ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹ

ರೈತ ಸಂಘಟನೆಗಳ ಪ್ರತಿಭಟನೆ, ರಾಷ್ಟ್ರಪತಿಗೆ ಮನವಿ ರವಾನೆ
Last Updated 3 ಜನವರಿ 2020, 13:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಡಾ.ಸ್ವಾಮಿನಾಥನ್‌ ವರದಿ ಅನ್ವಯ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಕೃಷಿಕರು ಹಾಗೂ ಕೂಲಿ ಕಾರ್ಮಿಕರನ್ನು ಸಾಲ ಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಅಖಲಿ ಭಾರತ ಸಂಘರ್ಷ ಸಮನ್ವಯ ಸಮಿತಿ, ಅಖಿಲ ಭಾರತ ಕಿಸಾನ್‌ ಸಭಾ, ಕರ್ನಾಟಕ ಪ್ರಾಂತ್ಯ ರೈತ ಸಂಘ ಸೇರಿ ಹಲವು ರೈತ ಸಂಘಟನೆಗಳ ಕಾರ್ಯಕರ್ತರು ಸ‌ರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರ ಮೂಲಕ ರಾಷ್ಟ್ರಪತಿಗೆ ಮನವಿ ರವಾನೆ ಮಾಡಿದರು. ಬಡಗಲಪುರ ನಾಗೇಂದ್ರ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷರಾಗಿರುವ ರೈತ ಸಂಘದ ಬಣಗಳು ಒಗ್ಗೂಡಿ ಹೋರಾಟ ನಡೆಸಿ ಗಮನ ಸೆಳೆದವು.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಕೃಷಿ ವಲಯ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಕೃಷಿ ಉಪಕರಣಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರಲಾಗಿದೆ. ಇದರಿಂದ ಕೃಷಿ ವೆಚ್ಚ ಹೆಚ್ಚಾಗಿದ್ದು, ಆದಾಯ ಕಡಿಮೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ, ತೆಂಗು, ಕಾಫಿ, ಮೆಣಸು, ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಗೂ ಹೈನುಗಾರಿಕೆ ಉತ್ಪನ್ನಗಳನ್ನು ಆರ್‌ಸಿಇಪಿ ಒಪ್ಪಂದದಿಂದ ಹೊರಗೆ ಇಡಬೇಕು. ಸಾಧ್ಯವಾದರೆ ಈ ಒಪ್ಪಂದದ ದ್ವಿಪಕ್ಷೀಯ ಮಾತುಕತೆಯಿಂದ ಹೊರಗೆ ಬರಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ರೈತರು ಹಾಗೂ ಕೂಲಿ ಕಾರ್ಮಿಕರ ಸ್ನೇಹಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನೆರೆ ಹಾವಳಿಗೆ ಬಹುತೇಕ ರೈತರು ನಿರಾಶ್ರಿತರಾಗಿದ್ದಾರೆ. ಕೃಷಿ ಭೂಮಿ ನೆರೆಯಲ್ಲಿ ಕೊಚ್ಚಿಹೋಗಿ ಹಾಳಾಗಿದೆ. ಬೆಳೆದ ಬೆಳೆ ಕೈಗೆ ಸಿಗದೇ ಸಾಲದ ಸುಳಿಯಲ್ಲಿ ನಲುಗುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ವಿತರಣೆ ಮಾಡಬೇಕು. ರಾಜ್ಯ ಭೂ ಸುಧಾರಣಾ ಕಾಯ್ದೆ ಕೈಬಿಟ್ಟು, ಬಗರಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಬೇಕು ಎಂದು ಮನವಿ ಮಾಡಿದರು.

ಬಯಲು ಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆ ರೈತರಲ್ಲಿ ಭರವಸೆ ಮೂಡಿಸಿದೆ. ಬೃಹತ್‌ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು. ಕಾಮಗಾರಿಯನ್ನು ಇನ್ನಷ್ಟು ತ್ವರಿತಗೊಳಿಸಿ ವಿಳಂಬವನ್ನು ತಪ್ಪಿಸಬೇಕು. ಚಿತ್ರದುರ್ಗ ಜಿಲ್ಲೆಯ ಜನರಿಗೆ ಶೀಘ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಶೇಂಗಾ, ಮೆಕ್ಕೆಜೋಳ, ರಾಗಿ, ಕಡಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ರೈತ ಮುಖಂಡರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ರೆಡ್ಡಿಹಳ್ಳಿ ವೀರಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎನ್.ಕೆ.ರಾಜಶೇಖರಪ್ಪ, ಧನಂಜಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಿಕ್ಕಬ್ಬಿಗೆರೆ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT