ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ ಕೈಬಿಡಲು ಒಪ್ಪದ ಸ್ವಾಮೀಜಿ: ಮನವೊಲಿಕೆಗೆ ಪ್ರಯತ್ನಿಸಿದ ಸಚಿವ ನಿರಾಣಿ

ಮನವೊಲಿಕೆಗೆ ಪ್ರಯತ್ನಿಸಿದ ಸಚಿವ ಮರುಗೇಶ ನಿರಾಣಿ ನೇತೃತ್ವದ ನಿಯೋಗ
Last Updated 4 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ‘ಎ’ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ನಡೆಸುತ್ತಿರುವ ಪಾದಯಾತ್ರೆ ಕೈಬಿಡುವಂತೆ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವಚನಾನಂದ ಸ್ವಾಮೀಜಿ ಮನವೊಲಿಸುವ ಸರ್ಕಾರದ ಪ್ರಯತ್ನ ಗುರುವಾರ ಸಫಲವಾಗಲಿಲ್ಲ.

ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹಾಗೂ ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ ನೇತೃತ್ವದ ನಿಯೋಗ ಇಬ್ಬರು ಸ್ವಾಮೀಜಿಗಳೊಂದಿಗೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿತು. ಮೀಸಲಾತಿ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಯನ ವರದಿ ಪಡೆಯುವುದಾಗಿ ಮುಖ್ಯಮಂತ್ರಿ ನೀಡಿದ ಆಶ್ವಾಸನೆಗೆ ಸಂತಸ ವ್ಯಕ್ತಪಡಿಸಿದ ಸ್ವಾಮೀಜಿಗಳು, ಪಾದಯಾತ್ರೆಯನ್ನು ಬೆಂಗಳೂರಿನವರೆಗೆ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

‘ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದಾಗಿ ಮುಖ್ಯಮಂತ್ರಿ ಕೈಗೊಂಡ ನಿರ್ಧಾರವನ್ನು ಪಂಚಮಸಾಲಿ ಪೀಠ ಸ್ವಾಗತಿಸುತ್ತದೆ. ಕಾನೂನಾತ್ಮಕ ಶಕ್ತಿ ತುಂಬುವ ಕಾರ್ಯ ಆನಂದವನ್ನುಂಟು ಮಾಡಿದೆ. ಹೋರಾಟಕ್ಕೆ ಸಿಕ್ಕ ಮೊದಲ ಯಶಸ್ಸು ಎಂದೇ ಭಾವಿಸುತ್ತೇವೆ. ಆದರೆ, ಪಾದಯಾತ್ರೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಫೆ.15ರಂದು ಬೆಂಗಳೂರಿನಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಅಧ್ಯಯನ ವರದಿ ಪಡೆದು, ಮೀಸಲಾತಿ ಸೌಲಭ್ಯ ಕಲ್ಪಿಸಲು ಇನ್ನೂ ಅವಕಾಶವಿದೆ. ಕಾಲಮಿತಿಯೊಳಗೆ ಆದೇಶ ಪತ್ರ ಕೈಸೇರುವ ನಿರೀಕ್ಷೆ ಇದೆ. ಸಮುದಾಯದ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾನಸಿಕವಾಗಿ ಸಜ್ಜಾಗಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು.

ನಿರಾಣಿ–ಕಾಶೆಪ್ಪನವರ ವಾಗ್ವಾದ

ಸಚಿವ ಮುರುಗೇಶ ನಿರಾಣಿ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನಡುವೆ ವಾಗ್ವಾದ ನಡೆಯಿತು. ಸಚಿವರ ನೇತೃತ್ವದ ನಿಯೋಗ ಹಾಕಿದ ಹೂ ಹಾರ ಹಾಗೂ ಶಾಲನ್ನು ಕಾಶೆಪ್ಪನವರ ಕಿತ್ತು ಹಾಕಿದರು.

ಸಚಿವರ ನಿಯೋಗ ಸ್ವಾಮೀಜಿ ಸೇರಿದಂತೆ ಪಾದಯಾತ್ರೆಯಲ್ಲಿ ಬಂದಿದ್ದ ನಾಯಕರನ್ನು ಸನ್ಮಾನಿಸಿತು. ಇದರಿಂದ ಸಿಟ್ಟಿಗೆದ್ದ ವಿಜಯಾನಂದ ಕಾಶಪ್ಪನವರ, ‘ನಿಮ್ಮೊಂದಿಗೆ ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಸಮಯ ಹಾಳು ಮಾಡಬೇಡಿ. ಮೀಸಲಾತಿ ನೀಡಿ’ ಎಂದು ಹಾರ ಕಿತ್ತುಹಾಕಿದರು. ಇದು ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.

‘ಸ್ವಾಮೀಜಿ ಬಿಸಿಲಲ್ಲಿ ಓಡಾಡಿದರೆ ನಮಗೂ ನೋವಾಗುತ್ತದೆ. ಬೇರೆ ಸಮುದಾಯದ ಶಾಸಕರಿಗೆ ಹೋಲಿಕೆ ಮಾಡಿದರೆ ಪಂಚಮಸಾಲಿಗಳಿಗೆ ನಿಜಕ್ಕೂ ಅನ್ಯಾಯವಾಗಿದೆ. ಆದರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ವಿರೋಧವಿದೆ’ ಎಂದು ನಿರಾಣಿ ಅವರು‌ ಹೆಸರು ಉಲ್ಲೇಖಿಸದೆ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT