ಮಂಗಳವಾರ, ಮೇ 17, 2022
23 °C
ಲಾಕ್‌ಡೌನ್‌ನಿಂದ ಕಟಾವು ಮಾಡಲಾಗದೇ ಬಿಟ್ಟಿದ್ದ ಕೊಹಿನೂರ್ ತಳಿಯ ಹಣ್ಣುಗಳು

ಹೊಳಲ್ಕೆರೆ: ಮಳೆಗೆ ಹೊಲದಲ್ಲೇ ಕೊಳೆತ ಕರಬೂಜ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಈಚಘಟ್ಟದ ರೈತ ತಿಪ್ಪೇಸ್ವಾಮಿ ಅವರು ಲಾಕ್‌ಡೌನ್‌ನಿಂದ 6 ಎಕರೆ ಹೊಲದಲ್ಲಿ ಕೊಯ್ಯದೇ ಹಾಗೆಯೇ ಬಿಟ್ಟಿದ್ದ ಕೊಹಿನೂರ್ ತಳಿಯ ಕರಬೂಜ ಅಧಿಕ ಮಳೆಯಿಂದ ಕೊಳೆಯುತ್ತಿದೆ.

‘ವರ್ಷಕ್ಕೆ ₹ 1 ಲಕ್ಷ ಹಣ ನೀಡಿ ಹೊಲವನ್ನು ಗುತ್ತಿಗೆ ಪಡೆದು ಕರಬೂಜ ಬೆಳೆದಿದ್ದೆ. ಕೊಹಿನೂರ್ ತಳಿಯ 1 ಕೆ.ಜಿ. ಕರಬೂಜ ಬೀಜಕ್ಕೆ ₹ 74,000 ಬೆಲೆ ಇದೆ. ₹ 2 ಲಕ್ಷ ಖರ್ಚು ಮಾಡಿ 2.5 ಕೆ.ಜಿ ಬೀಜ ಬಿತ್ತನೆ ಮಾಡಿದ್ದೆ. ಮಲ್ಚಿಂಗ್ ಮಾಡಲು ₹ 40,000 ಖರ್ಚಾಗಿತ್ತು. ಇದರೊಂದಿಗೆ ಕೂಲಿ, ಗೊಬ್ಬರ, ನಿರ್ವಹಣೆ ಸೇರಿ ಒಟ್ಟು ₹ 6 ಲಕ್ಷ ಖರ್ಚು ಮಾಡಿದ್ದೇನೆ. ಬಂಪರ್ ಬೆಳೆ ಬಂದರೂ ಕರಬೂಜ ಹಣ್ಣಾದಾಗ ಲಾಕ್‌ಡೌನ್ ಇದ್ದ ಕಾರಣ ಮಾರುಕಟ್ಟೆ ಇಲ್ಲದೇ ಕಟಾವು ಮಾಡಲಾಗಲಿಲ್ಲ. ಈ ಹಣ್ಣನ್ನು 55 ದಿನಗಳಿಗೆ ಕಟಾವು ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಹೊಲದಲ್ಲಿ ನೀರು ನಿಂತಿತು. ವಾರದವರೆಗೆ ನಿತ್ಯ ಮಳೆ ಬಂದಿದ್ದರಿಂದ ತೇವಾಂಶವೂ ಹೆಚ್ಚಾಗಿ ಹಣ್ಣು ಹೊಲದಲ್ಲಿಯೇ ಕೊಳೆಯುತ್ತಿದೆ’ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

‘ದೆಹಲಿ, ಮುಂಬೈಯಲ್ಲಿ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ನಮ್ಮ ಕಡೆ ಮಾವಿನಹಣ್ಣು, ಬಾಳೆಹಣ್ಣು, ತೆಂಗಿನಕಾಯಿ ಕೊಡುವಂತೆ ಉತ್ತರ ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಫಲ ತಾಂಬೂಲಕ್ಕೆ ಕರಬೂಜ ವಿತರಿಸುತ್ತಾರೆ. ಈಗ ಮದುವೆಗಳೂ ನಿಂತಿರುವುದರಿಂದ ಕರಬೂಜಕ್ಕೆ ಬೆಲೆ ಇಲ್ಲದಂತಾಗಿದೆ. ಕೋವಿಡ್ ಬರುವುದಕ್ಕೂ ಮೊದಲು ಈ ಕರಬೂಜಕ್ಕೆ ಕೆ.ಜಿ.ಗೆ ₹ 40ರಿಂದ ₹ 50ರಷ್ಟು ಬೆಲೆ ಇತ್ತು. ಒಂದು ಹಣ್ಣು 2ರಿಂದ 3 ಕೆ.ಜಿ ತೂಗುತ್ತಿತ್ತು. ಮಳೆ ಇಲ್ಲದಿದ್ದರೆ ಸುಮಾರು 100 ಟನ್ ಹಣ್ಣು ಸಿಗುತ್ತಿತ್ತು. ಟನ್‌ಗೆ ₹ 40,000 ಬೆಲೆ ಸಿಕ್ಕಿದ್ದರೆ ₹ 40 ಲಕ್ಷದಷ್ಟು ಆದಾಯ ಬರುತ್ತಿತ್ತು’ ಎನ್ನುತ್ತಾರೆ ಅವರು.

‘ಆರಂಭದಲ್ಲಿ ಮಳೆಯಲ್ಲೇ ಹಣ್ಣು ಕಟಾವು ಮಾಡಿ ₹ 14ಕ್ಕೆ ಒಂದು ಕೆ.ಜಿಯಂತೆ ಒಂದು ಲೋಡ್ ಮಾತ್ರ ಮುಂಬೈಗೆ ಕಳುಹಿಸಿದೆವು. ಬೆಳೆದ ಅರ್ಧಕ್ಕಿಂತ ಹೆಚ್ಚು ಹಣ್ಣು ಬಿರುಕುಬಿಟ್ಟು ಕೊಳೆತಿವೆ. ಉಳಿದ ಹಣ್ಣನ್ನು ಕೆ.ಜಿ.ಗೆ ₹ 5ರಂತೆ ಬೆಂಗಳೂರಿನ ವ್ಯಾಪಾರಿಗಳಿಗೆ ಕೊಟ್ಟಿದ್ದೇನೆ. ಎಲ್ಲ ಸೇರಿ ಕೇವಲ ₹ 2 ಲಕ್ಷ ಹಣ ಬಂದಿದೆ. ಇನ್ನೂ ₹ 4 ಲಕ್ಷ ಅಸಲು ನಷ್ಟವಾಗಿದೆ’ ಎನ್ನುತ್ತಾರೆ ತಿಪ್ಪೇಸ್ವಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು