ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣದ ಕುರಿತು ಭಯ ಬೇಡ

ಫೇಸ್‌ಬುಕ್ ಲೈವ್‌ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರ ಸಲಹೆ
Last Updated 21 ಜೂನ್ 2020, 12:03 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸೂರ್ಯಗ್ರಹಣ ವೀಕ್ಷಿಸದೇ ಮನೆಯೊಳಗೆ ಕೂರುವುದು ಸರಿಯಲ್ಲ. ಬ್ರಹ್ಮಾಂಡದಲ್ಲಿ ಇದೊಂದು ವಿಸ್ಮಯಕಾರಿ ಘಟನೆ. ಕನ್ನಡಕ ಧರಿಸಿ ನೋಡುವುದರಿಂದ ಯಾವ ಅಪಾಯವಿಲ್ಲ. ಗ್ರಹಣದ ಕುರಿತು ಭಯ ಬೇಡ’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಕಂಕಣ ಸೂರ್ಯಗ್ರಹಣದ ಅಂಗವಾಗಿ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ರಹಣ ವೀಕ್ಷಣೆ, ಫೇಸ್‌ಬುಕ್ ಲೈವ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜ್ಯೋತಿಷಿಗಳು ಜನರ ದಿಕ್ಕು ತಪ್ಪಿಸಿ ವಂಚನೆ ಮಾಡುತ್ತಿದ್ದಾರೆ. ಅದನ್ನು ಯಾರು ನಂಬಬೇಡಿ. ಮೋಸದ ಮಾರ್ಗ ಬಿಟ್ಟು ಕಾಯಕ ತತ್ವಕ್ಕೆ ಮನಸ್ಸು ತೆರೆದುಕೊಂಡರೆ ಆರ್ಥಿಕ ಭದ್ರತೆ ಕಾಣಲು ಸಾಧ್ಯವಿದೆ’ ಎಂದು ಜ್ಯೋತಿಷಿಗಳಿಗೂ ಮನವಿ ಮಾಡಿದರು.

‘ಗ್ರಹಣ ಮಾನವ ನಿರ್ಮಿತ ಅಲ್ಲ. ಅದೊಂದು ಪ್ರಕೃತಿದತ್ತವಾಗಿ ಬಂದಿರುವ ಬಳುವಳಿ. ಅನ್ನ, ಆಹಾರ, ನೀರನ್ನು ಚೆಲ್ಲಿ ಎಂಬುದಾಗಿ ಹೇಳುತ್ತಾರೆಯೇ ಹೊರತು ಅಕ್ರಮವಾಗಿ ಸಂಪಾದಿಸಿದ್ದನ್ನು ಮನೆಯಿಂದ ಹೊರಹಾಕಿ ಎಂದು ಯಾರೂ ಹೇಳಿಲ್ಲ. ಚಂದ್ರ, ಸೂರ್ಯಗ್ರಹಣ ಅಮಾವಾಸ್ಯೆ ಮತ್ತು ಹುಣ್ಣಿಮೆ ಇದ್ದಂತೆ. ಭೀತಿಗೆ ಒಳಗಾಗದೇ ವಿಸ್ಮಯ ಆಸ್ವಾಧಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ತಿಳಿಸಿದರು.

‘ಸೂರ್ಯ, ಚಂದ್ರ ಸೇರಿ ಉಳಿದ ಗ್ರಹಗಳು, ಪಂಚಭೂತಗಳು ಯಾರ ಮಾತನ್ನು ಕೇಳುವುದಿಲ್ಲ. ಯಾವಾಗ ಏನು ಸಂಭವಿಸಬೇಕೊ ಅದು ನಡೆಯುವುದು ಖಚಿತ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಅರಿಯದೇ ಕಂದಾಚಾರ, ಮೌಢ್ಯಕ್ಕೆ ಒಳಗಾಗುವುದು ಸರಿಯಲ್ಲ’ ಎಂದರು.

‘ಗ್ರಹಣದ ಕುರಿತು ವಿಜ್ಞಾನಿಗಳಂತೆ ಮಾತನಾಡುವ ಜ್ಯೋತಿಷಿಗಳು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸದೇ ಭೀತಿ ಉಂಟುಮಾಡಿ ಅಕ್ರಮವಾಗಿ ಸಂಪಾದಿಸಲು ಮುಂದಾಗಿದ್ದಾರೆ. ನಿಜಕ್ಕೂ ಎಲ್ಲ ಬಲ್ಲವರಾಗಿದ್ದರೆ, ಕೊರೊನಾ ಕುರಿತು ಏಕೆ ಮುಂಚಿತವಾಗಿ ದೇಶದ ಜನರನ್ನು ಎಚ್ಚರಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ಸೂರ್ಯ, ಚಂದ್ರ ಜ್ಯೋತಿಷಿಗಳ ಮಾತನ್ನು ಕೇಳುವರೆ’, ‘ಗ್ರಹಣದಿಂದ ಅನಾಹುತ ಸಂಭವಿಸುತ್ತದೆಯೇ’, ಗ್ರಹಣ ಒಳ್ಳೆಯದ್ದೆ ಅಥವಾ ಕೆಟ್ಟದ್ದೇ ಹೀಗೆ ಹತ್ತಾರು ಪ್ರಶ್ನೆಗಳನ್ನು ಸಾರ್ವಜನಿಕರು ಫೇಸ್‌ಬುಕ್ ಲೈವ್‌ನಲ್ಲಿ ಕೇಳಿದರು. ವೈಚಾರಿಕವಾಗಿ ಶರಣರು ಉತ್ತರಿಸಿದರು.

ಬಸವನಾಗಿದೇವ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಮಾಚಿದೇವ ಸ್ವಾಮೀಜಿ, ವಕೀಲ ರಹಮತ್‌ವುಲ್ಲಾ, ಶೇಷಣ್ಣಕುಮಾರ್, ನಿರಂಜನಮೂರ್ತಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯಯದರ್ಶಿ ಎ.ಜೆ. ಪರಮಶಿವಯ್ಯ,, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT