ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಸರ್ಕಾರ ಬದ್ಧ: ಪೂರ್ಣಿಮಾ ಶ್ರಿನಿವಾಸ್

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಮತಯಾಚನೆ
Published 18 ಮೇ 2024, 14:12 IST
Last Updated 18 ಮೇ 2024, 14:12 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸರ್ಕಾರಿ ನೌಕರರಿಗೆ ಪಿಂಚಣಿ ರಹಿತ ವ್ಯವಸ್ಥೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರಿನಿವಾಸ್ ಭರವಸೆ ನೀಡಿದರು.

ಪಟ್ಟಣದ ವಿದ್ಯಾವಿಕಾಸ ಶಾಲೆಯಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ಆಗ್ನೇಯ ಶಿಕ್ಷಕರ ಕೇತ್ರದ ವ್ಯಾಪ್ತಿಯಲ್ಲಿರುವ ಅನುದಾನಿತ ಶಾಲೆಗಳ ನವೀಕರಣ ಸಂಬಂಧ ಲೋಪದೋಷಗಳು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಅನುದಾನರಹಿತ ಶಾಲೆಗಳ ಶಿಕ್ಷಕರು ಕಡಿಮೆ ವೇತನಕ್ಕೆ ಹೆಚ್ಚು ಸಮಯ ದುಡಿಯುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಅವರಿಗೆ ಸೇವಾ ಭದ್ರತೆ ನೀಡುವ ನಿಟ್ಟಿನಲ್ಲಿ ಅವರಿಗೆ ಸಂಸ್ಥೆಗಳಿಂದ ಗೌರವಯುತವಾದ ಗೌರವಧನ ನೀಡಲು ಸರ್ಕಾರದ ಮಟ್ಟದಲ್ಲಿ ಕಾನೂನು ರೂಪಿಸಲು ಒತ್ತಡ ಹೇರಲಾಗುವುದು ಎಂದು ಹೇಳಿದರು.

18 ವರ್ಷಗಳಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಹಲವು ಬಾರಿ ಸರ್ಕಾರದ ಭಾಗವಾಗಿದ್ದರು. ಆದರೆ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾದರು. ಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಅನುದಾನಿತ ಶಾಲಾ ಶಿಕ್ಷಕರು ವಿವಿಧ ಭೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ 143 ದಿನಗಳವರೆಗೆ ಚಳವಳಿ ನಡೆಸಿದರು. ಈ ವೇಳೆ ಮೂವರು ಶಿಕ್ಷಕರು ಮೃತಪಟ್ಟರು. ಆದರೆ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಎನಿಸಿಕೊಂಡವರು ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ  ಸೌಜನ್ಯ ತೋರಲಿಲ್ಲ. ಇಂತಹವರು ಮತ್ತೊಮ್ಮೆ ಶಿಕ್ಷಕರ ಬಳಿ ಬಂದು ಮತ ಕೇಳುತ್ತಿರುವುದು ವಿಪರ್ಯಾಸ. ಇದನ್ನು ಶಿಕ್ಷಕರು ಗಮನಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್‌ ಅನ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT