ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಮನೆ ಸುತ್ತ ಭದ್ರತೆ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೂಚನೆ

Last Updated 26 ಮಾರ್ಚ್ 2020, 16:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ತಗುಲಿದ ಶಂಕೆಯ ಮೇರೆಗೆ ‘ಕ್ವಾರಂಟೈನ್‌’ಗೆ ಒಳಗಾಗಿರುವವರ ಮನೆಯ ಸುತ್ತ ಪೊಲೀಸ್‌ ಭದ್ರತೆ ನಿಯೋಜಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಶಂಕಿತರು ಮನೆಯಿಂದ ಹೊರಗೆ ಬರದಂತೆ ತಡೆಯಲು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, ‘ಕ್ವಾರಂಟೈನ್‌ಗೆ ಒಳಗಾದವರು ಮನೆಯಿಂದ ಹೊರಬರುತ್ತಿರುವ ಸಂಬಂಧ ದೂರುಗಳು ಬರುತ್ತಿವೆ. ಇದರಿಂದ ರೋಗ ಇನ್ನಷ್ಟು ಹರಡುವ ಸಾಧ್ಯತೆ ಹೆಚ್ಚು. ಇಂತಹ ಮನೆಗಳ ಮೇಲೆ ತೀವ್ರ ನಿಗಾ ಇಡಿ’ ಎಂದು ಹೇಳಿದರು.

‘ಜಿಲ್ಲೆಗೆ 177 ಜನರು ವಿದೇಶದಿಂದ ಮರಳಿದ್ದಾರೆ. 59 ಜನರ ರಕ್ತ, ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 28 ವರದಿಗಳು ಬಂದಿದ್ದು, ಒಬ್ಬರಲ್ಲಿ ಮಾತ್ರ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ 24 ಜನರ ವೈದ್ಯಕೀಯ ವರದಿ ಬರಬೇಕಿದೆ. 75 ಜನರು 14 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಸೋಂಕು ಕಾಣಿಸಿಕೊಂಡ ಭೀಮಸಮುದ್ರದ ಸುತ್ತ ನಿಗಾ ಇಡಲಾಗಿದೆ’ ಎಂದು ಹೇಳಿದರು.

‘ಕೋವಿಡ್‌–19 ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹ 9 ಕೋಟಿ ಲಭ್ಯವಿದೆ. ವೆಂಟಿಲೇಟರ್‌, ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ಕಿಟ್‌ಗಳ ಪೂರೈಕೆ ಮಾಡಲಾಗುತ್ತಿದೆ. ಸೋಂಕು ಪೀಡಿತರ ಚಿಕಿತ್ಸೆಗೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆಯ ಪಕ್ಕದ ನೂತನ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಳ್ಳಲಿದೆ’ ಎಂದು ಹೇಳಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT