ಭಾನುವಾರ, ಜೂನ್ 26, 2022
22 °C
ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಎಚ್ಚರಿಕೆ, ಅನಧಿಕೃತ ಕ್ವಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲ್ಲುಗಣಿ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ: ಜಿ.ಎಚ್‌.ತಿಪ್ಪಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಾಗೂ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಕ್ವಾರಿ, ಕ್ರಷರ್‌ಗಳ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅನಾಹುತ ಸಂಭವಿಸಿದಾಗ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಎಚ್ಚರಿಕೆ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ ಜಿಲ್ಲೆಯ ಕ್ವಾರಿಯಲ್ಲಿ ಅನಾಹುತ ಸಂಭವಿಸಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಅನಾಹುತಗಳ ಕಹಿ ಇನ್ನೂ ಮರೆತಿಲ್ಲ. ಇಂತಹದೇ ಅನಾಹುತ ಉಂಟಾಗುವ ಬಗ್ಗೆ ಚಿತ್ರದುರ್ಗ ತಾಲ್ಲೂಕಿನ ಹಲವು ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ದುರ್ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ 27 ಕಲ್ಲುಕ್ವಾರಿ ಹಾಗೂ 21 ಕ್ರಷರ್‌ಗಳಿವೆ. ಅನೇಕರು ಅನಧಿಕೃತವಾಗಿ ಕ್ವಾರಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಲ್ಲುಗಣಿ ನಡೆಸಲಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಸ್ಫೋಟ ಮಾಡಲಾಗುತ್ತಿದೆ. ಪ್ರಕೃತಿ ಹಾಳಾಗುವ ಜೊತೆಗೆ ಜನರಿಗೂ ತೊಂದರೆ ಉಂಟಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸೀಬಾರ ಸುತ್ತ 8ಕ್ಕೂ ಹೆಚ್ಚು ಕಲ್ಲುಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಜಿ.ಆರ್‌.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆಟ್ಟದ ತುದಿಯಲ್ಲಿ ಕೂಡ ಕಲ್ಲು ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಮತ್ತೊಂದೆಡೆ ನೂರಾರು ಅಡಿಯಷ್ಟು ಆಳದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ಇಲ್ಲಿ ಶೇಖರವಾಗುವ ನೀರಿನಲ್ಲಿ ಜನ ಹಾಗೂ ಜಾನುವಾರು ಮುಳುಗಿ ಪ್ರಾಣ ಕಳೆದುಕೊಳ್ಳವುದು ಮಾಮೂಲಿಯಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಇತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

‘ಅಭಿವೃದ್ಧಿಯ ದೃಷ್ಟಿಯಿಂದ ಕಲ್ಲು, ಮರಳು ಗಣಿಗಾರಿಕೆ ಅನಿವಾರ್ಯ. ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ, ಜನರ ಪ್ರಾಣ ಒತ್ತೆಯಿಟ್ಟು ಗಣಿಗಾರಿಕೆ ಮಾಡುವುದು ತಪ್ಪು. ರಾಷ್ಟ್ರನಾಯಕ ಎಸ್‌.ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಇದರಿಂದ ಧಕ್ಕೆ ಉಂಟಾಗಿದೆ. ಗಾರೆಹಟ್ಟಿ, ಎಂ.ಕೆ.ಹಟ್ಟಿಯ ಜನರು ಕೂಡ ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರದ ಹೊರವಲಯದ ಮಠಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಹಾಳಾಗುತ್ತಿವೆ ಗ್ರಾಮೀಣ ರಸ್ತೆ’

ಕಲ್ಲು, ಮಣ್ಣು ಹಾಗೂ ಮರಳು ಗಣಿಗಾರಿಕೆ ನಡೆಸಿ ನಿಗದಿಗಿಂತ ಹೆಚ್ಚು ತೂಕ ಸಾಗಣೆ ಮಾಡುವ ಭಾರಿ ವಾಹನಗಳಿಂದ ಕ್ಷೇತ್ರ ವ್ಯಾಪ್ತಿಯ ರಸ್ತೆಗಳು ಹಾಳಾಗುತ್ತಿವೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆಕ್ರೋಶ ಹೊರಹಾಕಿದರು.

‘ಜೆ.ಎನ್‌.ಕೋಟೆ – ಜೋಡಿ ಚಿಕ್ಕೇನಹಳ್ಳಿ ಮಾರ್ಗದ ರಸ್ತೆಯನ್ನು ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಭಾರಿ ವಾಹನ ಸಂಚಾರದಿಂದ ಇದು ಹಾಳಾಗಿದೆ. ಸೀಬಾರ–ಕ್ಯಾಸಾಪುರ, ಮಾರಘಟ್ಟ–ಚಿಕ್ಕಾಪುರ, ದೊಡ್ಡಾಲಘಟ್ಟ–ಸಿರಿಗೆರೆ ಮಾರ್ಗದ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿವೆ. ಇಂತಹ ವಾಹನಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು