ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಸೋಂಕಿತರ ಚಿಕಿತ್ಸೆಗೆ 22 ಕೋವಿಡ್‌ ಆರೈಕೆ: ಸಚಿವ ಬಿ.ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಪ್ರತ್ಯೇಕ ಚಿಕಿತ್ಸೆ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೋಂಕಿತರ ಶುಶ್ರೂಷೆಗಾಗಿ ಜಿಲ್ಲೆಯಲ್ಲಿ 22 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಇಲ್ಲಿನ ತಮಟಕಲ್ಲು ರಸ್ತೆಯ ಬಿಸಿಎಂ ಹಾಸ್ಟೆಲ್‌ನಲ್ಲಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್‌ ದೃಢಪಟ್ಟವರು ಮನೆಯಲ್ಲೇ ಚಿಕಿತ್ಸೆ ಪಡೆಯುವುದರಿಂದ ಸೋಂಕು ಹರಡುತ್ತಿದೆ. ಕುಟುಂಬ, ಸಮುದಾಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದನ್ನು ಮನಗಂಡ ಸರ್ಕಾರ ಸೋಂಕಿತರನ್ನು ಜನರಿಂದ ಬೇರ್ಪಡಿಸುವ ಉದ್ದೇಶದಿಂದ ಆರೈಕೆ ಕೇಂದ್ರಗಳನ್ನು ತೆರೆದಿದೆ. ಸೋಂಕು ದೃಢಪಟ್ಟ ಬಳಿಕ ಇಲ್ಲಿಗೆ ಸ್ಥಳಾಂತರಗೊಂಡರೆ ಚಿಕಿತ್ಸೆ ಸಿಗಲಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರನ್ನು ಸುರಕ್ಷಿತವಾಗಿ ಕಾಪಾಡುವ ಅಗತ್ಯವಿದೆ. ಸೋಂಕಿನ ಲಕ್ಷಣಗಳಿರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್‌ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಲಾಗುವುದು. ಎಲ್ಲ ಕಡೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯ ನೂರಾರು ಹಳ್ಳಿಗಳು ಕೋವಿಡ್ ಸೋಕಿತ ಗ್ರಾಮಗಳಾಗಿವೆ. ಜನರು ತೊಂದರೆಗೆ ಒಳಗಾಗಿದ್ದು, ಕೋವಿಡ್ ಹರಡದಂತೆ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಅಗತ್ಯ ಸಹಕಾರ ನೀಡಬೇಕು’ ಮನವಿ ಮಾಡಿದರು.

‘ಕಪ್ಪು ಶಿಲೀಂದ್ರ ಪ್ರಕರಣಗಳು ವರದಿಯಾಗಿವೆ. ಇದರ ಚಿಕಿತ್ಸೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಔಷಧಿಯನ್ನು ಪೂರೈಕೆ ಮಾಡಲಿದೆ. ಹೀಗಾಗಿ, ಜಿಲ್ಲೆಯ ಜನರು ಭಯ, ಆತಂಕಕ್ಕೆ ಒಳಗಾಗಬಾರದು’ ಎಂದರು.

ನಗರದ ಬಿವಿಎಸ್‍ಕೆ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ 70 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದ್ದು, ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಗಿಗಳ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.

ಇಲ್ಲಿ 68 ಜನರು ದಾಖಲಾಗಿದ್ದು, 37 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇವರಿಗೆ ಊಟ, ವಸತಿ, ಬಿಸಿನೀರು ಹಾಗೂ ಎಲ್ಲ ಔಷಧವನ್ನು ಸರ್ಕಾರವೇ ಒದಗಿಸುತ್ತಿದೆ. ಚಿಕಿತ್ಸೆಗೆ ಒಬ್ಬರು ವೈದ್ಯರು, ಶುಶ್ರೂಷಕರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಇಆರ್‌ಎಂ ಸಂಸ್ಥೆ ನೆರವು
ಆರ್‌.ಪ್ರವೀಣ್‌ ಚಂದ್ರ ಮಾಲೀಕತ್ವದ ಇಆರ್‌ಎಂ ಸಮೂಹ ಸಂಸ್ಥೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಯಕೆಯಡಿ (ಸಿಎಸ್‌ಆರ್‌) ಕೋವಿಡ್‌ ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಿದೆ.

ಹಾಸ್ಟೆಲ್‌ನ ಕಟ್ಟಡದಲ್ಲಿ 250 ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 20 ಬೆಡ್‌ಗಳಿಗೆ ಆಮ್ಲಜನಕದ ಸೌಲಭ್ಯ ಇದೆ. ಆರೈಕೆ ಕೇಂದ್ರಕ್ಕೆ ಅಗತ್ಯ ಇರುವ ಎಲ್ಲ ಪರಿಕರಗಳನ್ನು ಸಂಸ್ಥೆ ಒದಗಿಸಿದೆ.

‘ಆರ್‌.ಪ್ರವೀಣ್‌ ಚಂದ್ರ ಸಂಸ್ಥೆಯ ನೀಡಿದ ನೆರವನ್ನು ಸರ್ಕಾರ ಸ್ಮರಿಸುತ್ತದೆ. ಜಿಲ್ಲಾಡಳಿತ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ. ಇತರ ಉದ್ಯಮಿಗಳಿಂದ ಇದೇ ರೀತಿಯ ನೆರವು ನಿರೀಕ್ಷೆ ಮಾಡಲಾಗುತ್ತಿದೆ’ ಎಂದು ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು