ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಿಳಿದು ಪ್ರತಿಭಟಿಸಿದ ಎನ್‌ಎಚ್‌ಎಂ ಸಿಬ್ಬಂದಿ

ವೇತನ ಹೆಚ್ಚಳ, ಸೇವೆ ಕಾಯಂಗೊಳಿಸುವಂತೆ ಒತ್ತಾಯ
Last Updated 4 ಅಕ್ಟೋಬರ್ 2020, 11:37 IST
ಅಕ್ಷರ ಗಾತ್ರ

ಚಿತ್ರದುರ್ಗ: ವೇತನ ಹೆಚ್ಚಳ ಹಾಗೂಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಭಾನುವಾರ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.

ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಕೋರಿಕೆ ಸಲ್ಲಿಸಿದರು.

ಎಲ್ಲ ಹುದ್ದೆಗಳಿಗೆ ಭತ್ಯೆ ಮತ್ತು ವೇತನ ಶ್ರೇಣಿಯನ್ನು ಹರಿಯಾಣ ಮಾದರಿಯಲ್ಲಿ ನೀಡಲು ನಿಯಮ ರಚಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹೊರಗುತ್ತಿಗೆ ನೌಕರರಿಗೆ ಉಂಟಾಗುತ್ತಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಇಲಾಖೆಯಿಂದಲೇ ನೇರವಾಗಿ ವೇತನ ಪಾವತಿಸಬೇಕು. ಕಾಯಂ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಎಲ್ಲರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ದೊರಕಿಸಿಕೊಡಬೇಕು. ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ನೌಕರರಿಗಾಗಿ ಕಲ್ಯಾಣ ನಿಧಿ ಅಥವಾ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಸೇವಾ ಅನುಭವಕ್ಕೆ ತಕ್ಕಂತೆ ಸೇವಾ ಶ್ರೇಯಾಂಕ ನೀಡಬೇಕು. ನ್ಯಾಯಯುತ ಬೇಡಿಕೆ ಈಡೇರುವವರೆಗೂ ಯಾವುದೇ ಒತ್ತಡಕ್ಕೆ ಮಣಿಯದೇ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ರುದ್ರೇಶ್, ಉಪಾಧ್ಯಕ್ಷ ಡಾ.ಮಹೇಂದ್ರ ಕುಮಾರ್ ಇದ್ದರು. ಭಾರತೀಯ ಮಜ್ದೂರ್ ಸಂಘ ಕೂಡ ಪ್ರತಿಭಟನೆಗೆ ಬೆಂಬಲ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT