ಗುರುವಾರ , ಜನವರಿ 21, 2021
18 °C
ಸಾಮೂಹಿಕ ಕಲ್ಯಾಣ ಮಹೋತ್ಸವ

ಸಂಸಾರದಲ್ಲಿ ಸ್ವಾರಸ್ಯ, ಸಾಮರಸ್ಯ ಇರಲಿ: ಶಿವಮೂರ್ತಿ ಶರಣರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಸಂಸಾರದಲ್ಲಿ ಸ್ವಾರಸ್ಯ, ಸಾಮರಸ್ಯ ಎರಡೂ ಇರಲಿ. ಆಗ ಬದುಕಿನುದ್ದಕ್ಕೂ ಹೊಂದಾಣಿಕೆಯೊಂದಿಗೆ ಸಾಗಬಹುದು’ ಎಂದು ಶಿವಮೂರ್ತಿ ಮುರುಘಾ ಶರಣರು ನವದಂಪತಿಗಳಿಗೆ ಸಲಹೆ ನೀಡಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ಬೃಹನ್ಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ನಿಂದ ಮಂಗಳವಾರ ಆಯೋಜಿಸಿದ್ದ 31ನೇ ವರ್ಷದ 1ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಉಸಿರಾಟ ಮಾನವನ ಜೀವಂತಿಕೆ ತೋರಿಸುತ್ತದೆ. ಅದೇ ರೀತಿ ಧರ್ಮ, ಮೌಲ್ಯ, ಸಿದ್ಧಾಂತಗಳನ್ನು ಸದಾ ತನ್ನೊಳಗೆ ಇರಿಸಿಕೊಳ್ಳಬೇಕು. ಉತ್ತಮ ಚಿಂತನೆ, ಸತ್ಕಾರ್ಯ, ದಾಸೋಹ ಸಂಸ್ಕೃತಿಯೊಂದಿಗೆ ಬದುಕನ್ನು ಸಾರ್ಥಕಗೊಳಿಸಿ ಕೊಳ್ಳಬೇಕು. ಅಂಥವರು ಮಾತ್ರ ನಡೆದಾಡುವ ದೇವರ ಸಾಲಿಗೆ ಸೇರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಹೃಷಿಕೇಶದ ದಯಾನಂದಾಶ್ರಮದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ‘ಯಾವ ತತ್ವ, ಸಿದ್ಧಾಂತ ಆಚರಿಸಿಕೊಂಡು ಬಂದಿದ್ದೇವೊ ಅದಕ್ಕೆ ಸದಾ ಬದ್ಧರಾಗಿರಬೇಕು. ಎಂತಹ ಕಠಿಣ ಸಂದರ್ಭ ಎದುರಾದರೂ ಪತಿ-ಪತ್ನಿಯರು ಪರಸ್ಪರ ಅರ್ಥ ಮಾಡಿಕೊಂಡು ಬದುಕು ಮುನ್ನಡೆಸಬೇಕು’ ಎಂದು
ತಿಳಿಸಿದರು.

ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ‘ಭಾರತೀಯ ಸಂಸ್ಕೃತಿಯನ್ನು ವಿದೇಶಿಯರು ಅನುಸರಿಸುತ್ತಿದ್ದಾರೆ. ಆದರೆ, ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೆ ಬಾರಿ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಯುವಸಮೂಹದ ಕರ್ತವ್ಯಗಳ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕಿದೆ’ ಎಂದರು.

‘ಆಧುನಿಕ ಕಲ್ಯಾಣ ಮಹೋತ್ಸವಗಳು ಅಸಹ್ಯ ಹುಟ್ಟಿಸುತ್ತವೆ. ಆದರೆ, ಶ್ರೀಮಠದಲ್ಲಿ ನಡೆಯುತ್ತಿರುವ ಸಾಮೂಹಿಕ ಕಲ್ಯಾಣ ಯಾವುದೇ ಜಾತಿ, ಜನಾಂಗ, ವರ್ಗ, ವರ್ಣಕ್ಕೆ ಸೀಮಿತವಾಗದೆ ಹಿಂದುಳಿದ, ಬಡ ಹಾಗೂ ಮಧ್ಯಮವರ್ಗದ ಕುಟುಂಬಗಳಿಗೆ ವರದಾನವಾಗಿದೆ’ ಎಂದರು.

ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ, ‘ಮಾನವನಿಗೆ ಬೇಕಿರುವುದು ವೈಭವದ ಬದುಕಲ್ಲ, ಸರಳ ಬದುಕು. ಆಚಾರ-ವಿಚಾರಗಳನ್ನು ಪಾಲಿಸುವ ಮೂಲಕ ಬಾಂಧವ್ಯ ಗಟ್ಟಿಯಾಗಬೇಕು. ನಮ್ಮ ಸಂಸ್ಕೃತಿ ಪುನಃ ಉತ್ತುಂಗಕ್ಕೆ ಏರಬೇಕು’ ಎಂದು ಹೇಳಿದರು.

ಬಸವನಾಗಿದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ವಿ.ಸತೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು