ಶುಕ್ರವಾರ, ಜೂಲೈ 10, 2020
22 °C
ಹೊರ ಜಿಲ್ಲೆಗೆ ಸಾರಿಗೆ ಸಂಚಾರ, ಸೇವೆ ಒದಗಿಸಿದ 67 ಬಸ್‌

ಬೆಂಗಳೂರಿಗೆ ತೆರಳಿದ ಪ್ರಯಾಣಿಕರೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಚಿತ್ರದುರ್ಗ ವಿಭಾಗ ಮಂಗಳವಾರ ಹೊರ ಜಿಲ್ಲೆಗೆ ಸಾರಿಗೆ ಸೇವೆ ಒದಗಿಸಿತು. ಮೊದಲ ದಿನವೇ 67 ಬಸ್‌ಗಳು ಸಂಚರಿಸಿದವು. ಇದರಲ್ಲಿ ಬೆಂಗಳೂರಿಗೆ ಪ್ರಯಾಣಿಸಿದವರ ಸಂಖ್ಯೆಯೇ ಹೆಚ್ಚಾಗಿತ್ತು.

ಬೆಳಿಗೆ 7ಕ್ಕೆ ಆರಂಭವಾದ ಸಾರಿಗೆ ಬಸ್‌ ಸಂಚಾರ ಸಂಜೆ 5ಕ್ಕೆ ಮುಕ್ತಾಯವಾಯಿತು. ಬೆಂಗಳೂರು ಮಾರ್ಗವಾಗಿ ಸಾಗುವ ಬಸ್‌ಗಳ ಸೇವೆ ಮಧ್ಯಾಹ್ನ 2.30ಕ್ಕೆ ಕೊನೆಗೊಂಡಿತು. ಸಂಜೆ 7 ಗಂಟೆಗೆ ನಿಗದಿತ ಸ್ಥಳ ತಲುಪುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಎರಡು ಗಂಟೆಗೂ ಮೊದಲೇ ಸೇವೆ ಸ್ಥಗಿತಗೊಂಡಿತು.

ಚಿತ್ರದುರ್ಗ ವಿಭಾಗದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ಘಟಕಗಳಿಂದ ಸಾರಿಗೆ ಬಸ್‌ಗಳು ಸೇವೆ ಒದಗಿಸಿದವು. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಚರಿಸಿದವು. ಶಿವಮೊಗ್ಗಕ್ಕೆ ಎರಡು, ದಾವಣಗೆರೆ ಎರಡು, ಹೊಸಪೇಟೆ ಹಾಗೂ ಹಾಸನಕ್ಕೆ ತಲಾ ಒಂದು ಬಸ್‌ ಮಾತ್ರ ಸಂಚರಿಸಿದವು. 55ಕ್ಕೂ ಅಧಿಕ ಬಸ್‌ಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿದವು.

ಸರತಿ ಸಾಲಿನಲ್ಲಿ ಅಂತರ: ಸಾರಿಗೆ ಬಸ್‌ ನಿಲ್ದಾಣ ಪ್ರವೇಶಕ್ಕೆ ಸರತಿ ಸಾಲು ಕಡ್ಡಾಯಗೊಳಿಸಲಾಗಿತ್ತು. ಬಸ್‌ ನಿಲ್ದಾಣದ ಹೊರಭಾಗದ ಎರಡೂ ದಿಕ್ಕಿಗೂ ಸರತಿ ಸಾಲು ಚಾಚಿಕೊಂಡಿತ್ತು. ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಮಾರ್ಕಿಂಗ್‌ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸರತಿ ಸಾಲಿನ ಶಿಸ್ತು ಕಾಪಾಡುವ ಹೊಣೆ ಹೊತ್ತಿದ್ದರು. ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮಾಸ್ಕ್‌ ಧರಿಸದೇ ಬರುವವರನ್ನು ಸಾರಿಗೆ ಸಿಬ್ಬಂದಿ ವಾಪಾಸ್‌ ಕಳುಹಿಸಿದರು. ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಿದ್ದರು. ಹತ್ತು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರ ಪ್ರಯಾಣಕ್ಕೆ ಅವಕಾಶ ಇರಲಿಲ್ಲ.

ಆರೋಗ್ಯ ತಪಾಸಣೆ: ಸರತಿ ಸಾಲಿನಲ್ಲಿ ಬರುವ ಪ್ರತಿಯೊಬ್ಬರ ಆರೋಗ್ಯವನ್ನು ತಪಾಸಣೆ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ದೇಹದ ಉಷ್ಣಾಂಶವನ್ನು ಪರಿಶೀಲಿಸಲಾಯಿತು. 98 ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಶೀಥ, ಕೆಮ್ಮು, ನೆಗಡಿ ಹಾಗೂ ಜ್ವರ ಇರುವವರಿಗೆ ಸೇವೆ ನಿರಾಕರಿಸಲಾಯಿತು.

ಪ್ರತಿ ಪ್ರಯಾಣಿಕರ ವಿವರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪಡೆದರು. ಹೆಸರು, ಮೊಬೈಲ್‌ ಸಂಖ್ಯೆ ಸಹಿತ ಸಂಪೂರ್ಣ ವಿಳಾಸ ದಾಖಲಿಸಿಕೊಳ್ಳಲಾಯಿತು. ಆಧಾರ್‌, ಮತದಾರರ ಚೀಟಿ, ಚಾಲನಾ ಪರವಾನಗಿ ಸೇರಿ ಇತರ ಗುರುತಿನ ಚೀಟಿಯನ್ನು ಪರಿಶೀಲಿಸಲಾಯಿತು.

30 ಪ್ರಯಾಣಿಕರು: ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ 28ರಿಂದ 30 ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ ಅವಕಾಶವಿತ್ತು. ಪ್ರತಿ ಪ್ರಯಾಣಿಕರ ಸಂಪೂರ್ಣ ವಿಳಾಸವನ್ನು ನಿರ್ವಾಹಕರು ಮತ್ತೊಮ್ಮೆ ನಮೂದಿಸಿಕೊಂಡರು. ಬಸ್‌ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

50 ವರ್ಷದ ಒಳಗಿನ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿಯೇ ತಯಾರಿಸಿದ ಮಾಸ್ಕ್‌ಗಳನ್ನು ಸಿಬ್ಬಂದಿಗೆ ನೀಡಲಾಗಿದೆ. ಸಂಚಾರ ಮುಗಿಸಿದ ಬಳಿಕ ಪ್ರತಿ ಬಸ್‌ ಅನ್ನು ರಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಯಿತು. 

ಮಾರ್ಗ ಮಧ್ಯ ನಿಲುಗಡೆ ಇಲ್ಲ: ನಿಲ್ದಾಣದಿಂದ ಹೊರಡುವ ಬಸ್‌, ಮಾರ್ಗ ಮಧ್ಯದಲ್ಲಿ ನಿಲುಗಡೆ ಮಾಡುವುದಿಲ್ಲ. ನಿಗದಿತ ಸ್ಥಳ ತಲುಪಿದ ಮೇಲೆಯೇ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗುತ್ತದೆ. ಬೆಂಗಳೂರಿಗೆ ಸಾಗುವ ಪ್ರಯಾಣಿಕರಿಗೆ ಮಾರ್ಗ ಮಧ್ಯೆ ಊಟ ಹಾಗೂ ವಿಶ್ರಾಂತಿಗೆ ಬಿಡುವು ನೀಡಲಾಗುತ್ತಿತ್ತು. ಈಗ ಇದಕ್ಕೆ ಅವಕಾಶವಿಲ್ಲ.

ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಜಿಲ್ಲೆಯಿಂದ ಬೆಂಗಳೂರಿಗೆ ಸಾಗುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಾಗುತ್ತವೆ. ಈ ಯಾವ ಬಸ್‌ಗಳು ಚಿತ್ರದುರ್ಗ ಬಸ್‌ ನಿಲ್ದಾಣಕ್ಕೆ ಬರಲಿಲ್ಲ. ಚಿತ್ರದುರ್ಗದಿಂದ ಬೆಂಗಳೂರಿಗೆ ಸಾಗಿದ ಬಸ್‌ಗಳು ಹಿರಿಯೂರು, ಶಿರಾ ಹಾಗೂ ತುಮಕೂರಿಗೆ ಸಾಗುವ ಪ್ರಯಾಣಿಕರಿಗೂ ಸೇವೆ ಒದಗಿಸಲಿಲ್ಲ. ಈ ಊರುಗಳಿಗೆ ತಲುಪುವ ಪ್ರಯಾಣಿಕರು ಬೆಂಗಳೂರಿನ ಟಿಕೆಟ್‌ ಪಡೆಯುವುದು ಕಡ್ಡಾಯವಾಗಿತ್ತು.

ಮಧ್ಯಪ್ರದೇಶಕ್ಕೆ ಪ್ರಯಾಣ: ಲಾಕ್‌ಡೌನ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಪ್ರದೇಶದ ಕಾರ್ಮಿಕರು ಮಂಗಳವಾರ ಪ್ರಯಾಣ ಬೆಳೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟರು.

ಮಧ್ಯಪ್ರದೇಶಕ್ಕೆ ಬೆಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. 146 ಕಾರ್ಮಿಕರನ್ನು ಐದು ಬಸ್‌ಗಳಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಪೊಲೀಸರ ಭದ್ರತೆಯಲ್ಲಿ ಬಸ್‌ಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿದವು. ಪೊಲೀಸ್‌ ಅಧಿಕಾರಿಗಳು ಕಾರ್ಮಿಕರಿಗೆ ಶುಭ ಹಾರೈಸಿದರು.

₹ 17 ಕೋಟಿ ನಷ್ಟ: ಕೊರೊನಾ ಸೋಂಕಿನ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಿದ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗಕ್ಕೆ ಈವರೆಗೆ ₹ 17 ಕೋಟಿ ನಷ್ಟ ಉಂಟಾಗಿದೆ. ಈ ನಷ್ಟ ಇನ್ನೂ ಮುಂದುವರಿಯಲಿದ್ದು, ಇದರ ಪ್ರಮಾಣ ಮಾತ್ರ ಕಡಿಮೆಯಾಗಲಿದೆ.

ಪ್ರತಿ ಕಿ.ಮೀ. ಸಾರಿಗೆ ಬಸ್‌ ಸಂಚಾರಕ್ಕೆ ₹ 36 ರೂಪಾಯಿ ವೆಚ್ಚ ತಗಲುತ್ತದೆ. ಆಸನದ ಸಾಮರ್ಥ್ಯ ಇರುವಷ್ಟು ಪ್ರಯಾಣಿಕರು ಸೇವೆ ಪಡೆದರೆ ಮಾತ್ರ ಲಾಭವಾಗುತ್ತದೆ. ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಆಸನದ ಸಾಮರ್ಥ್ಯದ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಪ್ರತಿ ಕಿ.ಮೀ.ಗೆ ₹ 20 ಮಾತ್ರ ಲಭ್ಯವಾಗುತ್ತಿದೆ. ಇನ್ನೂ ₹ 16 ನಷ್ಟ ಉಂಟಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು