ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳಕ್ಕೆ ಕುಸಿದ ಸುಗಂಧರಾಜ ಹೂವಿನ ಬೆಲೆ

ರಸ್ತೆ ಬದಿಗೆ ಹೂವು ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು
Last Updated 2 ನವೆಂಬರ್ 2021, 5:38 IST
ಅಕ್ಷರ ಗಾತ್ರ

ಹಿರಿಯೂರು: ‘ದಸರಾ ಹಬ್ಬದ ಸಮಯದಲ್ಲಿ ಒಂದು ಕೆ.ಜಿ ಸುಗಂಧರಾಜ ಹೂವನ್ನು ಊರಿಗೇ ಬಂದು ₹ 80ರಿಂದ ₹ 150ಕ್ಕೆ ಖರೀದಿಸಿದ್ದರು. ಈಗ ₹ 2ರಿಂದ ₹3ಕ್ಕೆ ಕೇಳುತ್ತಿದ್ದಾರೆ. ದಿಕ್ಕು ತೋಚದೇ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ರಸ್ತೆ ಬದಿಗೆ ಸುರಿದಿದ್ದೇವೆ...’

ಸುಮಾರು ₹ 80 ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಸುಗಂಧರಾಜ ಪುಷ್ಪ ಕೃಷಿ ಮಾಡುತ್ತಿದ್ದ ಹಿರಿಯೂರು ತಾಲ್ಲೂಕಿನ ಬಳಗಟ್ಟ ಗ್ರಾಮದ ರೈತ ಮೂಡ್ಲಪ್ಪ ಅವರು ಹೂವಿನ ಬೆಳೆಗಾರರ ಸಂಕಷ್ಟ ತೋಡಿಕೊಂಡ ಪರಿಯಿದು.

‘ನಮ್ಮೂರಿನಲ್ಲಿ ಸುಮಾರು 30 ರೈತರು ಒಂದರಿಂದ ಮೂರು ಎಕರೆಗಳವರೆಗೆ ಸುಗಂಧರಾಜ ಹೂವು ಹಾಕಿದ್ದೆವು. ಕನಿಷ್ಠ 50 ಎಕರೆಯಲ್ಲಿ ಹೂವಿನ ಬೆಳೆ ಇದೆ. ದಸರಾ ಹಬ್ಬದ ಹಿಂದೆ–ಮುಂದೆ ಒಂದು ವಾರ ಒಳ್ಳೆಯ ದರ ಸಿಕ್ಕಿತ್ತು. ತುಮಕೂರಿನಿಂದ ಮಂಡಿಯವರು ಟೆಂಪೊಗಳಲ್ಲಿ ಊರಿಗೇ ಬಂದು ಹೂವು ಖರೀದಿಸಿ ಒಯ್ಯುತ್ತಿದ್ದರು. ಆರೇಳು ದಿನಗಳಿಂದ ಹೂವಿನ ಬೇಡಿಕೆ ಕುಸಿದಿದೆ ಎಂದು ₹ 2ರಿಂದ ₹ 3ಕ್ಕೆ ಕೇಳುತ್ತಿದ್ದಾರೆ. ಇಷ್ಟು ಕಡಿಮೆ ದರಕ್ಕೆ ಹೇಗೆ ಮಾರಾಟ ಮಾಡಲಿ’ ಎಂದು ಅವರು ನೋವು ವ್ಯಕ್ತಪಡಿಸಿದರು.

‘ಬೆಳಿಗ್ಗೆ 8ಕ್ಕೆ ಟೆಂಪೊ ಊರಿಗೆ ಬರುತ್ತದೆ. ನಾವು 6ರೊಳಗೆ ಕೂಲಿಯವರನ್ನು ಕರೆದುಕೊಂಡು ಹೋಗಿ ಹೂವು ಕಿತ್ತು ತರಬೇಕು. ಒಂದು ಎಕರೆಯಲ್ಲಿನ ಹೂವು ಬಿಡಿಸಲು ಕನಿಷ್ಠ ನಾಲ್ಕು ಕೂಲಿಯವರು ಬೇಕು. ಒಬ್ಬೊಬ್ಬರಿಗೆ ₹ 250 ಕೂಲಿ ಕೊಡಬೇಕು. ಎಕರೆಗೆ ದಿನವೊಂದಕ್ಕೆ 20–25 ಕೆ.ಜಿ ಹೂ ಸಿಗುತ್ತದೆ. ₹2ರಿಂದ ₹3ಕ್ಕೆ ಕೆ.ಜಿ.ಯಂತೆ ಕೊಟ್ಟರೆ ₹60ರಿಂದ ₹ 70 ಸಿಗುತ್ತದೆ. ನಾವು ಕೊಡುವ ಕೂಲಿಯೇ ದಿನಕ್ಕೆ ₹ 1,000 ಆಗುತ್ತದೆ. ಹೀಗಾಗಿ ಬಹುಪಾಲು ರೈತರು ಹೂವು ಕೀಳುವುದನ್ನೇ ಬಿಟ್ಟಿದ್ದಾರೆ. ಸೋಮವಾರ ಬೇಡಿಕೆ ಇರುತ್ತದೆ ಎಂದು ಹೂವು ಕಿತ್ತ ನಾವೆಲ್ಲ ನಿರೀಕ್ಷಿತ ದರ ಸಿಗದ ಕಾರಣ ಬೀರೇನಹಳ್ಳಿ ಸಮೀಪ ಪಾವಗಡ–ತರೀಕೆರೆ ರಸ್ತೆ ಬದಿಗೆ ಸುರಿದಿದ್ದೇವೆ’ ಎಂದು ಮೂಡ್ಲಪ್ಪ ಹೇಳಿದರು.

‘ಹಿರಿಯೂರಿನ ಟಿಎಸ್‌ಟಿ ವಾಣಿಜ್ಯ ಸಂಕೀರ್ಣದಲ್ಲಿ ಹೂವಿನ ಸಗಟು ವ್ಯಾಪಾರ ನಡೆಯುತ್ತದೆ. ಅಲ್ಲಿಯೂ ಇದೇ ದರವಿದೆ. ಸುಗಂಧರಾಜ ಹೂವನ್ನು ಹಾರ ತಯಾರಿಸಲು ಹೆಚ್ಚು ಬಳಸುತ್ತಾರೆ. ಜಾತ್ರೆ, ವಾರದ ದಿನಗಳಲ್ಲಿ ಬೇಡಿಕೆ ಹೆಚ್ಚು. ಅದೇಕೊ ಕೊರೊನಾ ಇಲ್ಲದಿದ್ದರೂ ಹೂವಿಗೆ ಬೇಡಿಕೆ ಬಂದಿಲ್ಲ’ ಎಂದು ಇನ್ನೊಬ್ಬ ಹೂವಿನ ಬೆಳೆಗಾರ ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

.....

ಸುಗಂಧರಾಜ ಅಷ್ಟೆ ಅಲ್ಲ, ದಸರಾ ಹಬ್ಬದಲ್ಲಿ ₹ 80– ₹ 90 ಇದ್ದ ಪ್ರತಿ ಮಾರು ಸೇವಂತಿಗೆ ಹೂವಿನ ದರ ಈಗ ₹ 8ರಿಂದ ₹ 10ಕ್ಕೆ ಇಳಿದಿದೆ. ಸುಗಂಧರಾಜ ಹೂವಿಗೆ ಹೊಲದಿಂದ ಊರೊಳಗೆ ಟೆಂಪೊ ಬರುವ ಜಾಗಕ್ಕೆ ಒಯ್ಯುವ ಕೂಲಿಯೂ ಸಿಗುತ್ತಿಲ್ಲ.
– ಕೆ.ಟಿ. ತಿಪ್ಪೇಸ್ವಾಮಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT