ಮಂಗಳವಾರ, ಆಗಸ್ಟ್ 3, 2021
23 °C
ನೆಟ್‌ವರ್ಕ್‌ ಸಮಸ್ಯೆ, ಸ್ಮಾರ್ಟ್‌ಫೋನ್‌ ಕೊರತೆ ನಡುವೆ ಆರಂಭವಾದ ಬೋಧನೆ

ಚಿತ್ರದುರ್ಗ: ಖಾಸಗಿ ಶಾಲೆಯಲ್ಲಿ ಆನ್‌ಲೈನ್‌ ತರಗತಿ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆನ್‌ಲೈನ್‌ ತರಗತಿಗೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಜಿಲ್ಲೆಯ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬೋಧನೆ ಆರಂಭಿಸಿವೆ. ಮೊಬೈಲ್‌, ಟ್ಯಾಬ್‌, ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ ಮೂಲಕ ತರಗತಿಗಳನ್ನು ನಡೆಸುತ್ತಿವೆ.

ಕಲಿಕೆಯಿಂದ ಮಕ್ಕಳು ವಿಮುಖರಾದಂತೆ ನೋಡಿಕೊಳ್ಳುವ ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶವೂ ಇದರಲ್ಲಿ ಅಡಗಿದೆ. ಆಪತ್ತನ್ನು ಅವಕಾಶವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಪ್ರದರ್ಶಿಸುತ್ತಿವೆ. ನೆಟ್‌ವರ್ಕ್‌ ಸಮಸ್ಯೆ, ಸ್ಮಾರ್ಟ್‌ಫೋನ್ ಕೊರತೆಯ ನಡುವೆಯೂ ತರಗತಿಗಳು ನಡೆಯುತ್ತಿವೆ. ಆದರೆ, ಆನ್‌ಲೈನ್‌ ತರಗತಿಯ ಹಾಜರಿ ಶೇ 50ನ್ನು ಮೀರುತ್ತಿಲ್ಲ.

‘ಜೂಮ್‌’ ಆ್ಯಪ್‌ ಮೂಲಕ ಆನ್‌ಲೈನ್‌ ತರಗತಿ ಆರಂಭಿಸಿದ ಖಾಸಗಿ ಶಾಲೆಗಳು ‘ಗೂಗಲ್‌ ಮೀಟ್‌’ ಹಾಗೂ ‘ಜಿಯೋ ಮೀಟ್‌’ ಆ್ಯಪ್‌ಗೆ ಹೊರಳಿವೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಹಾಗೂ ಸಿಇಟಿ, ಜೆಇಇ ಪರೀಕ್ಷೆಗೆ ಮಾತ್ರ ಆನ್‌ಲೈನ್‌ ಬೋಧನೆ ಮಾಡುತ್ತಿವೆ. ಉಳಿದ ತರಗತಿಗಳಿಗೆ ಸಿದ್ಧಪಡಿಸಿದ ಪಠ್ಯ, ರೆಕಾರ್ಡ್‌ ಮಾಡಿದ ವಿಡಿಯೊ ಒದಗಿಸುತ್ತಿವೆ. ಪ್ರವೇಶ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಆನ್‌ಲೈನ್‌ ಶಿಕ್ಷಣ ಸಿಗುತ್ತಿದೆ.

ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿಯ ‘ಜೆಟ್‌ ಗ್ರಾಮೀಣ ಶಿಕ್ಷಣ ಸಂಸ್ಥೆ’ ಗ್ರಾಮೀಣ ಭಾಗದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದ ಭಾಗ್ಯ ಕಲ್ಪಿಸಿದೆ. ಏಪ್ರಿಲ್‌ ಎರಡನೇ ವಾರದಲ್ಲಿ ಆರಂಭವಾದ ಆನ್‌ಲೈನ್‌ ಶಿಕ್ಷಣ ನಿರಂತರವಾಗಿ ನಡೆಯುತ್ತಿದೆ. ಶಾಲೆ ಆರಂಭವಾಗಿಲ್ಲ ಎಂಬ ಕೊರಗು ವಿದ್ಯಾರ್ಥಿಗಳಲ್ಲಿ ಮೂಡದಿರುವಂತೆ ನೋಡಿಕೊಂಡಿದೆ.

‘ಎಸ್ಸೆಸ್ಸೆಲ್ಸಿಯ 38 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ಸಮಯದ ಮಿತಿಯಲ್ಲೇ ಬೋಧನೆ ನಡೆಯುತ್ತಿದೆ. ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ 60 ಹಳ್ಳಿಯ 800 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಜೆಟ್‌ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ಬೆಳಗೆರೆ.

ಎಲ್‌ಕೆಜಿಯಿಂದ 9ನೇ ತರಗತಿವರೆಗೆ ವಿಡಿಯೊ ಪಾಠಗಳನ್ನು ನೀಡಲಾಗುತ್ತಿದೆ. ಅಧ್ಯಯನ ಸಾಮಗ್ರಿ ಹಾಗೂ ವರ್ಕ್‌ಶೀಟ್‌ ಒದಗಿಸಲಾಗುತ್ತಿದೆ. ಪಾಸ್‌ವರ್ಡ್‌ ಬಳಕೆ ಮಾಡಿಕೊಂಡು ವಿಡಿಯೊ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ವಿಡಿಯೊ ನೋಡಿಕೊಂಡು ಪೋಷಕರೇ ಪಾಠ ಮಾಡುತ್ತಿದ್ದಾರೆ.

ಚಿತ್ರದುರ್ಗದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಕೂಡ ಆನ್‌ಲೈನ್‌ ತರಗತಿ ಆರಂಭಿಸಿದೆ. ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಶಾಲಾ ಕೊಠಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಕರು ತರಗತಿಗೆ ಹಾಜರಾಗಿ ಬೋರ್ಡ್‌ ಉಪಯೋಗಿಸಿ ಪಾಠ ಮಾಡುತ್ತಿದ್ದಾರೆ.

‘ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಆನ್‌ಲೈನ್‌ ಮೂಲಕ ಪರಿಣಾಮಕಾರಿಯಾಗಿ ಬೋಧನೆ ಮಾಡುವುದು ಕಷ್ಟವಾಗುತ್ತಿದೆ. ಬೋರ್ಡ್‌ ಬಳಕೆ ಮಾಡಿಕೊಳ್ಳದಿದ್ದರೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟ’ ಎನ್ನುತ್ತಾರೆ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನಿರ್ದೇಶಕ ಎಸ್‌.ಎಂ.ಪೃಥ್ವೀಶ್‌.

ಸ್ವಂತ ಆ್ಯಪ್‌ ಬಳಕೆ

ಚಿತ್ರದುರ್ಗದ ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆ ಆನ್‌ಲೈನ್‌ ತರಗತಿಗೆ ತನ್ನದೇ ಆ್ಯಪ್‌ ಬಳಕೆ ಮಾಡುತ್ತಿದೆ. ‘ಎಸ್‌ಆರ್‌ಎಸ್‌ ಯುಟಿಲಿಟಿ ಆ್ಯಪ್‌’ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ಒಳಡಿಸಲು ಪ್ರಯತ್ನಿಸುತ್ತಿದೆ.

‘ಲಾಕ್‌ಡೌನ್‌ ಘೋಷಣೆಯಾದ ಬಳಿಕ ಆನ್‌ಲೈನ್‌ ಶಿಕ್ಷಣಕ್ಕೆ ಹೊರಳಿಕೊಂಡೆವು. ಆ್ಯಪ್‌ ಅಭಿವೃದ್ಧಿಪಡಿಸಿ ಪೋಷಕರಿಗೆ ತಲುಪಿಸಿದೆವು. ಆ್ಯಪ್‌ನಲ್ಲಿ ಅಧ್ಯಯನ ಸಾಮಗ್ರಿ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲಾಗಿದೆ’ ಎಂದು ಎಸ್‌ಆರ್‌ಎಸ್‌ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಇ.ಗಂಗಾಧರ್ ತಿಳಿಸಿದರು.

ಪ್ರತಿ ವಿದ್ಯಾರ್ಥಿಗೆ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಲಾಗಿದೆ. ವಿದ್ಯಾರ್ಥಿ ಲಾಗಿಲ್‌ ಆಗಿರುವುದು, ಅಧ್ಯಯನ ಸಾಮಗ್ರಿ ಬಳಕೆ ಮಾಡಿಕೊಂಡಿರುವುದು ದಾಖಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ಕಲಿಕೆಯ ಮೇಲೆ ನಿಗಾ ಇಡಲು ಸಾಧ್ಯವಾಗಿದೆ ಎಂಬುದು ಗಂಗಾಧರ್‌ ಅನುಭವ.

ಸಜ್ಜಾಗದ ಸರ್ಕಾರಿ ಶಾಲೆ

ಆನ್‌ಲೈನ್‌ ಬೋಧನೆಗೆ ಷರತ್ತುಬದ್ಧ ಅನುಮತಿ ಸಿಕ್ಕರೂ ಸರ್ಕಾರಿ ಶಾಲೆಗಳು ಸಜ್ಜಾಗಿಲ್ಲ. ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಸಿದ್ಧತೆಗೆ ಕಾಲಾವಕಾಶ ಸಿಗುತ್ತಿಲ್ಲ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿ ಆರಂಭಿಸಿವೆ. ಇದಕ್ಕೆ ಅನುಕೂಲಕರವಾದ ಮೂಲ ಸೌಲಭ್ಯವೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಂದಿಸಿಕೊಂಡಿವೆ. ಆದರೆ, ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯದ ಕೊರತೆ ಇದೆ.

ಕೆಲ ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಪಿಡಿಎಫ್‌ ಮಾದರಿಯ ಅಧ್ಯಯನ ಸಾಮಗ್ರಿ, ಹೋಂ ವರ್ಕ್‌ ಹಾಗೂ ಪಠ್ಯಕ್ಕೆ ಪೂರಕವಾದ ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯಿಂದ ವಿಮುಖರಾಗದಂತೆ ಎಚ್ಚರ ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು