ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಪೀಠ ಪ್ರವಾಸಿ ತಾಣವಾಗಿಸಲು ಕ್ರಮ: ಪುರುಷೋತ್ತಮಾನಂದ ಪುರಿ ಸ್ವಾಮೀಜಿ

ಪಟ್ಟಾಭಿಷೇಕ ಮಹೋತ್ಸವದಲ್ಲಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ
Last Updated 11 ಫೆಬ್ರುವರಿ 2022, 4:23 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಭಗೀರಥ ಪೀಠವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗುವುದು. ಭಗೀರಥ ಪೀಠದ ಮಠಾಧೀಶರು ಹಾಗೂ ಭಗೀರಥ ಮಹರ್ಷಿಯ ಕಥೆಯನ್ನು ಬಿಂಬಿಸುವ ಒಂದು ಉದ್ಯಾನ ನಿರ್ಮಿಸಲಾಗುವುದು ಎಂದು ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ 23ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಭಗೀರಥ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಪರಂಪರೆಯ 12ನೇ ಮಠಾಧೀಶರಾಗಿದ್ದ ಲೇಪಾಕ್ಷಿ ಸ್ವಾಮೀಜಿಯವರ ಆಶಯದಂತೆ ಭಗೀರಥ ಪೀಠದಲ್ಲಿ ವಿದ್ಯಾದಾನ, ಸಾಮೂಹಿಕ ವಿವಾಹ, ಭಕ್ತರಿಗೆ ದಾಸೋಹದಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಭಗೀರಥ ಮಹರ್ಷಿಗಳ ಜೀವನ ಚರಿತ್ರೆ ಹಾಗೂ ಶ್ರೀಮಠಕ್ಕೆ ದುಡಿದವರ ಕಥೆ ಬಿಂಬಿಸುವ ಉದ್ಯಾನ, ಬನಶಂಕರಿ ದೇವಿಯ ಕಲ್ಲಿನ ರಥ ಮಾಡಿಸಲಾಗುವುದು ಎಂದು ಹೇಳಿದರು.

12 ಮಠಾಧೀಶರು ಮಠ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ಲೇಪಾಕ್ಷಿ ಸ್ವಾಮೀಜಿಗಳ ಸಂಕಲ್ಪದಂತೆ ತುಂಗಭದ್ರಾ ಕಾಲುವೆಯಿಂದ ನೀರಿನ ತೊಂದರೆ ನಿವಾರಣೆಯಾಗಿದೆ. ಭಗೀರಥ ದೇವಾಲಯವೂ ನಿರ್ಮಾಣವಾಗಿದೆ. ಶಿಕ್ಷಣ ಸಂಸ್ಥೆಗಳ ನಿರ್ಮಾಣವೂ ಆಗಿದೆ ಎಂದರು.

ಪ್ರತಿಯೊಬ್ಬರೂ ಮಾತಾ, ಪೀತೃ ಹಾಗೂ ಗುರುಗಳ ಋಣ ತೀರಿಸಬೇಕು. ಆ ನಿಟ್ಟಿನಲ್ಲಿ ಈ ರೀತಿಯಾಗಿ ಸಮಾಜ ಸೇವೆ ಕೈಗೊಳ್ಳಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದ ಅಂಗವಾಗಿಬಾಗೂರು ಹಾಗೂ ಅರಳಿಹಳ್ಳಿ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಹಿಳೆಯರಿಂದ ಕಲಶಗಳ ಮೆರವಣಿಗೆ, ಪೂರ್ಣಾಹುತಿ ನಡೆಯಿತು. ನಂತರ ಗಂಗಾ, ಯಮುನಾ, ತುಂಗಭದ್ರಾ, ಹೇಮಾವತಿ, ಕಾವೇರಿ, ಕಪಿಲ, ಗೋದಾವರಿ ನದಿಗಳಿಂದ ತಂದ ಜಲದಿಂದ ಭಗೀರಥ ಹಾಗೂ ಗಣಪತಿ ಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು.

ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಶಾರೋಹಣ ನಡೆದ ನಂತರ ವೇದಿಕೆ ಕಾರ್ಯಕ್ರಮಗಳು ಜರುಗಿದವು. ಬೀರೂರಿ‌ನ ಆಗಮಿಕರಾದ ರಾಜಗೋಪಾಲಾಚಾರ್ ಹಾಗೂ ಅರ್ಚಕ ವೆಂಕಟೇಶ್ ಅವರ ನೇತೃತ್ವದಲ್ಲಿ ಸ್ವಾಮೀಜಿ ಅವರ ಕಿರೀಟಧಾರಣೆ ನೆರವೇರಿಸಲಾಯಿತು. ಭಕ್ತರು ಜಯಘೋಷ ಕೂಗಿದರು.

ಭಗೀರಥ ಕ್ಯಾಲೆಂಡರ್ ಹಾಗೂ ಪಾಕೆಟ್ ಡೈರಿ ಬಿಡುಗಡೆ ಮಾಡಲಾಯಿತು. ರಕ್ತದಾನ ಶಿಬಿರ, ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು. ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್,ಮಲ್ನಾಡ್ ನಾಗರಾಜ್, ಪಿ.ಎ. ಮಂಜುನಾಥ್, ಚಿತ್ರದುರ್ಗ ಜಿಲ್ಲಾ ಸಂಘದ ಉಪಾಧ್ಯಕ್ಷ ರವಿ, ಕೋಲಾರದ ಜಯರಾಮ್, ತುಮಕೂರಿನ ತಿಪ್ಪೇಸ್ವಾಮಿ ಸೇರಿ ಸಮಾಜದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT