ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೋಗಿದ್ದಕ್ಕೆ ದೇವಾಲಯ ತೊಳೆದರು: ಈಶ್ವರಾನಂದಪುರಿ ಶ್ರೀ

ಹೊಸದುರ್ಗ ಕನಕಧಾಮದ ಸ್ವಾಮೀಜಿ ವಿಷಾದ
Published 3 ಫೆಬ್ರುವರಿ 2024, 0:30 IST
Last Updated 3 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಹೊಸದುರ್ಗ: ‘ಹಲವು ವರ್ಷಗಳ ಹಿಂದೆ ತಾಲ್ಲೂಕಿನ ಬಾಗೂರಿನಲ್ಲಿರುವ ಚನ್ನಕೇಶವ ದೇವಾಲಯ ಪ್ರವೇಶಿಸಿದ್ದಕ್ಕೆ ದೇವಸ್ಥಾನವನ್ನೇ ತೊಳೆದಿದ್ದರು. ಮಠಾಧೀಶರಿಗೂ ಅಸಮಾನತೆಯ ಸೋಂಕು ತಗಲುತ್ತಿರುವುದು ಬೇಸರದ ಸಂಗತಿ’ ಎಂದು ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ವಿಷಾದಿಸಿದರು.

ಸಮೀಪದ ಸಾಣೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿರುವ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ‘ಮಠಗಳ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ಮೊದಲೇ ತಿಳಿದಿದ್ದರೆ ಕನಕದಾಸನಂತೆ ಪ್ರತಿಭಟನೆ ಮಾಡಿ ದೇವಾಲಯ ಪ್ರವೇಶಿಸುತ್ತಿದ್ದೆ. ಆದರೆ, ಆ ವಿಷಯ ನಂತರ ತಿಳಿಯುತು’ ಎಂದ ಅವರು, ‘ದೇವಾಲಯ ತೊಳೆಯುವ ಬದಲು ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ’ ಎಂದು ಸಲಹೆ ನೀಡಿದರು.

‘ಇತ್ತೀಚೆಗಷ್ಟೇ ವೈಕುಂಠ ಏಕಾದಶಿಯಂದು ದೇವಾಲಯದ ಆಹ್ವಾನದ ಮೇರೆಗೆ ನಾವು ಮತ್ತು ಶಾಂತವೀರ ಸ್ವಾಮೀಜಿ ಹೋಗಿ, ದೇವಾಲಯದ ಗರ್ಭಗುಡಿಯ ಮುಂದಿನ ಪ್ರಾಂಗಣದಲ್ಲಿ ನಿಂತಿದ್ದೆವು. ಗರ್ಭಗುಡಿಗೆ ನಮ್ಮ ಪ್ರವೇಶವನ್ನು ತಡೆದರು. ಆದರೆ, ಪೂಜಾರಿಗಳ ಕುಟುಂಬದ ಹೆಣ್ಣುಮಕ್ಕಳಿಗೆ ಅವಕಾಶ ಕಲ್ಪಿಸಿದರು. ಮಠಾಧೀಶರಿಗೇ ಹೀಗಾದರೆ ಹೇಗೆ? ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗುವುದಿಲ್ಲ’ ಎಂದರು.

‘ಬಸವಣ್ಣನವರು ಕೊಟ್ಟ ಇಷ್ಟಲಿಂಗ ಪೂಜೆ ಇಂದು ಜಾತಿಯಾಗಿ ಪರಿವರ್ತನೆಯಾಗಿದೆ. ಕೆಲವು ಮಠಗಳಲ್ಲಿ ಇನ್ನೂ ಅಸಮಾನತೆ ಎದ್ದು ಕಾಣುತ್ತಿದೆ. ಬಸವಣ್ಣನವರ ತತ್ವ ಆದರ್ಶ ಮತ್ತು ವಚನಗಳನ್ನು ನಾವು ಪಾಲಿಸಿದಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಹೇಳಿದರು.

‘ಕರ್ನಾಟಕದ ಪರಂಪರೆಯಲ್ಲಿ ಮಠಗಳ ಪಾತ್ರ ಬಹಳ ದೊಡ್ಡದಾಗಿದೆ. ಹಿಂದಿನಿಂದಲೂ ವೀರಶೈವ ಲಿಂಗಾಯತ ಮಠಗಳು ತಳ ಸಮುದಾಯಗಳ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬೆಳೆಸಿವೆ’ ಎಂದು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಮೀಸಲಾತಿ ಕೇಳಬೇಕಾದವರು ಸುಮ್ಮನಿದ್ದಾರೆ. ಆದರೆ, ಇಂದು ಉಳ್ಳವರೇ ಮೀಸಲಾತಿ ಕೇಳುತ್ತಿದ್ದಾರೆ. ಮೀಸಲಾತಿಗಾಗಿ ಉಳ್ಳವರು ಮತ್ತು ಬಡವರ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಸಾಹಿತಿ ಚಟ್ನಳ್ಳಿ ಮಹೇಶ್ ಇದ್ದರು.

ತರಳಬಾಳು ಮುರುಘಾಮಠ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಮಠಾಧೀಶರು ಅಂಕಣಗಳ ಮೂಲಕ ಸರಳ ಭಾಷೆಯಲ್ಲಿ ಜನರಿಗೆ ತಿಳುವಳಿಕೆ ನೀಡಿದ್ದಾರೆ.
–ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವ ಪೀಠ ಚಿಕ್ಕಮಗಳೂರು
ಬಸವಾದಿ ಶರಣರ ತತ್ವಗಳು ನುಡಿಯಲ್ಲಿದ್ದರೆ ಸಾಲದು ಆಚರಣೆಯಲ್ಲಿರಬೇಕು. ಶೋಷಿತರ ಬಗ್ಗೆ ಅನುಕಂಪದ ಮಾತು ಬೇಕಿಲ್ಲ. ಜಾತಿ ತಾರತಮ್ಯದಿಂದ ಹೊರಬರಬೇಕು.
–ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಠ ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT