ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಆಡುಮಲ್ಲೇಶ್ವರ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಆದ್ಯತೆ

* ಚಿತ್ರದುರ್ಗ ಕಿರು ಮೃಗಾಲಯ: ₹ 5 ಲಕ್ಷ ಆದಾಯ ನಷ್ಟ * ಈವರೆಗೂ ಆಹಾರ ವಿತರಣೆಗೆ ತೊಂದರೆ ಆಗಿಲ್ಲ
Last Updated 3 ಮೇ 2020, 3:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗುತ್ತಿದ್ದಾರೆ. ಪ್ರಾಣಿ-ಪಕ್ಷಿ, ಸರಿಸೃಪಗಳಿಗೆ ಆಹಾರ ತರುವ ವಾಹನಗಳಿಗೆ ಹಾಗೂ ಅದನ್ನು ಒಳಗೆ ತೆಗೆದುಕೊಂಡು ಹೋಗುವವರು ಧರಿಸಿದ ಬಟ್ಟೆಗಳಿಗೆ ಸ್ಯಾನಿಟೈಸರ್ ಮಾದರಿಯ ಕೆಮಿಕಲ್ ಸಿಂಪಡಣೆ ಕೂಡ ನಡೆಯುತ್ತಿದೆ. ಆಹಾರ ಗುಣಮಟ್ಟ ಪರಿಶೀಲಿಸಿದ ನಂತರವೇ ನೀಡಲಾಗುತ್ತಿದೆ.

ಕೊರೊನಾ ಸೋಂಕು ಪ್ರಾಣಿ, ಪಕ್ಷಿಗಳಿಗೂ ತಗಲುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಟೆನಗರಿಯ ‘ಆಡುಮಲ್ಲೇಶ್ವರ ಕಿರು ಮೃಗಾಲಯ’ ಪ್ರವೇಶಿಸುವ ಮುನ್ನ ಅರಣ್ಯ ಇಲಾಖೆ ಒಂದೂವರೆ ತಿಂಗಳಿನಿಂದ ಕೈಗೊಂಡಿರುವ ಚಟುವಟಿಕೆ ಪರಿ ಇದು.

ಲಾಕ್‌ಡೌನ್‌ ನಂತರ ಮೃಗಾಲಯಕ್ಕೆ ಎರಡು ತಿಂಗಳಿನಲ್ಲಿ ₹5 ಲಕ್ಷ ಆದಾಯ ನಷ್ಟ ಉಂಟಾಗಿದೆ. ಈ ನಡುವೆಯೂ ಅರಣ್ಯ ಇಲಾಖೆ ಇರುವ ಸಂಪನ್ಮೂಲ ಬಳಸಿಕೊಂಡು ಪ್ರಾಣಿ, ಪಕ್ಷಿ, ಸರಿಸೃಪಗಳ ಆಹಾರಕ್ಕೆ ತೊಂದರೆ ಆಗದಂತೆ ನೋಡಿಕೊಂಡಿದೆ.

ಸಾಮಾನ್ಯವಾಗಿ ಬೇಸಿಗೆಯ ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ, ಈ ಅವಧಿಯಲ್ಲಿ ಹೆಚ್ಚು ಆದಾಯ ಬರುತ್ತಿತ್ತು. ಆದರೆ, ಮಾರ್ಚ್‌ 15ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಆದರೆ, ಈವರೆಗೆ ನಿರ್ವಹಣೆಗೆ ತೊಂದರೆ ಆಗಿಲ್ಲ. ಮೇ 17ರ ನಂತರವೂ ಲಾಕ್‌ಡೌನ್‌ ಹೀಗೆ ಮುಂದುವರಿದರೆ ಮೃಗಾಲಯದ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿಯಾಗಿ ಕೆಲಸಕ್ಕೆ ಪಡೆದ ಸಿಬ್ಬಂದಿ ಕೊರೊನಾ ಕಾರಣಕ್ಕೆ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸಂಚಾರ ನಡೆಸಬೇಕಾದ ನಿಮಿತ್ತ ಮೃಗಾಲಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇರುವ ಏಳೆಂಟು ಸಿಬ್ಬಂದಿಯೇ ಸ್ವಚ್ಛತೆ, ಆಹಾರ ವಿತರಣೆ ಸೇರಿ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಪ್ರಾಣಿ-ಪಕ್ಷಿ, ಸರಿಸೃಪಗಳಿಗೆ ಆಹಾರ ವಿತರಣೆ, ಅನಾರೋಗ್ಯ ಸಮಸ್ಯೆ, ಸಿಬ್ಬಂದಿ ವೇತನ, ಅಷ್ಟೇ ಅಲ್ಲದೆ ಜಿಲ್ಲೆಯ ಎಲ್ಲಾದರೂ ಪ್ರಾಣಿಗಳು ಕಾಣಿಸಿಕೊಂಡರೆ ಅವುಗಳನ್ನು ಸೆರೆ ಹಿಡಿಯುವುದು ಸೇರಿ ಇತರ ನಿರ್ವಹಣೆಯನ್ನು ಮೃಗಾಲಯದ ಪ್ರವೇಶ ಶುಲ್ಕ, ಪ್ರಾಣಿಗಳ ದತ್ತು ಯೋಜನೆ ಹಣದಿಂದಲೇ ಮಾಡಲಾಗುತ್ತಿತ್ತು. ಈ ಆದಾಯವೂ ಈಗ ಇಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಆರ್ಥಿಕ ತೊಂದರೆ ಎದುರಾಗಲಿದೆ. ತುರ್ತು ಕಾರ್ಯಗಳಿಗಾಗಿ ಆದಾಯದ ಅವಶ್ಯಕತೆ ಹೆಚ್ಚಿದೆ. ಮುಂದಿನ 3 ತಿಂಗಳು ಆದಾಯ ನಿಂತು ಸಮಸ್ಯೆ ಜಟಿಲವಾದಲ್ಲಿ ದತ್ತು ಪಡೆಯುವ ಮೂಲಕ ನೆರವಿಗೆ ಧಾವಿಸುವಂತೆ ಅಧಿಕಾರಿಗಳು ಮನವಿ ಮಾಡುವ ಸಾಧ್ಯತೆಯೂ ಇದೆ.

ಚಿರತೆ 7, ಕೃಷ್ಣಮೃಗ 15, ಚಿಕ್ಕೆ ಜಿಂಕೆ ಹಾಗೂ ನೀಲ್‌ಗಾಯ್ ತಲಾ 6 ಹೀಗೆ 36 ಪ್ರಾಣಿಗಳು, 48 ಪಕ್ಷಿಗಳು ಹಾಗೂ ಹಾವು, ಮೊಸಳೆ, ಆಮೆ ಹೀಗೆ 15 ಸರಿಸೃಪಗಳು ಸೇರಿ ಒಟ್ಟು ಸಂಖ್ಯೆ 99. ಪ್ರಾಣಿ-ಪಕ್ಷಿ ಪ್ರಿಯರು, ಗಣಿ ಮಾಲೀಕರು, ವ್ಯಾಪಾರಸ್ಥರು ಆರ್ಥಿಕ ಅಥವಾ ದತ್ತು ನೆರವು ನೀಡಿದಲ್ಲಿ ಮುಂದೆ ಎದುರಾಗುವ ಸಮಸ್ಯೆ ಸಮರ್ಪಕವಾಗಿ ನಿಭಾಯಿಸಲು ಇಲಾಖೆಯೊಂದಿಗೆ ಸಹಕರಿಸಿದಂತಾಗುತ್ತದೆ. ಮನುಷ್ಯರಂತೆ ಪ್ರಾಣಿ, ಪಕ್ಷಿಗಳ ಕುರಿತು ಅನುಕಂಪ ಅಗತ್ಯವಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಇಚ್ಛಿಸುವವರು ನೆರವು ನೀಡಬಹುದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT