ರಾಹಕರು ಹೆಚ್ಚಾದಾಗ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ನಿಯಮಾನುಸಾರ ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಳ್ಳುವ ಗ್ರಾಹಕರಿಗೆ ಉಚಿತವಾಗಿ ಗಾಳಿ ಹಾಕಬೇಕು. ಆದರೆ, ಜಿಲ್ಲೆಯಾದ್ಯಂತ ಬಹುತೇಕ ಬಂಕ್‌ಗಳಲ್ಲಿ ಗಾಳಿ ಹಾಕುವ ಅಭ್ಯಾಸವೇ ಇಲ್ಲ. ಚಳ್ಳಕೆರೆ ಗೇಟ್‌ಗೆ ತೆರಳುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ರಿಜ್‌ ಕೆಳಗಿರುವ ಪೆಟ್ರೋಲ್‌ ಬಂಕ್‌ನಲ್ಲಿ ಗಾಳಿ ಹಾಕುವ ಯಂತ್ರ ಕೆಟ್ಟು ಹಲವು ತಿಂಗಳುಗಳೇ ಕಳೆದಿವೆ. ಇಂದಿಗೂ ದುರಸ್ತಿಯಾಗಿಲ್ಲ.

ಯಾರಾದರೂ ಈ ಬಗ್ಗೆ ಕೇಳಿದರೆ ‘ರಿಪೇರಿ ಮಾಡುವ ಮೆಕ್ಯಾನಿಕ್‌ ಸಿಗುತ್ತಿಲ್ಲ, ಶೀಘ್ರ ಸರಿಯಾಗಲಿದೆ’ ಎಂಬ ಉತ್ತರ ಬರುತ್ತದೆ. ಹೊಳಲ್ಕೆರೆ ರಸ್ತೆಯಲ್ಲಿರುವ 2 ಪೆಟ್ರೋಲ್‌ ಬಂಕ್‌ನಲ್ಲಿ ಗಾಳಿ ಹಾಕುವ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಹಲವು ಬಂಕ್‌ಗಳಲ್ಲಿ ಶೌಚಾಲಯಗಳ ಬಾಗಿಲು ಹಾಕಿದ್ದು, ಅವುಗಳನ್ನು ತೆರೆಯುವ ಕೆಲಸ ಮಾಡಿಲ್ಲ.

‘ಪೆಟ್ರೋಲ್‌ ಬಂಕ್‌ಗಳ ಮಾಲೀಕರು ಲಾಭ ಮಾತ್ರ ನೋಡುತ್ತಾರೆ. ಸೌಲಭ್ಯ ನೀಡಲು ಹಿಂದೇಟು ಹಾಕುತ್ತಾರೆ. ಪೆಟ್ರೋಲ್‌ ಬಂಕ್‌ಗಳು ವಿಶ್ರಾಂತಿ ತಾಣಗಳೂ ಆಗಿವೆ. ಅಂತಹ ಬಂಕ್‌ಗಳನ್ನು ಜಿಲ್ಲೆಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಗ್ರಾಹಕರಾದ ತಿಪ್ಪಣ್ಣ ಹೇಳಿದರು.

ತೈಲ ಕಂಪನಿಗಳ ಅಧಿಕಾರಿಗಳು ಜಿಲ್ಲೆಯ ಬಂಕ್‌ಗಳ ಉಸ್ತುವಾರಿಯನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಆಯಾ ಕಂಪನಿಗಳ ಮಾರಾಟ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು. ಗ್ರಾಹಕರಿಗೆ ಸೌಲಭ್ಯ ನೀಡದ ಬಂಕ್‌ ಮಾಲೀಕರಿಗೆ ದಂಡ ವಿಧಿಸಬಹುದು. ಆದರೆ, ಅಂತಹ ಯಾವುದೇ ಕಠಿಣ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳದ ಕಾರಣ ಪೆಟ್ರೋಲ್‌ ಬಂಕ್‌ ಮಾಲೀಕರು ಗ್ರಾಹಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ.

ಪೆಟ್ರೋಲ್‌ ಬಂಕ್‌ಗಳಲ್ಲಿ ಬೆಂಕಿ ಅವಘಡದ ಆತಂಕ ಇದ್ದೇ ಇರುತ್ತದೆ. ಹೀಗಾಗಿ ಅಲ್ಲಿ ಬೆಂಕಿ ನಂದಿಸುವ ಸಿಲಿಂಡರ್‌, ಮರಳು, ನೀರಿನ ಬಕೆಟ್‌ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಆದರೆ, ಬೆಂಕಿ ಅನಾಹುತವನ್ನು ಎದುರಿಸಬಹುದಾದ ಯಾವುದೇ ಸಿದ್ಧತೆಗಳೂ ಇಲ್ಲವಾಗಿವೆ.

ಚಿತ್ರದುರ್ಗದ ಬಿ.ಡಿ.ರಸ್ತೆಗೆ ಹೊಂದಿಕೊಂಡಂತಿರುವ ಪೆಟ್ರೋಲ್ ಬಂಕ್ ಸೌಲಭ್ಯ ವಂಚಿತವಾಗಿದೆ
ಚಿತ್ರದುರ್ಗದ ಬಿ.ಡಿ.ರಸ್ತೆಗೆ ಹೊಂದಿಕೊಂಡಂತಿರುವ ಪೆಟ್ರೋಲ್ ಬಂಕ್ ಸೌಲಭ್ಯ ವಂಚಿತವಾಗಿದೆ
ಬಂಕ್‌ಗಳಲ್ಲಿಲ್ಲ ಗಾಳಿ ತುಂಬುವ ಯಂತ್ರ ನೀರು ಇಲ್ಲದೇ ಶೌಚಾಲಯಗಳಿಗೆ ಬೀಗ ಬೆಂಕಿ ಅವಘಡ ಆದರೂ ಇಲ್ಲ ಸಿದ್ಧತೆ
ಬಹುತೇಕ ಪೆಟ್ರೋಲ್‌ ಬಂಕ್‌ಗಳು ನಷ್ಟದಲ್ಲಿದ್ದು ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಆದಕಾರಣ ನಿಯಮಾನುಸಾರ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ
ವಾಸಣ್ಣ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘದ ಅಧ್ಯಕ್ಷ
ಹಲವು ಬಂಕ್‌ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಶೌಚಾಲಯ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಗಾಳಿ ಹಾಕದ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ದಂಡ ಹಾಕಲಾಗುವುದು
ಗೌತಮ್‌ ನಾಯರ್‌ ಬಿಪಿಸಿಎಲ್‌ ಮಾರುಕಟ್ಟೆ ಅಧಿಕಾರಿ
ಬಿಲಿಸಿಗೆ ಹೈರಾಣಾಗುವ ಗ್ರಾಹಕರು
ಚಳ್ಳಕೆರೆ: ಬಹುತೇಕ ಬಂಕ್‌ಗಳಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಗ್ರಾಹಕರು ಬಿಸಿಲಿದ್ದಾಗ ಹೈರಾಣಾಗಬೇಕಾದ ಸ್ಥಿತಿ ಇದೆ. ಬೇಸಿಗೆಯಲ್ಲಿ ಬೆಂಕಿ ಅವಘಡದ ಅಪಾಯಇರುವ ಕಾರಣ ಬಂಕ್‌ಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪಟ್ಟಣದ ಬಳ್ಳಾರಿ ಬೆಂಗಳೂರು ಚಿತ್ರದುರ್ಗ ಹಾಗೂ ಪಾವಗಡ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹೊರತುಪಡಿಸಿದರೆ ಗ್ರಾಹಕರು ಮತ್ತು ಕಾರ್ಮಿಕರಿಗೆ ಬಂಕ್‌ಗಳಲ್ಲಿ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ‌ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕಿಸಲು ಗ್ರಾಮೀಣ ಪ್ರದೇಶಗಳ ಚಾಲಕರು ಬಂಕ್‌ ಬಳಿ ಬಂದಾಗ ಮಲ ಮೂತ್ರ ವಿಸರ್ಜನೆಗೆ ಚಡಪಡಿಸುತ್ತಿರುತ್ತಾರೆ. ಬಂಕ್‌ಗಳಲ್ಲಿ ನೆರಳಿನ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿಲು ಗಾಳಿ ಮಳೆಯಲ್ಲೇ ನಿಂತು ತೈಲ ಹಾಕಿಸುವ ಅನಿವಾರ್ಯತೆ ಗ್ರಾಹಕರಿಗಿದೆ. ಹೀಗಾಗಿ ಬಂಕ್‌ಗಳಲ್ಲಿ ಶುದ್ಧ ಕುಡಿಯುವ ನೀರು ನೆರಳು ಶೌಚಾಲಯ ವ್ಯವಸ್ಥೆಗೆ ಕೊಡಲೇ ಕ್ರಮ ಕೈಗೊಳ್ಳಬೇಕು ಎಂದು ನಗರದ ಹಿರಿಯ ನಾಗರಿಕರಾದ  ಪಿ.ತಿಪ್ಪೇಸ್ವಾಮಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಬಂಕ್‌ಗಳಲ್ಲಿಲ್ಲ ನೆರಳಿನ ವ್ಯವಸ್ಥೆ
ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಬಿಸಿಲು ಹೆಚ್ಚು. ಅದರಲ್ಲೂ ಬಿರು ಬೇಸಿಗೆಯಲ್ಲಿ ಹೊರಗಡೆ ಕಾಲಿಡಲು ಆಗದಷ್ಟು ಧಗೆ ಇರುತ್ತದೆ. ತೈಲ ಹಾಕಿಸಿಕೊಳ್ಳಲು ಹೋದಾಗ ಕೆಲ ಬಂಕ್‌ಗಳಲ್ಲಿ ಹತ್ತಾರು ನಿಮಿಷ ಕಾಯುವುದು ಅನಿವಾರ್ಯ. ಹೀಗೆ ನೆರಳಿರದ ಕಡೆ ಸರದಿಯಲ್ಲಿ ನಿಲ್ಲುವ ಗ್ರಾಹಕರ ಸ್ಥಿತಿ ಹೇಳತೀರದು. ಕಂಪನಿ ಕಾನೂನಿನ ಪ್ರಕಾರ ಕೆಲ ಬಂಕ್‌ಗಳಿಗೆ ಶೀಟ್‌ ವ್ಯವಸ್ಥೆ ಮಾಡುವಂತಿಲ್ಲ. ಮಧ್ಯಾಹ್ನದ ವೇಳೆ 40 ಡಿಗ್ರಿ  ಮೀರಿ ಬಿಸಿಲು ಇರುತ್ತದೆ. ಇದರಿಂದ ಗನ್‌ಗೆ ಇಂಧನ ಎತ್ತಿಕೊಡುವ ಮೋಟರ್‌ಗಳು ಏರ್‌ ಬ್ಲಾಕ್‌ ಆಗಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಪದೇಪದೇ ನೀರನ್ನು ಹಾಕಿಕೊಂಡು ತಂಪಾಗಿಸಿ ಇಂಧನ ಹಾಕಲಾಗುತ್ತದೆ. ಕೆಲ ಸಲ ಅರ್ಧ ಗಂಟೆಯಾದರೂ ಮೋಟರ್‌ಗಳು ಸ್ಟಾರ್ಟ್‌ ಆಗುವುದಿಲ್ಲ. ಒಂದೇ ಬಂಕ್‌ ಇರುವ ಕಡೆ ಇದು ಗ್ರಾಹಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ನೆರಳಿನ ವ್ಯವಸ್ಥೆ ಮಾಡಿಸಲು ಮಾಲೀಕರು ಸಿದ್ಧರಿದ್ದರೂ ಕಂಪನಿ ಮಾನದಂಡಗಳು ಅಡ್ಡವಾಗಿವೆ. ಇಂತಹ ಬಂಕ್‌ಗಳಿಗೆ ಕೆಲಸ ಮಾಡಲು ಸಿಬ್ಬಂದಿಯೂ ಬರುತ್ತಿಲ್ಲ ಎನ್ನಲಾಗಿದೆ. ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಈ ಸಮಸ್ಯೆ ಇಲ್ಲ. ಬಂಕ್‌ಗಳ ಮೇಲೆ ಶೀಟ್‌ ಹಾಕದಿರುವುದು ತಾಲ್ಲೂಕಿನ ಹವಾಮಾನಕ್ಕೆ ಮಾರಕವಾಗಿದ್ದು ಧಗೆ ಹೆಚ್ಚಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಂಬಂಧಪಟ್ಟವರು ಗಮನಹರಿಸಿ ನೆರಳಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಗ್ರಾಹಕರು. ಇನ್ನು ಬಂಕ್‌ಗಳಲ್ಲಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಶೌಚಾಲಯ ವಾಹನಗಳ ಚಕ್ರಗಳಿಗೆ ಗಾಳಿ ಹಾಕುವ ಯಂತ್ರ ಎಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ. ಬಂಕ್‌ಗಳ ಪರವಾನಗಿ ನವೀಕರಿಸುವ ಸಮಯದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿವೆ ಎಂದೇ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಶಾಮೀಲಾಗಿರುವ ಅನುಮಾನವಿದೆ ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT