ಮಂಗಳವಾರ, ಜುಲೈ 27, 2021
26 °C

ಚಿತ್ರದುರ್ಗ | ಆನ್‌ಲೈನ್‌ ಪಾಠ: ತಾಯಿಗೆ ಪುತ್ರಿಯೇ ಗುರು

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದರೂ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ಹತ್ತಾರು ಮಕ್ಕಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡುವುದು ಗೊತ್ತಿರಲಿಲ್ಲ. ಪಿಯು ವ್ಯಾಸಂಗ ಮಾಡಿದ ಮಗಳು ನೆರವು ನೀಡಿದ್ದರಿಂದ ಬೋಧನೆ ಸಾಧ್ಯವಾಯಿತು...’

ಇದು ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿಯ ಜೆಟ್‌ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶಿಕ್ಷಕಿ ರಾಜೇಶ್ವರಿ ಅವರ ಅನುಭವ. ಗೂಗಲ್‌ ಮೀಟ್‌, ಜೂಮ್‌ ಮೀಟ್‌, ವಿಡಿಯೊ ಹಾಗೂ ಆಡಿಯೊ ರೆಕಾರ್ಡ್‌ ಮಾಡುವ ಪರಿಯನ್ನು ಪುತ್ರಿ ವರ್ಷ ಆರ್‌.ಗಿರೀಶ್‌ ಕಲಿಸಿಕೊಟ್ಟಿದ್ದಾರೆ.

15 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ರಾಜೇಶ್ವರಿ ಅವರಿಗೆ ಆನ್‌ಲೈನ್‌ ತರಗತಿ ಹೊಸದು. ಎದುರಿಗೆ ಕುಳಿತ ಮಕ್ಕಳು ಹಾಗೂ ಬೋರ್ಡ್‌ ಬಳಸಿ ಪಾಠ ಮಾಡುವುದು ಇವರ ರೂಢಿ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಕುಳಿತ ಮಕ್ಕಳನ್ನು ನೋಡಿಕೊಂಡು ಬೋಧನೆ ಮಾಡುವುದನ್ನು ಕಲಿಯಲು ತುಸು ಕಷ್ಟಪಟ್ಟಿದ್ದಾರೆ.

‘ಲಾಕ್‌ಡೌನ್‌ ಮುಗಿದ ಬಳಿಕ ಮತ್ತೆ ಶಾಲೆ ಶುರುವಾಗಲಿದೆ ಎಂಬ ನಂಬಿಕೆ ಮೇಲೆ ಮಕ್ಕಳು ಹಾಗೂ ಪೋಷಕರು ಆರಂಭದಲ್ಲಿ ಸಹಕರಿಸಲಿಲ್ಲ. ನೆಟ್‌ವರ್ಕ್‌ ಸಮಸ್ಯೆ, ತಂತ್ರಜ್ಞಾನ ಬಳಕೆಯ ಬಗೆಗಿನ ತಿಳಿವಳಿಕೆಯ ಕೊರತೆಯಿಂದ ಬೇಸರವಾಗಿತ್ತು. ದಿನ ಕಳೆದಂತೆ ಎಲ್ಲವನ್ನು ಕಲಿತೆ. ಏಕಾಏಕಿ ಎದುರಾದ ತಾಂತ್ರಿಕ ತೊಡಕನ್ನು ಮನೆಯಲ್ಲೇ ಇದ್ದ ಮಗಳು ಬಗೆಹರಿಸಿದಳು’ ಎಂದು ಅನುಭವ ಹಂಚಿಕೊಂಡರು.

‘ಲೀಡ್ಸ್‌ ಸ್ಕೂಲ್‌ ಅಟ್‌ ಹೋಮ್‌’ ಎಂಬ ಆ್ಯಪ್‌ ಮೂಲಕ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಸೃಜಿಸಲಾಗಿದೆ. ನೋಂದಣಿ ಮಾಡಿಕೊಂಡ ಮೊಬೈಲ್‌ ಬಳಸಿ ಸಿದ್ಧ ಪಾಠ ಕೇಳುವ ಅವಕಾಶ ಕಲ್ಪಿಸಲಾಗಿದೆ. ‘ಮೊದಮೊದಲು ತಾತ್ಸಾರ ಮಾಡುತ್ತಿದ್ದವರು ಈಗ ಗಂಭೀರವಾಗಿ ಪಾಠ ಕೇಳುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಕಿ ರಾಜೇಶ್ವರಿ.

ಪ್ರತಿ ತರಗತಿಗೆ 50ರಿಂದ 60 ಮಕ್ಕಳು ಹಾಜರಾಗುತ್ತಿದ್ದಾರೆ. ತರಗತಿಗೆ 50 ನಿಮಿಷ ನಿಗದಿ ಮಾಡಲಾಗಿದೆ. ಪ್ರತಿದಿನ ಕನಿಷ್ಠ ಎರಡು ಗಂಟೆ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಆನ್‌ಲೈನ್‌ ಮೂಲಕವೇ ಶಾಲಾ ವಾತಾವರಣ ನಿರ್ಮಿಸುವ ಪ್ರಯತ್ನವನ್ನು ಶಿಕ್ಷಕಿ ಮಾಡುತ್ತಿದ್ದಾರೆ.

ಆನ್‌ಲೈನ್‌ ತರಗತಿಯ ಏಕತಾನತೆಯನ್ನು ಹೋಗಲಾಡಿಸಲು ವಾರಕ್ಕೊಮ್ಮೆ ಪಠ್ಯೇತರ ಚಟುವಟಿಕೆ ನಡೆಸಲಾಗುತ್ತಿದೆ. ಪ್ರತಿ ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಕ್ಕಳು ಹಾಗೂ ಪೋಷಕರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಹಾಡುಗಾರ ಪಿಚ್ಚಳ್ಳಿ ಶ್ರೀನಿವಾಸ್‌ ಅವರು ಒಂದು ವಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಜುಲೈ 18ರಂದು ‘ಮಳೆ ದಿನ’ ಆಚರಿಸಲಾಗಿದೆ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಎದುರು ನೀರಿನ ಟಬ್‌ ಇಟ್ಟುಕೊಂಡ ವಿದ್ಯಾರ್ಥಿಗಳು ಕಾಗದದಲ್ಲಿ ತಯಾರಿಸಿದ ದೋಣಿಯನ್ನು ನೀರಿನಲ್ಲಿ ಬಿಟ್ಟು ಸಂಭ್ರಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು