ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ| ದಲಿತ, ಹಿಂದುಳಿದ ಜನಾಂಗದ ಮಠಾಧೀಶರ ಅಹವಾಲು ಆಲಿಸಿದ ಮೋಹನ್ ಭಾಗವತ್‌

Last Updated 12 ಜುಲೈ 2022, 15:40 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ದಲಿತ ಮತ್ತು ಹಿಂದುಳಿದ ಜನಾಂಗದ ಮಠಾಧೀಶರ ಅಹವಾಲುಗಳನ್ನು ಆಲಿಸಿದರು. ಸಮುದಾಯದ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು.

ಎರಡು ದಿನಗಳ ಭೇಟಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಭಾಗವತ್‌ ಅವರು ಮಾದಾರ ಚನ್ನಯ್ಯ ಗುರುಪೀಠದಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಮಠಾಧೀಶರೊಂದಿಗೆ ಸಂವಾದ ನಡೆಸಿ ಪ್ರತಿಯೊಬ್ಬರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಅನೇಕ ಮಠಾಧೀಶರು ಸಮುದಾಯದ ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ಕುಂಚಿಟಿಗ ಜಾತಿಯನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಗತ್ಯವಿದೆ’ ಎಂಬ ಬಗ್ಗೆ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಗಮನ ಸೆಳೆದರು. ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ನೀಡಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿಕೊಂಡರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ‘ದೇಶದ ಎಲ್ಲೆಡೆ ಭೋವಿ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಅಗತ್ಯವಿದೆ. ಕಲ್ಲು ಕೆಲಸ ಸಮುದಾಯದಕ್ಕೆ ಶೇ 75ರಷ್ಟು ಕಲ್ಲುಕ್ವಾರಿ ಮೀಸಲಿಡಬೇಕು. ಸಲಕರಣೆ, ಯಂತ್ರಗಳ ಖರೀದಿಗೆ ₹ 2 ಕೋಟಿ ಅನುದಾನ ನೀಡಬೇಕು. ಮುಂಬರುವ ಚುನಾವಣೆಗಳಲ್ಲಿ ಭೋವಿ ಸಮುದಾಯದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಬೇಕು’ ಎಂದು ಮನವಿ ಸಲ್ಲಿಸಿದರು.

ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಹಲವು ವರ್ಷಗಳ ಹಿಂದೆಯೇ ಭಾಗವತ್ ಅವರನ್ನು ಮಠಕ್ಕೆ ಆಹ್ವಾನಿಸಲಾಗಿತ್ತು. ಕೋವಿಡ್‌ ಕಾರಣಕ್ಕೆ ಇದು ಸಾಧ್ಯವಾಗಿರಲಿಲ್ಲ’ ಎಂದರು.

‘ದಲಿತ ಮತ್ತು ಹಿಂದುಳಿದ ಸಮುದಾಯಗಳು ಎದುರಿಸುತ್ತಿರುವ ಅಸ್ಪೃಶ್ಯತೆ ಹಾಗೂ ಅಸಮಾನತೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾಗವತ್‌ ಅವರು ಮಠಾಧೀಶರಿಂದ ಸಲಹೆಗಳನ್ನು ಪಡೆದರು’ ಎಂದು ಹೇಳಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಇದ್ದರು.

ಉಳಿಯಿತು ಗುಬ್ಬಚ್ಚಿ ಗೂಡು

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ವಾಸ್ತವ್ಯ ಹೂಡಿದ್ದ ಕೊಠಡಿಯಲ್ಲಿದ್ದ ಗುಬ್ಬಚ್ಚಿಯ ಗೂಡೊಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಕಾಳಜಿಯಿಂದ ಉಳಿಯಿತು.

ಭಾಗವತ್‌ ಅವರಿಗೆ ಝಡ್‌ಪ್ಲಸ್‌ ಭದ್ರತೆ ಇದೆ. ಅವರು ಆಗಮಿಸುವ ಎರಡು ದಿನದ ಮೊದಲೇ ಭದ್ರತಾ ಪಡೆ ಮಠದ ಮೇಲೆ ನಿಗಾ ಇಟ್ಟಿತ್ತು. ಭಾಗವತ್‌ ಅವರು ತಂಗುವ ಕೊಠಡಿಯ ಸ್ನಾನದ ಕೋಣೆಯ ಕಿಟಕಿಗೆ ಗುಬ್ಬಚ್ಚಿ ಗೂಡು ಕಟ್ಟಿದ್ದು ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು. ಗೀಜರ್‌ಗೆ ಪಕ್ಷಿ ತಾಗಿ ಶಾರ್ಟ್‌ ಸರ್ಕಿಟ್‌ ಆಗುವ ಅಪಾಯವನ್ನು ಅವರು ಸ್ವಾಮೀಜಿಗೆ ವಿವರಿಸಿದ್ದರು.

ಗುಬ್ಬಚ್ಚಿ ಮರಿಗಳಿಗೆ ಜನ್ಮ ನೀಡಿರುವುದನ್ನು ಗಮನಿಸಿದ ಸ್ವಾಮೀಜಿ, ಎಲೆಕ್ಟ್ರಿಕಲ್‌ ಎಂಜಿನಿಯರ್‌ ಸಲಹೆ ಪಡೆದು ಶಾರ್ಟ್‌ ಸರ್ಕಿಟ್‌ ಆದಾಗ ಅಪಾಯ ಸಂಭವಿಸದಂತಹ ಉಪಕರಣ ಅಳವಡಿಸಿದರು. ಇದರಿಂದ ಗುಬ್ಬಚ್ಚಿಯ ಗೂಡು ಉಳಿಯಿತು.

ರಾಗಿ ಮುದ್ದೆ ಸವಿದ ಭಾಗವತ್‌

ನಸುಕಿನಲ್ಲಿ ನಾಲ್ಕು ಗಂಟೆಗೆ ಎದ್ದ ಭಾಗವತ್ ಅವರು ಒಂದು ಗಂಟೆ ಯೋಗ, ಧ್ಯಾನ ಮಾಡಿದರು. ಮಳೆಯ ಕಾರಣಕ್ಕೆ ವಾಯುವಿಹಾರಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಹಾಲು ಸೇವಿಸಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಪತ್ರಿಕೆ, ಪುಸ್ತಕ ಓದಿ ಉ‍ಪಾಹಾರ ಸೇವಿಸಿದರು.

ಬೆಳಿಗ್ಗೆ 10.30ಕ್ಕೆ ಆರಂಭವಾದ ಸಂವಾದ ಮಧ್ಯಾಹ್ನ 1ರವರೆಗೆ ನಡೆಯಿತು. ಮಧ್ಯಾಹ್ನದ ಭೋಜನಕ್ಕೆ ರಾಗಿ ಮುದ್ದೆ ಸವಿದರು. ಅರ್ಧ ಗಂಟೆ ವಿಶ್ರಾಂತಿ ಪಡೆದು ಮಧ್ಯಾಹ್ನ 3.40ಕ್ಕೆ ಮಠದಿಂದ ಬೆಂಗಳೂರಿಗೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT