ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ಕೃಷಿಕರೇ ಬೆಲೆ ನಿರ್ಧರಿಸುವಂತಾಗಲಿ: ಸ್ವಾಮೀಜಿ

ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ
Last Updated 3 ನವೆಂಬರ್ 2022, 5:16 IST
ಅಕ್ಷರ ಗಾತ್ರ

ಹೊಸದುರ್ಗ: ಕೃಷಿಕರು ಸಂಕಷ್ಟ ಎದುರಿಸುತ್ತಿದ್ದು, ಇನ್ನಾದರೂ ರೈತರು ಜಾಗೃತಗೊಂಡು ತಾವು ಬೆಳೆದ ಬೆಲೆಗೆ ತಾವೇ ಬೆಲೆ ನಿರ್ಧರಿಸವಂತಾಗಬೇಕು. ಮಾರುಕಟ್ಟೆ ಸೃಷ್ಟಿಸಿಕೊಳ್ಳವತ್ತ ಯುವಕೃಷಿಕರು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೃಷಿ ಇಲಾಖೆಯಿಂದ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ‘ಸಿರಿಧಾನ್ಯಗಳ ಸಿರಿ’ ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾಟಕೋತ್ಸವದ ಅಂಗವಾಗಿ ಮಠದಲ್ಲಿ ಸಿರಿಧಾನ್ಯಗಳನ್ನೇ ಬಳಸಿ, ವೈವಿಧ್ಯಮಯ ಆಹಾರ ಪದಾರ್ಥಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅವುಗಳ ಮಹತ್ವ, ರುಚಿ ಮತ್ತು ಶಕ್ತಿಯನ್ನು ಎಲ್ಲರೂ ಅರಿಯುವಂತಾಗಬೇಕು ಎಂದರು.

2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿರಿಧಾನ್ಯದ ಬೆಳೆಗಳನ್ನು ಪ್ರೋತ್ಸಾಹಿಸಲು ಪ್ರತಿ ರೈತರಿಗೆ ₹ 10 ಸಾವಿರ ಸಹಾಯಧನ ನೀಡಲಾಗಿದೆ. ಪ್ರಸ್ತುತ ಸಿರಿಧಾನ್ಯವನ್ನು ಬಿಟ್ಟು ಅನ್ಯ ದಾನ್ಯಗಳಲ್ಲಿ ಸುಖ ಅರಸುತ್ತಿರುವುದು ವಿಪರ್ಯಾಸ. ಜಾಹೀರಾತುಗಳಿಗೆ ಮರುಳಾಗದೇ ಸಂಸ್ಕರಣೆ ಮಾಡಿ, ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ಸಂಸ್ಕರಣಾ ಘಟಕಕ್ಕೆ ಸರ್ಕಾರದಿಂದ ₹ 10 ಲಕ್ಷ ಸಹಾಯಧನ ನೀಡಲಾಗುತ್ತದೆ. ರೈತರು ನಂದಿನಿ ಹಾಲಿನ ಉತ್ಪನ್ನದ ಮಾದರಿಯಂತೆ ಬೆಳೆದ ಎಲ್ಲಾ ಉತ್ಪನ್ನಗಳನ್ನು ಒಂದು ಬ್ರಾಂಡ್‌ ನೇಮ್‌ ಅಡಿ ಮಾರಾಟ ಮಾಡುವ ಕಾರ್ಯವಾಗಬೇಕು ಎಂದುಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್‌ ಕುಮಾರ್‌ ಸಲಹೆ ನೀಡಿದರು.

ಕಡಿಮೆ ಫಲವತ್ತತೆ ಇರುವ ಭೂಮಿಯಲ್ಲೂ, ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಗುಣ ಸಿರಿಧಾನ್ಯಕ್ಕಿದೆ. ಹೊಸದುರ್ಗ ತಾಲ್ಲೂಕನ್ನು ಸಿರಿಧಾನ್ಯಗಳ ಕಣಜ ಎಂದು ಘೋಷಣೆ ಮಾಡಬೇಕಾಗಿದೆ ಎಂದರು.

ಕೃಷಿ ಉತ್ಪಾದನೆಯಲ್ಲಿ ಗೆಲ್ಲುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಸೋಲುತ್ತಿದೆ. ಈಗ ಮಾಹಿತಿ ಕೊರತೆಯಿಲ್ಲ. ಇಚ್ಛಾಶಕ್ತಿಯ ಕೊರತೆಯಿದೆ. ಕೃಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ. ಕೆಲಸ ಮಾಡುವ ತೀವ್ರತೆಯಿಲ್ಲದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ವಾಟ್ಸ್‌ಆ್ಯಪ್‌ ಮತ್ತು ಯೂಟೂಬ್‌ ಬಳಸಿಕೊಂಡು ರೈತ ಉತ್ಪಾದಕ ಕಂಪನಿಗಳನ್ನು ಸುಲಭವಾಗಿ ಮಾರುಕಟ್ಟೆಯಲ್ಲಿ ಸ್ಥಾಪಿಸಿಕೊಳ್ಳಬಹುದು. ರೈತರ ಬ್ರಾಂಡ್‌ಗಳನ್ನೇ ಖರೀದಿಸುವ ಶಪಥ ರೈತರು ಮಾಡಬೇಕು ಎಂದುಸಂಪನ್ಮೂಲ ವ್ಯಕ್ತಿ ಯೋಗೀಶ್‌ ಅಪ್ಪಾಜಯ್ಯ ಹೇಳಿದರು.

‘ಸಿರಿಧಾನ್ಯಗಳ ಸಿರಿ’ ಉತ್ಪಾದನಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ, ಮುಖಂಡರಾದ ಹೆಬ್ಬಳ್ಳಿ ಓಂಕಾರಪ್ಪ, ಮಲ್ಲಿಕಾರ್ಜುನ್‌, ವಿಜಯ್‌ಧಾನ್‌ ರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ. ಮಹೇಶ್ವರಪ್ಪ, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್‌. ಈಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT