ಶುಕ್ರವಾರ, ಮೇ 27, 2022
21 °C
ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂಧನ ಪೂರೈಕೆ ಸ್ಥಗಿತ

ಪೆಟ್ರೋಲ್ ಬಂಕ್ ಮಾಲೀಕರಿಗೆ ನಷ್ಟದ ಬರೆ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗಿರುವುದರಿಂದ ಖಾಸಗಿ ಕಂಪನಿಯವರು ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತಗೊಳಿಸಿದ್ದು, ಪೆಟ್ರೋಲ್ ಬಂಕ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

‘ಕಚ್ಚಾತೈಲದ ಬೆಲೆ ಏರಿಕೆ ಹಾಗೂ ಪೆಟ್ರೋಲ್ ಮಾರಾಟ ದರ ಕಡಿಮೆ ಇರುವುದರಿಂದ ಪ್ರತೀ ಲೀಟರ್‌ಗೆ ₹20 ನಷ್ಟ ಆಗುತ್ತಿದೆ ಎಂದು ರಿಲಯನ್ಸ್, ಶೆಲ್, ನಯಾರಾ, ಎಸ್.ಆರ್. ಮತ್ತಿತರ ಖಾಸಗಿ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಸರಬರಾಜು ನಿಲ್ಲಿಸಿವೆ. ಇದರಿಂದ ನಾವು 20 ದಿನದಿಂದ ಬಂಕ್ ಸ್ಥಗಿತಗೊಳಿಸಿದ್ದೇವೆ. ನಮ್ಮ ತಾಲ್ಲೂಕಿನ ಚಿಕ್ಕಜಾಜೂರು ಸೇರಿ ಜಿಲ್ಲೆಯಲ್ಲಿ 30 ಪೆಟ್ರೋಲ್ ಬಂಕ್‌ಗಳು ಮುಚ್ಚಿವೆ. ಕೊರೊನಾ ಸಂದರ್ಭದಲ್ಲಿ ಆದ ನಷ್ಟದಿಂದ ಕಂಗೆಟ್ಟಿರುವಾಗಲೇ ಮತ್ತೊಂದು ಆಘಾತ ನಮಗೆ ಉಂಟಾಗಿದೆ’ ಎನ್ನುತ್ತಾರೆ ಟಿ.ನುಲೇನೂರು ಗೇಟ್‌ನ ಶಿವನಾರದಮುನಿ ಪೆಟ್ರೋಲ್ ಬಂಕ್ ಮಾಲೀಕ ತೀರ್ಥಪ್ರಸಾದ್.

‘ಸರ್ಕಾರದ ಒಡೆತನದ ಎಚ್.ಪಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಕಂಪನಿಗಳಿಗೆ ನಷ್ಟ ಆದರೂ ಸರ್ಕಾರ ಸರಿದೂಗಿಸಿಕೊಳ್ಳುತ್ತದೆ. ಆದರೆ ಈಗ ಮಾರಾಟ ಆಗುತ್ತಿರುವ ಪೆಟ್ರೋಲ್ ದರದಲ್ಲಿ ಖಾಸಗಿ ಕಂಪನಿಗಳಿಗೆ ನಷ್ಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆ ಆಗಬೇಕು, ಇಲ್ಲವೇ ಇಲ್ಲಿನ ಪೆಟ್ರೋಲ್ ದರ ಮತ್ತಷ್ಟು ಹೆಚ್ಚಬೇಕು. ಆಗ ಮಾತ್ರ ನಾವು ಬಂಕ್ ನಡೆಸಲು ಸಾಧ್ಯ. ಸರ್ಕಾರ ಶೀಘ್ರವೇ ಮಧ್ಯ ಪ್ರವೇಶಿಸಿ ಖಾಸಗಿ ಕಂಪನಿಗಳ ನೆರವಿಗೆ ಬರಬೇಕು’ ಎಂದು ಅವರು ಆಗ್ರಹಿಸುತ್ತಾರೆ.

‘ಮೂರ್ನಾಲ್ಕು ದಿನಗಳಿಂದ ಖಾಸಗಿ ಕಂಪನಿಯವರು ಮಾಲು ಕೊಡಲು ಆರಂಭಿದ್ದಾರೆ. ಆದರೆ ಕಡಿಮೆ ಮಾಲು ಒದಗಿಸುತ್ತಿದ್ದು, ವಾರಕ್ಕೆ ಪ್ರತೀ ಬಂಕ್‌ಗೆ 5,000 ಲೀಟರ್ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುತ್ತಾರೆ. ನಮ್ಮಲ್ಲಿ ಎರಡೇ ದಿನಕ್ಕೆ ಇಷ್ಟು ಇಂಧನ ಖಾಲಿ ಆಗುತ್ತದೆ. ಮತ್ತೆ ನಾಲ್ಕು ದಿನ ಬಂಕ್ ಮುಚ್ಚಬೇಕಾಗುತ್ತದೆ ಎಂದು ನಾವು ಬಂಕ್ ತೆರೆದಿಲ್ಲ. ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಿದಾಗ ನಮ್ಮಲ್ಲಿ ಹೆಚ್ಚು ಸ್ಟಾಕ್ ಇತ್ತು. ಆಗ ಒಂದೇ ಬಾರಿಗೆ ₹10 ಲಕ್ಷ ನಷ್ಟ ಉಂಟಾಯಿತು. ಬಂಕ್‌ನಲ್ಲಿ ಕೆಲಸ ಮಾಡುವ ಹುಡುಗರ ಸಂಬಳ, ಪೆಟ್ರೋಲ್ ಟ್ಯಾಂಕರ್ ಲಾರಿಯ ಕಂತು, ಚಾಲಕರಿಗೆ ಸಂಬಳ, ಬ್ಯಾಂಕ್ ಬಡ್ಡಿ ಸೇರಿ ತಿಂಗಳಿಗೆ ಏನಿಲ್ಲವೆಂದರೂ ₹3 ಲಕ್ಷ ನಷ್ಟವಾಗುತ್ತಿದೆ’ ಎನ್ನುತ್ತಾರೆ ಅವರು.

‘ಈಗ ರಷ್ಯಾದಿಂದ ಪೆಟ್ರೋಲ್, ಡೀಸೆಲ್ ತರಿಸಲು ಆರಂಭಿಸಲಾಗಿದೆ. ಈ ಇಂಧನ ಬಂದ ನಂತರ ದರ ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಅದು ಇಲ್ಲಿಗೆ ಬಂದು ಸಂಸ್ಕರಣೆ ಆಗಿ ಬಂಕ್ ಸೇರಲು ಇನ್ನೂ 2 ತಿಂಗಳು ಬೇಕು. ಅಲ್ಲಿಯವರೆಗೆ ನಮ್ಮ ಗತಿ ಏನು?’ ಎಂದು ಪೆಟ್ರೋಲ್ ಬಂಕ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು