ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆಯಲ್ಲಿ ‘ತರಳಬಾಳು ಹುಣ್ಣಿಮೆ’ ಸಂಭ್ರಮ

ಇಂದಿನಿಂದ ಮೂರು ದಿನಗಳ ಕಾಲ ಮಹೋತ್ಸವ: ಬೃಹನ್ಮಠ ಸಜ್ಜು, ಭಕ್ತರಿಂದ ದೇಣಿಗೆಯ ಮಹಾಪೂರ
Last Updated 14 ಫೆಬ್ರುವರಿ 2022, 5:30 IST
ಅಕ್ಷರ ಗಾತ್ರ

ಸಿರಿಗೆರೆ: ಕೊಟ್ಟೂರಿನಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಈ ಬಾರಿ ಸಿರಿಗೆರೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಭಕ್ತರ ಆಗಮನಕ್ಕೆ ಬೃಹನ್ಮಠದ ಗುರುಶಾಂತೇಶ್ವರ ಭವನದ ಮುಂಭಾಗದ ವೇದಿಕೆ ಸಜ್ಜಾಗಿದೆ.

ಹುಣ‍್ಣಿಮೆ ಕಾರ್ಯಕ್ರಮದ ಅಂಗವಾಗಿ ಕೊನೆಯವರೆಗೂ ಬೆಳಿಗ್ಗೆ 6.30ಕ್ಕೆ ಸ್ಥಳೀಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಶಿವಮಂತ್ರ ಲೇಖನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ. 16ರಂದು ಮಧ್ಯಾಹ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವವು ಶ್ರೀಮಠದ ಬಿರುದಾವಳಿ ಹಾಗೂ ಜಾನಪದ ಕಲಾಂಡಗಳಿಂದ ಮೇಳೈಸಲಿದೆ. ಧ್ವಜಾರೋಹ, ನಂತರ ಸಿಂಹಾಸನಾರೋಹಣ ನಡೆಯಲಿದೆ.

ಗುರುಶಾಂತೇಶ್ವರ ಭವನದ ವೇದಿಕೆಯ ಮುಂಭಾಗದಲ್ಲಿ ಸಮಾರಂಭ ವೀಕ್ಷಿಸಲು ಐದು ಸಾವಿರ ಆಸನಗಳ ಸಿದ್ಧತೆ ಮಾಡಿದ್ದು, ಮೂರು ಕಡೆಗೆ ಎಲ್‌ಇಡಿ ಪರದೆ ಹಾಕಲಾಗಿದೆ. ಸಿಂಹಾಸನಾರೋಹಣ ದಿವಸ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ.

ಹಿರಿಯ ಗುರುಗಳಾದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕಾಲದಲ್ಲಿ ಮಹಾರಾಜರು ಹಾಗೂ ಗಣ್ಯರ ‘ಚಿತ್ರಪಟಲ’ ಆಕರ್ಷಿಸಲಿದೆ. ಕಾರ್ಯಕ್ರಮದ ಆವರಣದಲ್ಲಿ ಶಿವಧ್ವಜಗಳ ಕಮಾನುಗಳ ಸಿದ್ಧತೆ ನಡೆದಿದೆ. ಸ್ಥಳೀಯ ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ಸುತ್ತಲಿನ ಭಕ್ತರು ಸಿದ್ಧತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪ್ರಸಾದದ ಮೆನು: ಪಾಯಸ, ಲಾಡು, ಅನ್ನ, ಸಾಂಬಾರ್, ಉಪ್ಪಿನಕಾಯಿ, ಕಡಲೆಕಾಳು ಹಾಗೂ ಬದನೆಕಾಯಿ ಪಲ್ಯ ಭಕ್ತಾದಿಗಳಿಗೆ ರಸದೌತಣ ನೀಡಲಿದೆ. 200ಕ್ಕೂ ‌ಹೆಚ್ಚು ಪೋಲಿಸ್‍ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಭಕ್ತರಿಂದ ದೇಣಿಗೆಯ ಮಹಾಪೂರ:ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಲ್ಕುದುರೆ ಎಚ್.ಎಸ್.ಸಿದ್ದಪ್ಪ ಅವರಿಂದ 500 ಲೀಟರ್ ಅಡುಗೆ ಎಣ್ಣೆ, ಹೊಳಲ್ಕೆರೆ ತಾಲ್ಲೂಕಿನ ಭಕ್ತರಿಂದ 10 ಕ್ವಿಂಟಲ್ ಬೇಳೆ, ಭರಮಸಾಗರಎಸ್‍.ಎನ್‍.ಎಸ್. ಕನ್‌ಸ್ಟ್ರಕ್ಷನ್ ಅವರಿಂದ 25 ಕ್ವಿಂಟಲ್ ಅಕ್ಕಿ, ಸಿರಿಗೆರೆಯ ವನಜಾಕ್ಷಮ್ಮ ಆರ್.ಶಿವಮೂರ್ತಯ್ಯ ಅವರಿಂದ 15 ಕ್ವಿಂಟಲ್ ಅಕ್ಕಿ, ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್ ಅವರು 10 ಕ್ವಿಂಟಲ್ ಅಕ್ಕಿ, ಭದ್ರಾವತಿಯ ದಿ. ಕೋಮಾರನಹಳ್ಳಿ ಹಾಲಯ್ಯ ಅವರ ಮಗ ತೀರ್ಥಯ್ಯ 25 ಕ್ವಿಂಟಲ್ ಬೆಲ್ಲ, ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ಭಕ್ತರು ಉಚಿತವಾಗಿ ನವಿಲುಕೋಸು, ಗೆಡ್ಡೆಕೋಸು, ವಿವಿಧ ತರಹದ ಸೊಪ್ಪು, ನಿಂಬೆಹಣ‍್ಣು ದಾಸೋಹಕ್ಕೆ ಸಮರ್ಪಿಸಿದ್ದಾರೆ.

50 ಸಾವಿರ ಲಾಡು: ಮಹೋತ್ಸವಕ್ಕೆ ದಾವಣಗೆರೆ ಶಿವಸೈನ್ಯ ಯುವಕ ಸಂಘದಿಂದ 50 ಸಾವಿರ ಲಾಡುಗಳನ್ನು ನೀಡಲಾಗುತ್ತಿದ್ದು, ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಅದರ ತಯಾರಿ ನಡೆದಿದೆ. ಮಾಗನೂರು ಉಮೇಶಗೌಡ್ರು, ಶಶಿಧರ ಹೆಮ್ಮನಬೇತೂರು, ಲಿಂಗರಾಜು ಅಗಸನಕಟ್ಟೆ, ಕೊರಟಿಕೆರೆ ಶಿವಕುಮಾರ್, ಮೆಳ್ಳೆಕಟ್ಟೆ ಕುಮಾರ್, ಶ್ರೀನಿವಾಸ್ ಅವರು ಸಿದ್ಧವಾಗುತ್ತಿರುವ ಲಾಡುಗಳನ್ನು ವೀಕ್ಷಿಸಿದರು.

ತರಳಬಾಳು ಹುಣ್ಣಿಮೆಯಲ್ಲಿ ಇಂದು

ಗುರುಶಾಂತೇಶ್ವರ ಭವನ: ವಿಚಾರ ಗೋಷ್ಠಿ- ಕನ್ನಡ ಸಾಹಿತ್ಯ ಕಾರ್ಯಕ್ರಮ, ಉದ್ಘಾಟನೆ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಪ್ರವಚನಕಾರ ಜಿ.ಎಸ್.ನಟೇಶ್ ಅವರಿಂದ ‘ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು’ ಹಾಗೂ ದಾವಣಗೆರೆಯ ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್ ‘ಜೀವನೋತ್ಸವಕ್ಕಾಗಿ ಹಾಸ್ಯ’ ಉಪನ್ಯಾಸ ಕಾರ್ಯಕ್ರಮ, ಬೆಳಿಗ್ಗೆ 11.

ಸಭಾ ಕಾರ್ಯಕ್ರಮ: ಮುಖ್ಯಅತಿಥಿ– ಸಚಿವರಾದ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್‌ಕುಮಾರ್.

ವಿಶೇಷ ಆಹ್ವಾನಿತರು:ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಚಿತ್ರದುರ್ಗದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ.

ಸನ್ಮಾನ ಕಾರ್ಯಕ್ರಮ:ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರಿಗೆ ಸನ್ಮಾನ.

ಸಾಂಸ್ಕೃತಿಕ ಕಾರ್ಯಕ್ರಮ:ಶ್ರೀಗುರು ಪಂಚಾಕ್ಷರ ಸಂಗೀತ ವಿದ್ಯಾಲಯ ದಾವಣಗೆರೆಯಿಂದ ವಚನಗೀತೆ, ಬೇಲೂರು ನೃತ್ಯಾಂಜಲಿ ಕಲಾ ನಿಕೇತನದಿಂದ ಭರತನಾಟ್ಯ, ಕುಮುಟಾದ ನಾಗರಾಜ್ ಮತ್ತು ತಂಡದಿಂದ ಯಕ್ಷಗಾನ, ಕಲರ್ಸ್ ಕನ್ನಡ ವಾಹಿನಿಯ ‘ಎದೆ ತುಂಬಿ ಹಾಡುವೆನು’ ಗಾಯಕ ಕಲ್ಬುರ್ಗಿ ಸೂರ್ಯಕಾಂತ್ ಅವರಿಂದಗೀತಗಾಯನ.

ತರಳಬಾಳು ಕಲಾ ಸಂಘದಿಂದದ ಮಲ್ಲಕಂಬ, ಜಡೆಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜನಪದ ನೃತ್ಯ, ಒನಕೆ ಓಬವ್ವ, ಕೀಲುಕುದುರೆ ಗಾರುಡಿ ಗೊಂಬೆ ಹಾಗೂ ಡೊಳ್ಳು ಕುಣಿತ ಪ್ರದರ್ಶನ. ಸಂಜೆ 6:30ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT