ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಕೊಳವೆ ಬಾವಿ ಬತ್ತಿ ಹೋಯ್ತು.. ನೀರಿಗೆ ಕಾದು ಸಾಕಾಯ್ತು...

Published 11 ಏಪ್ರಿಲ್ 2024, 7:35 IST
Last Updated 11 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ‘ಬರಗಾಲದ ಈ ದುರ್ದಿನಗಳಲ್ಲಿ ಯಾಕಪ್ಪಾ ಕತ್ತಲಾಗತ್ತೆ, ಯಾಕಪ್ಪಾ ಬೆಳಗಾಗತ್ತೆ ಎಂಬುದೇ ಚಿಂತೆಯಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಬಾಗಿಲಿಗೆ ನೀರು ಹಾಕಲು, ಪಾತ್ರೆಗಳನ್ನು ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಬಿಂದಿಗೆಗಳನ್ನು ಹಿಡಿದು ಎಲ್ಲಿಯಾದರೂ ನೀರು ಬರುತ್ತಿರುವುದೇ ಎಂದು ಹುಡುಕಾಟ ನಡೆಸುವುದೇ ನಿತ್ಯದ ಕೆಲಸವಾಗಿದೆ’...

ಚಿಕ್ಕಜಾಜೂರು ಸುತ್ತಮುತ್ತಲ ಗ್ರಾಮಗಳ ಮಹಿಳೆಯರ ನಿತ್ಯದ ತೊಳಲಾಟವಿದು.

ಚಿಕ್ಕಜಾಜೂರಿನ ಮಾರುತಿ ಬಡಾವಣೆ, ಕಾವಲುಹಟ್ಟಿ, ಬಿ. ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲವ್ವ ನಾಗತಿಹಳ್ಳಿ, ತಣಿಗೆಹಳ್ಳಿ, ಅಂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ, ಹಿರಿಯೂರು, ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಾಪುರ, ಹನುಮನಕಟ್ಟೆ ಮೊದಲಾದ ಕಡೆಗಳಲ್ಲಿ ನೀರಿಗಾಗಿ ಪರದಾಡುವುದು ನಿತ್ಯದ ಕಾಯಕವಾಗಿದೆ.

ತಾಲ್ಲೂಕಿನ ಗಡಿ ಗ್ರಾಮವಾದ ತಣಿಗೆಹಳ್ಳಿಯಲ್ಲಿ ಇದ್ದ ಎರಡೂ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಇಲ್ಲಿ ಲಂಬಾಣಿ ಜನಾಂಗದವರೇ ಹೆಚ್ಚಾಗಿದ್ದು, ಕೂಲಿ ಕೆಲಸ ಹಾಗೂ ಕೃಷಿ ಮುಖ್ಯ ಕಸುಬಾಗಿದೆ. 1,800ಕ್ಕೂ ಅಧಿಕ ಜನಸಂಖ್ಯೆ ಇದ್ದು, ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.

‘ಇದು ಗಣಿ ಪ್ರದೇಶವಾಗಿದ್ದು, ಗಣಿ ಕಂಪನಿಗಳು ದಿನಕ್ಕೆ ಎರಡು ಟ್ಯಾಂಕರ್‌ಗಳಲ್ಲಿ ನೀರು ಕಳುಹಿಸುತ್ತಾರೆ. ಆದರೆ, ಈ ನೀರು ಗ್ರಾಮದ ಅಷ್ಟೂ ಜನರಿಗೆ ಹಾಗೂ ಜಾನುವಾರುಗಳಿಗೆ ಸಾಕಾಗುತ್ತಿಲ್ಲ’ ಎನ್ನುತ್ತಾರೆ ಗ್ರಾಮದ ಶೇಖರಪ್ಪ.

ಸಮೀಪದ ಕಲ್ಲವ್ವ ನಾಗತಿಹಳ್ಳಿಯ ಪರಿಶಿಷ್ಟರ ಕಾಲೊನಿ ಹಾಗೂ ಬಂಜಾರ ತಾಂಡಾಗಳ ನಿವಾಸಿಗಳು ನೀರಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ. ವಿದ್ಯುತ್‌ ಬರುತ್ತಿದ್ದಂತೆಯೇ ಕೊಳವೆ ಬಾವಿಯಲ್ಲಿ 10ರಿಂದ 15 ನಿಮಿಷ ನೀರು ಬರುತ್ತದೆ. ಅದಕ್ಕಾಗಿ ಮಹಿಳೆಯರು, ಮಕ್ಕಳು ಬಿಂದಿಗೆ ಹಿಡಿದು ನಳಗಳ ಬಳಿ ಓಡೋಡುವುದು ಸಾಮಾನ್ಯವಾಗಿದೆ.

ಗ್ರಾಮಸ್ಥರ ನೀರಿನ ಬವಣೆಯನ್ನು ನೀಗಿಸಲು ಗ್ರಾಮ ಪಂಚಾಯಿತಿಯಿಂದ ನಾಲ್ಕೈದು ದಿನಗಳ ಕಾಲ ಟ್ಯಾಂಕರ್‌ ನೀರನ್ನು ಪೂರೈಸಲಾಯಿತಾದರೂ, ನಂತರದ ದಿನಗಳಲ್ಲಿ ಅದನ್ನೂ ನಿಲ್ಲಿಸಲಾಯಿತು.

‘ಗ್ರಾಮ ಪಂಚಾಯಿತಿಯಿಂದ ಹೊಸದಾಗಿ 750ರಿಂದ 800 ಅಡಿ ಆಳದವರೆಗೆ ಕೊಳವೆಬಾವಿ ಕೊರೆಯಿಸಿದರೂ ಒಂದಿಂಚು ನೀರು ದೊರೆತಿದೆ. ಅಷ್ಟು ನೀರನ್ನು ತೆಗೆಯಲು ಸಣ್ಣ ಮೋಟರ್‌ಗಳನ್ನು ಅಳವಡಿಸಿ, ಬರುವ ನೀರಿಗಾಗಿ ಜನರು ಮುಗಿ ಬಿದ್ದು ಹಿಡಿಯುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಜ್ಜಪ್ಪ ತಿಳಿಸಿದರು.

ನೆಂಟರನ್ನು ಬಿಟ್ಟು ಜಾತ್ರೆ ಮಾಡುವ ಸ್ಥಿತಿ: ಈಗ ಯುಗಾದಿ ಹಾಗೂ ಮುಂದಿನವಾರ ರಾಮ ನವಮಿಯನ್ನು ಪ್ರತಿಯೊಂದು ಊರುಗಳಲ್ಲೂ ಆಚರಿಸುತ್ತಾರೆ. ರಾಮನವಮಿಯಂದು ಅನೇಕ ಗ್ರಾಮಗಳಲ್ಲಿ ಜಾತ್ರೆ, ರಥೋತ್ಸವ ನಡೆಯುತ್ತವೆ. ಈ ಬಾರಿ ಬರ ಇರುವುದರಿಂದ ಯುಗಾದಿ ಹಬ್ಬಕ್ಕೆ ಎಣ್ಣೆ ನೀರು ಹಾಕಿಕೊಳ್ಳಲು ಸಮಸ್ಯೆ ಎದುರಾಗಿದೆ. ಅಲ್ಲದೆ, ರಾಮ ನವಮಿಯ ಜಾತ್ರೆಗಳಿಗೆ ನೆಂಟರಿಷ್ಟರನ್ನು ಕರೆಯುವುದಕ್ಕೂ ಹಿಂದೇಟು ಹಾಕುವಂತಾಗಿದೆ ಎಂದು ಚಿಕ್ಕಜಾಜೂರಿನ ಮಾರುತಿ ನಗರ ಬಡಾವಣೆ, ಹಿರಿಯೂರು, ಮಲ್ಲೇನಹಳ್ಳಿ ಗ್ರಾಮಗಳ ಮಹಿಳೆಯರಾದ ರತ್ನಮ್ಮ, ತೊಳಸಮ್ಮ, ಗಿರಿಜಮ್ಮ, ಅನುಸೂಯಾ, ಲಕ್ಷ್ಮೀದೇವಿ, ಸವಿತಾ ಮೊದಲಾದವರು ‘ಪ್ರಜಾವಾಣಿ’ ಬಳಿ ತಮ್ಮ ಆತಂಕ ಹೊರಹಾಕಿದರು.

‘ಸಮೀಪದ ಹನುಮನಕಟ್ಟೆ ಹಾಗೂ ಕೇಶವಾಪುರ, ಚಿಕ್ಕಎಮ್ಮಿಗನೂರು, ಚಿಕ್ಕಂದವಾಡಿ, ಮೊದಲಾದ ಗ್ರಾಮಗಳ ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದ, ಕೆರೆಯನ್ನು ಆಶ್ರಯಿಸಿದ್ದ ಗ್ರಾಮಗಳ ಸಾವಿರಾರು ಜಾನುವಾರುಗಳು, ಕುರಿ, ಮೇಕೆಗಳಿಗೆ ಸಂಕಷ್ಟ ಎದುರಾಗಿದೆ’ ಎನ್ನುತ್ತಾರೆ ಕುರಿಗಾಹಿಗಳಾದ ಬಸವರಾಜಪ್ಪ, ಕಾಂತರಾಜ್‌, ನಿಂಗಪ್ಪ, ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT