ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ; ಕುಸಿದ ರಾಗಿ ಬೆಳೆ ವಿಸ್ತೀರ್ಣ

ತಡವಾಗಿ ಬಿತ್ತನೆ; ಕಾಳುಕಟ್ಟುವ ಸಮಯದಲ್ಲಿ ಸಿಗದು ಪೂರಕ ವಾತಾವರಣ
Last Updated 8 ಅಕ್ಟೋಬರ್ 2022, 7:06 IST
ಅಕ್ಷರ ಗಾತ್ರ

ಶ್ರೀರಾಂಪುರ: ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರಿಂದ ರಾಗಿ ಬೆಳೆಯಲ್ಲಾದರೂ ಒಂದಷ್ಟು ಆದಾಯ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರವಾಗಿ ಸುರಿದ ಮಳೆ ನಿರಾಸೆ ಮೂಡಿಸಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹಳಷ್ಟು ರೈತರಿಗೆ ಜಮೀನು ಹದ ಮಾಡಲು ಕಾಲಾವಕಾಶ ಇಲ್ಲದಂತಾಯಿತು. ಇದರಿಂದ ಸಕಾಲಕ್ಕೆ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ತಡವಾಗಿ ಬಿತ್ತನೆ ಆಗಿದ್ದರಿಂದ ರಾಗಿ ಬೆಳೆ ಕಾಳುಕಟ್ಟುವ ಸಮಯದಲ್ಲಿ ವಾತಾವರಣ ಪೂರಕವಾಗಿರುವುದಿಲ್ಲ. ಅಲ್ಲದೆ, ಕೆಲವು ಜಮೀನುಗಳಲ್ಲಿ ತೇವಾಂಶ ಜಾಸ್ತಿಯಾಗಿ ಪೈರುಗಳಲ್ಲಿ ಇಳುವರಿ ಕಡಿಮೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಶ್ರೀರಾಂಪುರ ಹೋಬಳಿಯಾದ್ಯಂತ ಪ್ರತಿ ವರ್ಷ ಅಂದಾಜು 9,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುತ್ತಿತ್ತು. ಆದರೆ, ಈ ಬಾರಿ 7,500 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತಲಾಗಿದೆ. ಬಿತ್ತನೆ ಆಗಿರುವ ಪ್ರದೇಶದಲ್ಲಿ ಉತ್ತಮ ಇಳುವರಿ ನಿರೀಕ್ಷಿಸುವಂತಿಲ್ಲ. ಬಿತ್ತಿದ ಮೇಲೆ ಸತವಾಗಿ ಮಳೆ ಸುರಿದಿದ್ದರಿಂದ ಬೆಳೆ ಸರಿಯಾಗಿ ಹುಟ್ಟದೆ ಅಳಿಸಿ ಮತ್ತೆ ಬಿತ್ತನೆ ಮಾಡಿದ್ದಾರೆ. ಇದರಿಂದ ಬೀಜ, ಗೊಬ್ಬರ ಹಾಗೂ ಉಳುಮೆಗೆ ಮಾಡಿದ ಖರ್ಚು ದುಪ್ಪಟ್ಟಾಗಿದೆ.

ಗಾಯದ ಮೇಲೆ ಬರೆ: ಕಳೆದ ವರ್ಷ ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದರೂ ಹೆಸರು, ಸಾವೆ ಬೆಳೆ ಕಟಾವು ಸಮಯದಲ್ಲಿ ಮಳೆ ಸುರಿದಿದ್ದರಿಂದ ಉತ್ಪನ್ನವನ್ನು ಕೂಡಿಟ್ಟುಕೊಳ್ಳುವಲ್ಲಿ ರೈತರು ಹೈರಾಣಾಗಿದ್ದರು.

‘ಹೆಸರು ಕಾಳು ಒಕ್ಕಲಾದ ಮೇಲೆ ಜಮೀನು ಹಾಗೂ ಒಕ್ಕಲು ಕಣದಲ್ಲಿ ಮೊಳಕೆಯೊಡೆಯಿತು. ಕೆಲವೆಡೆ ನೀರಿನಲ್ಲಿ ಕೊಚ್ಚಿ ಹೋಯಿತು. ಕಳೆದ ವರ್ಷದ ಕಹಿ ಅನುಭವದಿಂದ ಬೇಸತ್ತ ರೈತರು ಪ್ರಸಕ್ತ ವರ್ಷ ಹೆಸರು ಬಿತ್ತನೆ ಮಾಡುವುದನ್ನೇ ಕಡಿಮೆ ಮಾಡಿದರು. ಕೆಲವರು ಬಿತ್ತನೆ ಮಾಡಿದರೂ ಈ ವರ್ಷವೂ ಮಳೆಯಿಂದಾಗಿ ಬೆಳೆಯನ್ನು ಕೂಡಿಟ್ಟುಕೊಳ್ಳುವಲ್ಲಿ ಪರದಾಡಿದರು. ಆದರೂ ಮರಳಿ ಯತ್ನವ ಮಾಡು ಎಂಬಂತೆ ಹೆಸರು ಬೆಳೆಯಲ್ಲಿ ಕಳೆದುಕೊಂಡಿರುವ ಹಣವನ್ನು ರಾಗಿಯಲ್ಲಾದರೂ ಪಡೆಯೋಣ ಎಂದರೆ ವರುಣ ದೇವ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾನೆ’ ಎನ್ನುತ್ತಾರೆ ರೈತ ಮುರುಗೇಶ್.

***

‘ಪುನಃ ಮಳೆಯಾದರೆ ನಷ್ಟ ಪ್ರಮಾಣ ಹೆಚ್ಚಳ’

‘ರಾಗಿ ಬಿತ್ತನೆಗೆ ಆಗಸ್ಟ್ ತಿಂಗಳ ಮಧ್ಯ ಭಾಗದವರೆಗೂ ಪೂರಕ ವಾತಾವರಣ ಇರುತ್ತದೆ. ಆದರೆ, ಕೆಲವು ರೈತರು ಸೆಪ್ಟೆಂಬರ್ ತಿಂಗಳವರೆಗೂ ರಾಗಿ ಬಿತ್ತನೆ ಬೀಜ ಕೊಂಡೊಯ್ಯಲು ಬರುತ್ತಾರೆ. ರಾಗಿ ಬಿತ್ತನೆಗೆ ಇದು ಸೂಕ್ತ ಕಾಲವಲ್ಲ. ಹೋಬಳಿಯಾದ್ಯಂತ ಭೂಮಿಯಲ್ಲಿ ತೇವಾಂಶ ಜಾಸ್ತಿಯಾಗಿ ಈಗ ಇರುವ ರಾಗಿ ಪೈರಿನಲ್ಲಿ ಶೇ 30ರಿಂದ ಶೇ 35ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಅಕ್ಟೋಬರ್‌ನಲ್ಲಿ ಪುನಃ ಮಳೆ ಜಾಸ್ತಿಯಾದರೆ ಇಳುವರಿಯಲ್ಲಾಗುವ ನಷ್ಟ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕೃಷಿ ಅಧಿಕಾರಿ ಕರಿಬಸವಯ್ಯ.

***

ತಡವಾಗಿ ರಾಗಿ ಬಿತ್ತನೆ ಮಾಡಿ ನಷ್ಟ ಅನುಭವಿಸುವ ಬದಲು ರೈತರು ಹಿಂಗಾರಿನಲ್ಲಿ ಜೋಳ, ಹುರುಳಿ, ಕಡಲೆ ಬಿತ್ತನೆ ಮಾಡಬಹುದು. ಜೋಳ ಮತ್ತು ಕಡಲೆ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ.

ಕರಿಬಸವಯ್ಯ, ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT