ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು, ಸಿಮೆಂಟ್‌ ಮಿಶ್ರಣಕ್ಕೆ ಸರ್ಕಾರ ಸಿದ್ಧತೆ: ಗಣಿ ಸಚಿವ ಮುರುಗೇಶ ನಿರಾಣಿ

Last Updated 5 ಜುಲೈ 2021, 14:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಸ ಮರಳು ನೀತಿ ಅನುಷ್ಠಾನಕ್ಕೆ ಸಜ್ಜಾದ ಸರ್ಕಾರ, ಮರಳು ಹಾಗೂ ಸಿಮೆಂಟ್‌ ಮಿಶ್ರಣ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಪ್ರಯೋಗ ಯಶಸ್ವಿಯಾದರೆ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಭಾರಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಗಣಿ ಸಚಿವ ಮುರುಗೇಶ ನಿರಾಣಿ ಈ ವಿಷಯವನ್ನು ಬಹಿರಂಗಪಡಿಸಿದರು.

‘ಮಾರುಕಟ್ಟೆಯಲ್ಲಿರುವ ಸಿಗುವ ಸಿದ್ಧ ಆಹಾರದ ಮಾದರಿಯಲ್ಲಿ ಮಿಶ್ರಣ ಇರಲಿದೆ. ಮರಳು ಹಾಗೂ ಸಿಮೆಂಟ್‌ ಮಿಶ್ರಣವನ್ನು ವೈಜ್ಞಾನಿಕವಾಗಿ ಮಾಡಲಾಗುತ್ತದೆ. ನೀರು ಸೇರಿಸಿ ಕಟ್ಟಡ ನಿರ್ಮಾಣಕ್ಕೆ ನೇರವಾಗಿ ಬಳಕೆ ಮಾಡಬಹುದು. ಪ್ರಾಯೋಗಿಕ ಹಂತ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಹೊಸ ಮರಳು ನೀತಿ ಅನುಷ್ಠಾನಕ್ಕೆ ಬರುತ್ತಿದೆ. ಇದರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ವರ್ಷಪೂರ್ತಿ ಮರಳು ಪೂರೈಸುವ ಹಾಗೂ ಎಲ್ಲರಿಗೂ ಮರಳು ಲಭ್ಯವಾಗುವಂತೆ ನೋಡಿಕೊಳ್ಳವ ಉದ್ದೇಶದಿಂದ ಮರಳನ್ನು ಚೀಲಕ್ಕೆ ತುಂಬಲಾಗುತ್ತಿದೆ. ನೀರಿನ ಅಂಶವನ್ನು ತೆಗೆದು, ಶುಚಿಗೊಳಿಸುವದರಿಂದ ವರ್ಷದವರೆಗೆ ದಾಸ್ತಾನು ಮಾಡಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ರೋಗಗ್ರಸ್ಥ ಗಣಿ ಆರಂಭ:

‘ರಾಜ್ಯದಲ್ಲಿರುವ ರೋಗಗ್ರಸ್ಥ ಗಣಿಗಳ ಪುನರಾರಂಭಕ್ಕೆ ಸರ್ಕಾರ ಆಲೋಚನೆ ಮಾಡುತ್ತಿದೆ. ಸಿ ದರ್ಜೆಯ 33 ಗಣಿಗಳನ್ನು ಗುರುತಿಸಲಾಗಿದೆ. ನಷ್ಟದ ಕಾರಣಕ್ಕೆ ಬಾಗಿಲು ಮುಚ್ಚಿದ್ದರಿಂದ ಸಮಸ್ಯೆ ಉಂಟಾಗಿದೆ. ಇವು ಪುನರಾರಂಭವಾದರೆ ಉದ್ಯೋಗ ಸೃಷ್ಟಿಯಾಗಲಿದೆ. ಸರ್ಕಾರಕ್ಕೂ ಆದಾಯ ಬರಲಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಗಣಿ ಸಂಪತ್ತು ಹೇರಳವಾಗಿದೆ. ಇದಕ್ಕೆ ಅಗತ್ಯ ತಂತ್ರಜ್ಞಾನ, ಮೂಲ ಸೌಲಭ್ಯವೂ ಉತ್ತಮವಾಗಿದೆ. ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌ ತಾಮ್ರ ಗಣಿಯ ಪುನಶ್ಚೇತನಕ್ಕೆ ಆಲೋಚನೆ ನಡೆಯುತ್ತಿದೆ. ಅನುಭವಿಗಳ ನೆರವು ಕೋರಲಾಗುತ್ತಿದೆ. ಗಣಿ ತ್ಯಾಜ್ಯದ ಪುನರ್‌ ಬಳಕೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ’ ಎಂದು ವಿವರಿಸಿದರು.

₹ 4,500 ಕೋಟಿ ಲಭ್ಯ:

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಲ್ಲಿ (ಕೆಎಂಇಆರ್‌ಸಿ) ರಾಜ್ಯದ ₹ 25 ಸಾವಿರ ಕೋಟಿ ಹಣ ಇದೆ. ಚಿತ್ರದುರ್ಗದ ₹ 4,500 ಕೋಟಿ ಹಣವೂ ಇದರಲ್ಲಿದೆ. ಈ ನಿಧಿಯ ಬಳಕೆಗೆ ಸಂಬಂಧಿಸಿದಂತೆ ಶೀಘ್ರವೇ ನ್ಯಾಯಾಲಯದಿಂದ ಸೂಚನೆ ಬರುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆಗಳು ವಿಸ್ತೃತ ಯೋಜನಾ ವರದಿ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಮೀಸಲಿಡಲಾಗಿದೆ. ಖನಿಜ ಭವನದ ನಿರ್ಮಾಣಕ್ಕೆ ಶೀಘ್ರವೇ ಭೂಮಿಪೂಜೆಯೂ ನೆರವೇರಲಿದೆ. ಒಂದುವರ್ಷದೊಳಗೆ ಖನಿಜ ಭವನ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ಖನಿಜ ಭವನ ಕಾರ್ಯನಿರ್ವಹಿಸುತ್ತಿವೆ. ಇನ್ನೂಳಿದ ಜಿಲ್ಲೆಗಳಲ್ಲೂ ಖನಿಜ ಭವನಗಳನ್ನು ಸ್ಥಾಪನೆ ಮಾಡಲಾಗುವುದು’ ಎಂದರು.

ಏಕ ಗವಾಕ್ಷಿ ವ್ಯವಸ್ಥೆ:

‘ಗಣಿ ಸಂಬಂಧಿ ಸಮಸ್ಯೆಗಳ ಇತ್ಯರ್ಥಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯದ ಹಲವೆಡೆ ಇತ್ಯರ್ಥಕ್ಕೆ ಬಾಕಿ ಇರುವ ಆರು ಸಾವಿರ ಅರ್ಜಿಗಳಿವೆ. ಗಣಿ ಅದಾಲತ್‌ ಮೂಲಕ ಬಗೆಹರಿಸಲು ಸಾಧ್ಯವಿದೆ. ಕೋವಿಡ್‌ ಕಾರಣದಿಂದ ಇದು ವಿಳಂಬವಾಗಿದೆ. ಶೀಘ್ರದಲ್ಲೇ ಇದಕ್ಕೆ ಚಾಲನೆ ಸಿಗಲಿದೆ. ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಗಣಿಗೆ ಸಂಬಂಧಿಸಿದ ಅಧ್ಯಯನ ನಡೆಯಲಿದೆ. ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧವಿದೆ’ ಎಂದರು.

‘ಗಣಿ ಇಲಾಖೆಯ ಸಿಬ್ಬಂದಿಗೆ ಸಮವಸ್ತ್ರದ ವ್ಯವಸ್ಥೆ ಇಲ್ಲ. ಇದರಿಂದ ಇವರನ್ನು ಗುರುತಿಸುವುದು ಕಷ್ಟ. ಹೀಗಾಗಿ, ಇಲಾಖೆಯ ಎಲ್ಲ ಸಿಬ್ಬಂದಿಗೆ ಪೊಲೀಸ್‌ ಇಲಾಖೆ ಮಾದರಿಯ ಸಮವಸ್ತ್ರ ಕಡ್ಡಾಯಗೊಳಿಸಲಾಗುವುದು. ಆ.15ರಿಂದ ಇದು ಜಾರಿಗೆ ಬರಲಿದೆ. ವಾಕಿಟಾಕಿ, ಜಿಪಿಎಸ್‌ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಹೇಳಿದರು.

ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಕೆಎಂಇಆರ್‌ಸಿ ನಿರ್ದೇಶಕ ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಇದ್ದರು.

***

ಜಿಲ್ಲಾ ಖನಿಜ ನಿಧಿಯ (ಡಿಎಂಎಫ್‌) ಒಂದಂಶವೂ ದುರ್ಬಳಕೆ ಆಗಲು ಸಾಧ್ಯವಿಲ್ಲ. ನಿಗದಿತ ಮಾನದಂಡದ ಅನುಸಾರ ಬಳಕೆ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ನೀರಿನ ಸಂರಕ್ಷಣೆಗೆ ವಿನಿಯೋಗಿಸಲಾಗುತ್ತಿದೆ.

ಜಿ.ಎಚ್‌.ತಿಪ್ಪಾರೆಡ್ಡಿ
ಶಾಸಕ, ಚಿತ್ರದುರ್ಗ

***

ಚಳ್ಳಕೆರೆ ಕ್ಷೇತ್ರದಲ್ಲಿ ಮರಳು ಸಮಸ್ಯೆ ಇದೆ. ಆಶ್ರಯ ಮನೆ ನಿರ್ಮಾಣ ಮಾಡಿಕೊಳ್ಳುವ ಬಡವರಿಗೆ ತೊಂದರೆ ಆಗುತ್ತಿದೆ. ಸರ್ಕಾರ ರೂಪಿಸಿದ ಮರಳು ನೀತಿ ಚೆನ್ನಾಗಿದೆ. ಇದು ಆದಷ್ಟು ಬೇಗ ಅನುಷ್ಠಾನಕ್ಕೆ ಬರಬೇಕು.

ಟಿ.ರಘುಮೂರ್ತಿ
ಶಾಸಕ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT