ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಗ್ರಾಮೀಣ ಜನರ ಖರ್ಜೂ-: ನಿರ್ಲಕ್ಷ್ಯಕ್ಕೊಳಗಾದ ಈಚಲು

ಈಚಲು ಗರಿಯಿಂದ ತಯಾರಿಸುತ್ತಿದ್ದ ಚಾಪೆ, ಪೊರಕೆ, ಅಲಂಕಾರಿಕ ವಸ್ತುಗಳೆಲ್ಲವೂ ಈಗ ನೆನಪು ಮಾತ್ರ
Last Updated 17 ಜುಲೈ 2021, 6:08 IST
ಅಕ್ಷರ ಗಾತ್ರ

ಹಿರಿಯೂರು: ‘ಟಿ.ಬಿ ಗೊಲ್ಲರಹಟ್ಟಿಯಿಂದ ಮಸ್ಕಲ್ ಗ್ರಾಮದ ಶಾಲೆಗೆ ನಡೆದು ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಪರಕೆ, ಕವಳಿ, ಕಾರೆ, ಬೋರೆ, ಈಚಲು ಹಣ್ಣುಗಳನ್ನು ಹುಡುಕಿ, ತಿಂದು, ಒಂದಿಷ್ಟನ್ನು ಪುಸ್ತಕದ ಚೀಲಕ್ಕೆ ಹಾಕಿಕೊಂಡು ಹೋಗುವ ವೇಳೆಗೆ ತಡವಾಗಿ ಮೇಷ್ಟ್ರ ಹತ್ತಿರ ಹಣ್ಣಿನ ರುಚಿ ಮಾಸುವ ರೀತಿ ಬೆತ್ತದ ರುಚಿ ನೋಡಿದ್ದುಂಟು. ಈಗಿನ ಪೀಳಿಗೆಗೆ ಈ ಹಣ್ಣುಗಳು ಕನಸಾಗಿವೆ...’

ಹಿರಿಯೂರು ತಾಲ್ಲೂಕಿನ ಟಿ.ಬಿ ಗೊಲ್ಲರಹಟ್ಟಿಯ 60 ವರ್ಷದ ಮಹಲಿಂಗಪ್ಪ ನೆನಪಿಸಿಕೊಂಡರು.

ಮರೆಯಾದ ಈಚಲು: ‘ಈಚಲ ಹಣ್ಣನ್ನು ಗ್ರಾಮೀಣ ಪ್ರದೇಶದ ಬಡವರ ಖರ್ಜೂರ ಎಂದು ಕರೆಯಲಾಗುತ್ತದೆ. ಸುಗ್ಗಿ ಬಂತೆಂದರೆ ಮುಳ್ಳನ್ನೂ ಲೆಕ್ಕಿಸದೇ ಹಣ್ಣು ಕೀಳುತ್ತಿದ್ದೆವು. ಹಣ್ಣಿನಲ್ಲಿ ಪೌಷ್ಟಿಕತೆ ಹೆಚ್ಚು ಎಂದು ನಮ್ಮ ಮೇಷ್ಟ್ರು ಹೇಳುತ್ತಿದ್ದರು. ಹಿರಿಯೂರು ತಾಲ್ಲೂಕಿನ ಮಸ್ಕಲ್, ಕಸ್ತೂರಿರಂಗಪ್ಪನಹಳ್ಳಿ, ವೇದಾವತಿ ಮತ್ತು ಸುವರ್ಣಮುಖಿ ನದಿಗಳ ಪಾತ್ರದಲ್ಲಿ ಸಾವಿರಾರು ಈಚಲು ಮರಗಳಿದ್ದವು. ನೂರಾರು ಕುಟುಂಬಗಳು ಸೇಂದಿ ಇಳಿಸುವ ಮೂಲಕ ಬದುಕು ನಡೆಸುತ್ತಿದ್ದವು. ಡಿಸ್ಟಿಲರಿಗಳು ಬಂದ ನಂತರ ಸೇಂದಿ ಇಳಿಸುವುದಕ್ಕೆ ನಿಷೇಧ ಹೇರಲಾಯಿತು. ಈಚಲು ಗರಿಯಿಂದ ತಯಾರಿಸುತ್ತಿದ್ದ ಚಾಪೆ, ಪೊರಕೆ, ಅಲಂಕಾರಿಕ ವಸ್ತುಗಳೆಲ್ಲವೂ ಈಗ ನೆನಪು ಮಾತ್ರ’ ಎನ್ನುತ್ತಾರೆ ಮಹಲಿಂಗಪ್ಪ.

ಪುರಾಣದ ಹಿನ್ನೆಲೆ: ‘ವಸಿಷ್ಠ ಮಹರ್ಷಿಗಳು ತೆಂಗಿನ ಮರವನ್ನು ಸೃಷ್ಟಿಸಿದ್ದರಂತೆ.ಅವರನ್ನು ವಿರೋಧಿಸುತ್ತಿದ್ದ ವಿಶ್ವಾಮಿತ್ರ ಮುನಿ ಈಚಲು ಮರ ಸೃಷ್ಟಿ ಮಾಡಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಸೂರ್ಯೋದಯ ಆಗುವುದರಒಳಗೆ ಈಚಲು ಮರದಿಂದ ಇಳಿಸುತ್ತಿದ್ದ ‘ನೀರಾ’ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಿದ್ದರು. ಮತ್ತೆ ಕೆಲವರು ಈಚಲು ಮರದಿಂದ ಏನೇ ತೆಗೆದರೂ ಅದು ಹೆಂಡವೇ ಎಂದು ವಾದಿಸುತ್ತಿದ್ದರು. ನಾವೆಲ್ಲ ಹಣ್ಣು, ಅದರ ಗರಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆವು. ಮಾಗಿದ ಹಣ್ಣು ತಿನ್ನಲು ಬಲು ರುಚಿ. ಮುಂಗಾರು ಮಳೆ ಸಮಯದಲ್ಲಿ ಕಾಯಿಕಟ್ಟಿ,ಹಳದಿ ಬಣ್ಣದಿಂದ, ಕಡುನಸುಗೆಂಪು ಬಣ್ಣಕ್ಕೆ ತಿರುಗಿದ ಹಣ್ಣಿನ ರುಚಿ ಸವಿದವರೇ ಬಲ್ಲರು. ಈಚಲು ಗಿಡಗಳನ್ನು ಈಗ ಯಾರೂ ಬೆಳೆಸುವುದಿಲ್ಲ. ಜಮೀನಿನಅಂಚಿನಲ್ಲಿ, ಅರಣ್ಯ, ಹಳ್ಳ–ನದಿ ಪಾತ್ರಗಳಲ್ಲಿ ಮಾತ್ರ ಈಚಲು
ಮರಗಳು ಉಳಿದಿವೆ’ ಎನ್ನುತ್ತಾರೆ ಅವರು.

‘ಈಚಲು ಮರದಲ್ಲಿನ ಹಣ್ಣಿನ ಗೊನೆಯತ್ತ ಕಲ್ಲು ಬೀಸಿ ಹಣ್ಣನ್ನು ಉದುರಿಸಿ, ನಾವೂ ತಿಂದು, ಗೆಳೆಯರಿಗೂ ಕೊಡುತ್ತಿದ್ದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅದೆಷ್ಟೋ ಬಾರಿ ಹಣ್ಣು ತಿನ್ನಲು ಬರಿಗಾಲಲ್ಲಿ ಹೋಗಿ (ಆಗ ಚಪ್ಪಲಿ ಹಾಕುತ್ತಿದ್ದವರೇ ಕಡಿಮೆ) ಮುಳ್ಳು ತುಳಿದು ಪೋಷಕರಿಂದ ಬೈಸಿಕೊಂಡಿದ್ದುಂಟು. ಕೆಲವರು ಈಚಲು ಹಣ್ಣನ್ನು ಶಾಲೆಗಳ ಹತ್ತಿರ ಮಾರಾಟ ಮಾಡಲು ಬರುತ್ತಿದ್ದರು. ಈಗ ಅರಣ್ಯ ಪ್ರದೇಶದಲ್ಲಿ ಸಿಗುವ ಯಾವ ಹಣ್ಣುಗಳೂ ಕಣ್ಣಿಗೆ ಬೀಳುವುದಿಲ್ಲ. ನಿಸರ್ಗ ಕೊಡುತ್ತಿದ್ದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಂದ ಯುವಪೀಳಿಗೆ ದೂರವಾಗಿದೆ ಎಂಬ ಬೇಸರವಿದೆ’ ಎಂದು ಮಹಲಿಂಗಪ್ಪಹೇಳುತ್ತಾರೆ.

ಈಚಲು ಮರ ಕಡಿದು ಜೈಲಿಗೆ: ‘ಹಿರಿಯೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಗೋವಿಂದಸ್ವಾಮಿ ನಾಯ್ಡು ಅವರು 1939ರಲ್ಲಿ ಸೇಂದಿ ನಿಷೇಧಕ್ಕೆ ಆಗ್ರಹಿಸಿ, ಈಚಲು ಮರ ಕಡಿದಿದ್ದರಿಂದ ಅವರನ್ನು ಬಂಧಿಸಿ ಬೆಂಗಳೂರಿನ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಮರದಲ್ಲಿಯ ಮಾಗಿದ ಹಣ್ಣುಗಳು ಪಕ್ಷಿಗಳಿಗೆ, ನೆಲಕ್ಕೆ ಉದುರಿದ ಹಣ್ಣುಗಳು ಕುರಿ–ಮೇಕೆಗಳಿಗೆ ಇಂದಿಗೂ ಉತ್ತಮ ಆಹಾರ. ಈಚಲು ಹಣ್ಣು ಒಳಗೊಂಡಂತೆ ನೈಸರ್ಗಿಕವಾಗಿ ಸಿಗುವ ಹಣ್ಣುಗಳ ಪರಿಚಯವನ್ನು ಇಂದಿನ ಪೀಳಿಗೆಗೆ ಮಾಡಿಸಿಕೊಡಬೇಕಾದ ಅಗತ್ಯವಿದೆ’ ಎನ್ನುತ್ತಾರೆಮಹಲಿಂಗಪ್ಪ.

‘ಹಿಂದೆ ರಾಜ್ಯದ ಎಲ್ಲ ಭಾಗಗಳಲ್ಲಿ ಈಚಲು ಮರದಿಂದ ಸೇಂದಿ ತೆಗೆಯಲು ಅನುಮತಿ ಇತ್ತು. ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಸೇಂದಿ ಇಳಿಸಲು ಪರವಾನಗಿ ಇದ್ದು, ಉಳಿದ ಕಡೆ ನಿಷೇಧವಿದೆ. ಈಚಲು ವನಗಳು ಸಂರಕ್ಷಿತ ಎಂದು ಘೋಷಿಸಲ್ಪಟ್ಟಿದ್ದು, ನೈಸರ್ಗಿಕವಾಗಿ ಉಳಿದುಕೊಂಡಿವೆ’ ಎನ್ನುತ್ತಾರೆ ಅಬಕಾರಿ ಇಲಾಖೆ ಎಸ್ಐ ಕರಿಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT