ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | 'ಪರಿಸರ ಕಾಳಜಿ ಸಾಂಕೇತಿಕ ಆಗಬಾರದು'

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ
Published 30 ಮೇ 2024, 15:57 IST
Last Updated 30 ಮೇ 2024, 15:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಸರ ಕಾಳಜಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕವಾದರೆ ಯಾವುದೇ ಪ್ರಯೋಜನವಿಲ್ಲ. ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನಲ್ಲಿ ಪ್ರಕೃತಿ ಧರ್ಮ ಪಾಲನೆಗೊಂಡಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಎಸ್‌ಜೆಎಂ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಗುರುವಾರ ಮುರುಘಾ ಮಠದಿಂದ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹದಲ್ಲಿ ಮಾತನಾಡಿದ ಅವರು, ‘ಪರಿಸರ ದಿನ, ವನಮಹೋತ್ಸವ ಎಲ್ಲರ ಸಹಭಾಗಿತ್ವದಲ್ಲಿ ನಡೆಯಬೇಕು’ ಎಂದರು.

‘ಪ್ರಕೃತಿ ಅಸಮತೋಲನದಿಂದ ತಾಪಮಾನ ಇನ್ನಿಲ್ಲದಂತೆ ಏರಿಕೆ ಕಾಣುತ್ತಿದೆ. ಋತುಮಾನಕ್ಕೆ ತಕ್ಕಂತೆ ಬರುತ್ತಿದ್ದ ಮಳೆಗಳು ಹದ ತಪ್ಪಿವೆ. ಇದು ಆತಂಕಕಾರಿ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಕಾಲಕ್ಕೆ ಮಳೆ ಬಾರದ ಕಾರಣ ಭೀಕರ ಬರಗಾಲ ಅನುಭವಿಸಬೇಕಾಯಿತು. ಅತಿಯಾದ ನಿರೀಕ್ಷೆ, ಅಭಿವೃದ್ಧಿ ಹೆಸರಲ್ಲಿ ನಗರೀಕರಣ ಈ ಎಲ್ಲದಕ್ಕೂ ಪ್ರಮುಖ ಕಾರಣ. ಅಮೂಲ್ಯ ಸಸ್ಯ ಸಂಪತ್ತು ಹಾಳಾಗಿ ಕಾಂಕ್ರೀಟ್ ಕಾಡು ತಲೆ ಎತ್ತಿರುವುದು ಅನಾರೋಗ್ಯಕರ ಬೆಳವಣಿಗೆಗೆ ಒಂದು ನಿದರ್ಶನ’ ಎಂದರು.

‘ಸಮೀಕ್ಷಾ ವರದಿ ಪ್ರಕಾರ ರೈತರು ತಮ್ಮ ಹೊಲದ ಬದುವಿನಲ್ಲಿರುವ ಸುಮಾರು 50 ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಿದ್ದಾರೆ. ಗಿಡ ಮರ ಪೋಷಣೆ ಮಾಡುವುದು ಮನುಷ್ಯನ ಒಳಿತಿಗಾಗಿ ಹೊರತು ಅವುಗಳ ಉಪಯೋಗಕ್ಕೆ ಅಲ್ಲ ಎಂಬುದನ್ನು ಅರಿತು ಕೊಳ್ಳಬೇಕು’ ಎಂದು ತಿಳಿಸಿದರು.

‘ಸರ್ಕಾರದ ಯಾವುದೇ ಯೋಜನೆ ಕಾರ್ಯಗತವಾಗಲು ಸಾರ್ವಜನಿಕರ ಸಹಭಾಗಿತ್ವ ಮತ್ತು ಅನುಷ್ಠಾನ ಅಗತ್ಯ. ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಏಳು ದಿನದಲ್ಲಿ ಕನಿಷ್ಠ ಒಂದು ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ’ ಎಂದು ಎಸ್‌ಜೆಎಂ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ವಿವರಿಸಿದರು.

‘ನಾವು ದಿನದ 24 ಗಂಟೆಯೂ ಸಹ ಪರಿಸರ ಜಾಗೃತಿ ಅಭಿಯಾನದ ಕಡೆಗೆ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡುವಂತಹ ಕ್ರಮಕ್ಕೆ ಕಡಿವಾಣ ಹಾಕುವ ಮೂಲಕ ಪರಿಸರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವತ್ತ ನಮ್ಮ ಚಿತ್ತ ಹರಿಯಬೇಕು. ಆಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ’ ಎಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಗುರುಮಠಕಲ್‌ನ ಶಾಂತವೀರ ಗುರು ಮುರುಘಾ ರಾಜೇಂದ್ರ ಸ್ವಾಮೀಜಿ, ಆಡಳಿತ ಮಂಡಳಿ ಲೆಕ್ಕ ಪರಿಶೋಧನಾ ಸಮಿತಿ ಸದಸ್ಯ ಎಸ್‌.ಎನ್‌.ಚಂದ್ರಶೇಖರ್‌, ಪ್ರಾಂಶುಪಾಲರಾದ ಪಿ.ಬಿ.ಭರತ್‌, ನಾಗರಾಜ್‌, ಸವಿತಾ, ಎಸ್‌.ವಿ.ರವಿಶಂಕರ್‌, ಬೋರಯ್ಯ, ಬಸವೇಶ್ವರ ವೈದ್ಯಕೀಯ ವಿದ್ಯಾಲಯದ ಅಧೀಕ್ಷಕ ಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT