ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಕಾ ಬಿಡಿ, ಇಲ್ಲವೇ ಜಿಲ್ಲೆ ತೊರೆಯಿರಿ

ರೌಡಿಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಎಚ್ಚರಿಕೆ
Last Updated 7 ಫೆಬ್ರುವರಿ 2022, 13:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಜೂಜುಕೋರರ ಮೇಲೆ ಪೊಲೀಸ್‌ ಇಲಾಖೆ ನಿಗಾ ಇಟ್ಟಿದೆ. ಮಟ್ಕಾ, ಜೂಜು ಬಿಡಬೇಕು; ಇಲ್ಲವೇ ಜಿಲ್ಲೆಯನ್ನು ತೊರೆಯಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಚಿತ್ರದುರ್ಗ ಉಪವಿಭಾಗದ ರೌಡಿ ಪರೇಡ್‌ನಲ್ಲಿ ಅವರು ಮಾತನಾಡಿದರು.

‘ಜೂಜು ಹಾಗೂ ಮತೀಯ ಗೂಂಡಾಗಿರಿಯನ್ನು ಪೊಲೀಸ್‌ ಇಲಾಖೆ ಸಹಿಸದು. ಧರ್ಮ, ಜಾತಿ ಆಧಾರಿತ ಮತೀಯ ಗೂಂಡಾಗಳಿಗೆ ಪೊಲೀಸರು ಯಾವುದೇ ಮರ್ಜಿ ತೋರುವುದಿಲ್ಲ. ಸಮಾಜಘಾತುಕ ಶಕ್ತಿಗಳ ಮೇಲೆ ಪೊಲೀಸರು ಹದ್ದಿನಕಣ್ಣು ಇಟ್ಟಿದ್ದಾರೆ. ಇದೇ ವರ್ತನೆಯನ್ನು ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ. ಜಿಲ್ಲೆಯಿಂದ ಗಡಿಪಾರು ಮಾಡಲಾಗುತ್ತದೆ’ ಎಂದು ಹೇಳಿದರು.

‘ಚಿತ್ರದುರ್ಗ ಉಪವಿಭಾಗದ ವ್ಯಾಪ್ತಿಯಲ್ಲಿ ಹಲವು ರೌಡಿಗಳು ಇನ್ನೂ ಸಕ್ರಿಯರಾಗಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮಾಜದ ಶಾಂತಿ ಕದಡಲು ಪ್ರಚೋದನೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಗೊತ್ತಾದರೆ ಕಠಿಣ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ’ ಎಂದರು.

‘ಹಲವರಿಗೆ ವಯಸ್ಸಾಗಿದ್ದರೂ ರೌಡಿಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ನಡೆತೆ ಬದಲಾವಣೆ ಆಗಿದ್ದರೆ ತಳಹಂತದ ಅಧಿಕಾರಿಗಳ ಶಿಫಾರಸು ಪರಿಗಣಿಸಿ ರೌಡಿಪಟ್ಟಿಯಿಂದ ಕೈಬಿಡಲಾಗುವುದು. ರೌಡಿಪಟ್ಟಿ ಸೇರಿರುವರು ಸಮಾಜದಲ್ಲಿ ಯಾವ ರೀತಿಯ ಸಂಕಷ್ಟ ಎದುರಿಸುತ್ತಾರೆ ಎಂಬುದು ಗೊತ್ತಿದೆ. ಮಕ್ಕಳು, ಮೊಮ್ಮಕ್ಕಳ ಮುಖ ನೋಡಿಯಾದರೂ ನಿಮ್ಮ ವರ್ತನೆ ಬದಲಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಕೆಲ ಕುಖ್ಯಾತ ಜೂಜುಕೋರರನ್ನು ಗುರುತಿಸಲಾಗಿದೆ. ಇವರು ನಿತ್ಯ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಠಾಣೆಗೆ ಹಾಜರಾದ ಸಂಗತಿಯನ್ನು ಅಧಿಕಾರಿಗಳು ನಿತ್ಯ ವರದಿ ಮಾಡಬೇಕು. ವ್ಯವಸ್ಥೆಗೆ ಸವಾಲಾಗಿರುವ, ಕಾನೂನು ಉಲ್ಲಂಘಿಸುವವರನ್ನು ಹೊಸದಾಗಿ ರೌಡಿಪಟ್ಟಿಗೆ ಸೇರಿಸಿ. ಪೊಲೀಸರ ಸೂಚನೆಗೆ ಗೌರವ ನೀಡದ ರೌಡಿಗಳನ್ನು ಗಡಿಪಾರು ಮಾಡಲು ಶಿಫಾರಸು ಮಾಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

229 ರೌಡಿಗಳು ಹಾಜರು

ಚಿತ್ರದುರ್ಗ ಉಪವಿಭಾಗದ ವ್ಯಾಪ್ತಿಯಲ್ಲಿ 393 ಜನರು ರೌಡಿಪಟ್ಟಿಯಲ್ಲಿದ್ದಾರೆ. ಈ ಪೈಕಿ 229 ರೌಡಿಗಳು ಮಾತ್ರ ಪರೇಡ್‌ಗೆ ಹಾಜರಾಗಿದ್ದರು. ಇದರಲ್ಲಿ ಒಬ್ಬರು ಮಹಿಳೆ ಕೂಡ ಇದ್ದರು.

‘ಆರು ರೌಡಿಗಳು ಜೈಲಿನಲ್ಲಿದ್ದಾರೆ. ಕೋವಿಡ್‌ ಕಾರಣಕ್ಕೆ ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಕೆಲವರು ವಿನಾಯಿತಿ ಪಡೆದಿದ್ದಾರೆ. ಉದ್ದೇಶಪೂರ್ವಕವಾಗಿ ಗೈರು ಹಾಜರಾದವರನ್ನು ಮತ್ತೆ ಕರೆತರಲಾಗುವುದು. ಶುಕ್ರವಾರ ಮತ್ತೆ ರೌಡಿ ಪರೇಡ್‌ ನಡೆಸಲಾಗುವುದು’ ಎಂದು ಪರಶುರಾಮ ಮಾಹಿತಿ ನೀಡಿದರು.

22 ವರ್ಷದಿಂದ ಅಲೆದಾಟ

ರೌಡಿ ಪರೇಡ್‌ನಲ್ಲಿ 66 ವರ್ಷದ ವ್ಯಕ್ತಿಯೊಬ್ಬರು ಇದ್ದರು. 22 ವರ್ಷದಿಂದ ಪರೇಡ್‌, ಠಾಣೆಗೆ ಅಲೆದು ಸುಸ್ತಾಗಿರುವುದಾಗಿ ಅವರು ನೋವು ತೋಡಿಕೊಂಡರು.

ಭರಮಸಾಗರದ ನಾಗಭೂಷಣ ಎಂಬುವರು ರೌಡಿಪಟ್ಟಿಯಲ್ಲಿದ್ದಾರೆ. ಕೃಷಿಕರಾಗಿರುವ ಇವರ ವಿರುದ್ಧ ಚುನಾವಣೆ ಗಲಾಟೆಯೊಂದರ ಪ್ರಕರಣ ದಾಖಲಾಗಿತ್ತು. ಎರಡು ದಶಕದ ಹಿಂದೆ ನಡೆದ ಘಟನೆ ಬಗ್ಗೆ ಅವರಿಗೆ ಅಸ್ಪಷ್ಟ ನೆನಪುಗಳಿವೆ. ರೌಡಿಪಟ್ಟಿಯಿಂದ ಕೈಬಿಡುವಂತೆ ಮೈದಾನದಲ್ಲಿ ಪೊಲೀಸರ ಬಳಿ ಅಂಗಲಾಚಿದರು.

ಡಿವೈಎಸ್‌ಪಿ ಪಾಂಡುರಂಗ, ಇನ್‌ಸ್ಪೆಕ್ಟರ್‌ಗಳಾದ ನಯೀಂ ಅಹಮ್ಮದ್‌, ಬಾಲಚಂದ್ರ ನಾಯಕ್, ಮಧು, ವೆಂಕಟೇಶ್, ರಮೇಶ್‍ರಾವ್, ಶಂಕರಪ್ಪ, ರವೀಶ್ ಇದ್ದರು.

ಸಮಾಜಘಾತುಕ ಕೃತ್ಯದಿಂದ ರೌಡಿಪಟ್ಟಿ ಸೇರಿದವರು ವರ್ತನೆಯನ್ನು ಬದಲಿಸಿಕೊಳ್ಳಬೇಕು. ಬದಲಾವಣೆ ಆಗಿರುವುದು ಮನವರಿಕೆಯಾದರೆ ಪಟ್ಟಿಯಿಂದ ಕೈಬಿಡಲಾಗುವುದು.

ಕುಮಾರಸ್ವಾಮಿ,ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT