ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡ್ಡದ ಸಾಂತೇನಹಳ್ಳಿ: ಸತತ 10 ಗಂಟೆ ಹಾರಿದ ಪಾರಿವಾಳ

Last Updated 16 ಜುಲೈ 2021, 5:27 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದಸಾಂತೇನಹಳ್ಳಿಯಲ್ಲಿ ನಡೆದ ಪಾರಿವಾಳ ಹಾರಿಸುವ ಸ್ಪರ್ಧೆಯಲ್ಲಿ ಗಂಗಾಧರ್ ಸಾಕಿರುವ ಪಾರಿವಾಳ ಪ್ರಥಮ ಸ್ಥಾನ ಪಡೆಯಿತು.

ಚನ್ನಗಿರಿಯ ನಲ್ಲೂರು, ಚಿತ್ರದುರ್ಗ ಹಾಗೂ ಮುದ್ದಾಪುರ ತಂಡಗಳು ಪಾರಿವಾಳ ಹಾರಾಟ ಸ್ಪರ್ಧೆ ಆಯೋಜಿಸಿದ್ದವು. ಚನ್ನಗಿರಿ ಹಾಗೂ ಮುದ್ದಾಪುರ ತಂಡಗಳಲ್ಲಿ 100 ಕ್ಕೂ ಹೆಚ್ಚು ಪಾರಿವಾಳಗಳು, ಚಿತ್ರದುರ್ಗದ ತಂಡದಲ್ಲಿ 20 ಪಾರಿವಾಳಗಳು ಪಾಲ್ಗೊಂಡಿವೆ. ಇದುವರೆಗೆ ನಡೆದ ಸ್ಪರ್ಧೆಗಳಲ್ಲಿ ಗಂಗಾಧರ್ ಅವರ ಪಾರಿವಾಳ ಮೂರೂ ತಂಡಗಳಲ್ಲಿ ಪ್ರಥಮ ಸ್ಥಾನದಲ್ಲಿದೆ.

ಬೆಳಿಗ್ಗೆ 6.34ಕ್ಕೆ ಹಾರಿಸಲಾದ ಗಂಗಾಧರ್ ಸಾಕಿದ ಪಾರಿವಾಳ ಸಂಜೆ 4.32ಕ್ಕೆ ಕೆಳಗೆ ಇಳಿಯುವ ಮೂಲಕ ನಿರಂತರ 9.58 ಗಂಟೆ ಬಾನಿನಲ್ಲಿ ಹಾರಾಟ ನಡೆಸಿತು. ಮುದ್ದಾಪುರ ತಂಡದ ಪಾರಿವಾಳ 7.03 ಗಂಟೆ, ನಲ್ಲೂರಿನಲ್ಲಿ ಹಾರಿಸಿದ್ದ ಪಾರಿವಾಳ 6.39 ಗಂಟೆ ಹಾರಾಟ ನಡೆಸಿ ನಂತರದ ಸ್ಥಾನ ಪಡೆದವು. ಪಾರಿವಾಳ ಹಾರಾಟದ ದೃಶ್ಯ ನೋಡಲು ಸುತ್ತಲಿನ ಗ್ರಾಮಗಳ ಪಕ್ಷಿಪ್ರಿಯರು ಆಗಮಿಸಿದ್ದರು.

ಅವರವರ ಗ್ರಾಮಗಳಲ್ಲೇ ಪಾರಿವಾಳಗಳನ್ನು ಹಾರಿಸಲಾಗುತ್ತದೆ. ಎಲ್ಲ ಕಡೆ ಇಬ್ಬರು ರೆಫ್ರಿಗಳನ್ನು ಕಳುಹಿಸಲಾಗುತ್ತದೆ. ಪಾರಿವಾಳ ಹಾರಿಬಿಟ್ಟ ಸ್ಥಳದಲ್ಲಿ ರೆಫ್ರಿಗಳು ಇರುತ್ತಾರೆ. ಪಾರಿವಾಳ ಒಂದು ಗಂಟೆಗೊಮ್ಮೆ ರೆಫ್ರಿಗಳಿಗೆ ಕಾಣಿಸಬೇಕು. ಗಂಟೆಗೂ ಹೆಚ್ಚು ಸಮಯ ಪಾರಿವಾಳ ಮರೆಯಾದರೆ ಪಾರಿವಾಳವನ್ನು ಸ್ಪರ್ಧೆಯಿಂದ ಹೊರಗೆ ಹಾಕಲಾಗುತ್ತದೆ.

‘ನನಗೆ ಪಾರಿವಾಳಗಳೆಂದರೆ ಇಷ್ಟ. ನಾನು 5ನೇ ತರಗತಿ ಓದುವಾಗಲೇ 2 ಪಾರಿವಾಳ ಸಾಕಿದ್ದೆ. ನಮ್ಮ ತಂದೆ ಬಡಗಿಯಾಗಿದ್ದರಿಂದ ಪಾರಿವಾಳದ ಗೂಡು ತಯಾರಿಸಿ ಕೊಟ್ಟಿದ್ದರು. ಈಗ ನಾನು 30 ಪಾರಿವಾಳ ಸಾಕಿದ್ದೇನೆ. ಅದರಲ್ಲಿ ಒಂದು ಪಾರಿವಾಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತದೆ. ನಾನು ಪಾರಿವಾಳಗಳನ್ನು ಮಾರಾಟ ಮಾಡುವುದಿಲ್ಲ. ಸಾಕುವ ಇಚ್ಛೆ ಇರುವ ಸ್ನೇಹಿತರಿಗೆ ಉಚಿತವಾಗಿ ನೀಡುತ್ತೇನೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪಾರಿವಾಳಕ್ಕೆ ₹ 50,000 ದವರೆಗೆ ಬೆಲೆ ಇದೆ. ಅತ್ಯಂತ ಹೆಚ್ಚು ಪ್ರೀತಿಯಿಂದ ಪಕ್ಷಿಗಳನ್ನು ಸಾಕಿದ್ದೇನೆ’ ಎನ್ನುತ್ತಾರೆ ಗಂಗಾಧರ್.

‘ಗಂಗಾಧರ್ ಅವರ ಪಾರಿವಾಳ ಹೆಚ್ಚು ಕಾಲ ಹಾರಾಟ ನಡೆಸಿದೆ. ಎರಡು ಬಾರಿ ಹದ್ದು ಆಕ್ರಮಣ ಮಾಡಲು ಬಂದರೂ ಕೆಳಗೆ ಇಳಿಯದೇ ಧೈರ್ಯದಿಂದ ಹಾರಾಡಿದೆ. ಮೂರ್ನಾಲ್ಕು ಬಾರಿ ಸೋನೆ ಮಳೆ ಬಂದರೂ ಪಾರಿವಾಳ ಕೆಳಗೆ ಇಳಿಯಲಿಲ್ಲ. ಪಾರಿವಾಳ ಹಾರಿಬಿಡುವಾಗ ಗುರುತಿಗಾಗ ರೆಕ್ಕೆಯ ಮೇಲೆ ಸೀಲ್ ಹಾಕುತ್ತೇವೆ’ ಎಂದು ರೆಫ್ರಿಗಳಾದ ಚಿತ್ರದುರ್ಗ ತಂಡದ ರಾಜು, ಮುದ್ದಾಪುರದ ಗುರು, ಶಿವಣ್ಣ ಹಾಗೂ ನಲ್ಲೂರಿನ ರಫಿ ಮೆಚ್ಚುಗೆ ಸೂಚಿಸಿದರು.

ಪಾರಿವಾಳಕ್ಕೆ ಡ್ರೈಫ್ರೂಟ್ಸ್ ಉಂಡೆ

‘ಸ್ಪರ್ಧೆಯಲ್ಲಿ ಭಾಗವಹಿಸುವ ಪಾರಿವಾಳಕ್ಕೆ ಪೌಷ್ಟಿಕ ಆಹಾರ ನೀಡಬೇಕು. ನಿತ್ಯ ನೀರಿನಲ್ಲಿ ತೊಳೆದು ಒಣಗಿಸಿದ ಶುದ್ಧ ರಾಗಿ ತಿನ್ನಿಸುತ್ತೇನೆ. ಸ್ಪರ್ಧೆ ಒಂದು ತಿಂಗಳು ಬಾಕಿ ಇರುವಾಗ ನಿತ್ಯ ಬೆಳಿಗ್ಗೆ 2 ಚಮಚ ಕುಸುಬೆ, ಹೆಸರುಕಾಳು, ಬಿಳಿಜೋಳ, ಕಡಲೆ, 10 ನೆನೆಸಿದ ಕಡಲೆ ಕಾಳು, 5 ಶೇಂಗಾಬೀಜ ತಿನ್ನಿಸುತ್ತೇನೆ. ಸಂಜೆ ಬಾದಾಮಿ, ಗೋಡಂಬಿ, ಪಿಸ್ತಾ, ಒಣದ್ರಾಕ್ಷಿಯಿಂದ ಮಾಡಿದ ಒಂದು ಉಂಡೆ ತಿನ್ನಿಸುತ್ತೇನೆ. ರಾತ್ರಿ 5 ಮಿ.ಲೀ. ಮೇಕೆ ಹಾಲು ಕುಡಿಸುವೆ’ ಎನ್ನುತ್ತಾರೆ ಗಂಗಾಧರ್.

‘ಹೆಚ್ಚು ಕಾಲ ಹಾರಲು ಪಾರಿವಾಳಕ್ಕೆ ತರಬೇತಿ ನೀಡಬೇಕು. ದಿನಾಲು ಬೆಳಿಗ್ಗೆ ಮನೆಯಿಂದ ದೂರ ಹೋಗಿ ಹಾರಲು ಬಿಡಬೇಕು. ಎರಡು ದಿನ ಹಾರಾಟ ಮಾಡಿಸಿದ ನಂತರ ಒಂದು ದಿನ ವಿಶ್ರಾಂತಿ ನೀಡಬೇಕು. ಎರಡು ದಿನಗಳಲ್ಲಿ ಹೆಚ್ಚು ಕಾಲ ಹಾರಿದ ದಿನ ಗುರುತಿಸಿ ಸ್ಪರ್ಧೆ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಅವರು.

.....

ಹತ್ತು ಗಂಟೆ ಹಾರಾಟ ನಡೆಸಿದ ಪಾರಿವಾಳ 2 ವರ್ಷಗಳ ಹಿಂದೆ ನಮ್ಮ ಮನೆಯಲ್ಲೇ ಹುಟ್ಟಿತ್ತು. ಅದನ್ನು ಮನೆ ಮಗನಂತೆ ಸಾಕಿದ್ದೇನೆ.

-ಎಸ್.ಗಂಗಾಧರ್, ಪಾರಿವಾಳದ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT